ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50ರಷ್ಟು ಬಾಕಿ ಬಿಡುಗಡೆಗೆ ತಿಂಗಳ ಗಡುವು: ಗುತ್ತಿಗೆದಾರರ ಸಂಘ

ಪಾವತಿಯಾಗದಿದ್ದರೆ ರಾಜ್ಯದಾದ್ಯಂತ ಹೋರಾಟ: ಗುತ್ತಿಗೆದಾರರ ಸಂಘ
Published 13 ಅಕ್ಟೋಬರ್ 2023, 15:54 IST
Last Updated 13 ಅಕ್ಟೋಬರ್ 2023, 15:54 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿ ಇರುವ ಮೊತ್ತದಲ್ಲಿ ಶೇ 50ರಷ್ಟನ್ನು 30 ದಿನಗಳಲ್ಲಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಮೂರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ವಿವಿಧ ಇಲಾಖೆಯ ಸಚಿವರನ್ನೂ ಭೇಟಿ ಮಾಡಿದ್ದೇವೆ. ಆದರೂ ಗುತ್ತಿಗೆದಾರರ ಸಂಕಷ್ಟ ಅವರಿಗೆ ತಿಳಿಯುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ. ಕೆಂಪಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಆರ್‌ಡಿಪಿಆರ್‌ ಮತ್ತು ಬಿಬಿಎಂಪಿ ಸೇರಿದಂತೆ ಸುಮಾರು ₹20 ಸಾವಿರ ಕೋಟಿಗೂ ಅಧಿಕ ಬಿಲ್‌ ಮೊತ್ತ ಪಾವತಿಸಬೇಕಿದೆ. ಹಂತಹಂತವಾಗಿ ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದರೂ ಕ್ರಮವಾಗಿಲ್ಲ. ಹಣ ಇಲ್ಲ ಎಂದರೆ ಹೊಸ ಕಾಮಗಾರಿ ಕೈಗೊಳ್ಳಬೇಡಿ. ಬಾಕಿಯನ್ನು ಮೊದಲು ಪಾವತಿ ಮಾಡಿ ಎಂದು ಆಗ್ರಹಿಸಿದರು.

‘ಕೆಲವು ಇಲಾಖೆಗಳಲ್ಲಿ ಜ್ಯೇಷ್ಠತೆ ಆಧಾರದಲ್ಲೂ ಪಾವತಿ ಆಗುತ್ತಿಲ್ಲ. ಬಿಲ್‌ ಬಾಕಿ ಮೊತ್ತದಲ್ಲಿ ಶೇ 7ರಷ್ಟು ಪಾವತಿಸಲಾಗುತ್ತಿದೆ. ಇದರಲ್ಲೇ ಪೂರ್ಣ ಪ್ರಮಾಣದ ಶೇ 18ರಷ್ಟು ಜಿಎಸ್‌ಟಿ ಪಾವತಿಸಬೇಕು. ₹1 ಕೋಟಿ ಮೊತ್ತಕ್ಕೆ ₹7 ಲಕ್ಷ ಪಾವತಿಸುತ್ತಿದ್ದಾರೆ. ₹18 ಲಕ್ಷ ಜಿಎಸ್‌ಟಿ ಪಾವತಿಸಬೇಕು. ₹11 ಲಕ್ಷ ನಾವೆಲ್ಲಿಂದ ತರಬೇಕು’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿಯವರಿಗೆ 30 ದಿನ ಅವಕಾಶ ನೀಡಿದ್ದೇವೆ. ನಂತರ ಅವರ ಹೈಕಮಾಂಡ್‌ಗೂ ಮನವಿ ಸಲ್ಲಿಸಲಾಗುತ್ತದೆ. ಪ್ರಧಾನಮಂತ್ರಿಯವರಿಗೂ ಪತ್ರ ಬರೆಯಲಾಗುತ್ತದೆ’ ಎಂದು ಕೆಂಪಣ್ಣ ಹೇಳಿದರು.

ರಾಜ್ಯದ ಗುತ್ತಿಗೆದಾರರಿಗೆ ದೊಡ್ಡ ಮೊತ್ತದ ಕಾಮಗಾರಿಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಕೋಟ್ಯಂತರ ಮೊತ್ತದ ಕಾಮಗಾರಿಗಳನ್ನು ಆಂಧ್ರ ಪ್ರದೇಶ ಸೇರಿದಂತೆ ಹೊರ ರಾಜ್ಯದವರೇ ಮಾಡುತ್ತಿದ್ದಾರೆ. ಸ್ಥಳೀಯ ಗುತ್ತಿಗೆದಾರರ ದರ್ಜೆಯನ್ನು ಉನ್ನತೀಕರಿಸಿ, ಅವರಿಗೆ ಅವಕಾಶ ಕಲ್ಪಿಸಲು ನಿಯಮ ರೂಪಿಸಬೇಕು ಎಂದರು.

‘ಶೇ 40ರಷ್ಟು ಕಮಿಷನ್‌ಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್ ಅವರ ಸಮಿತಿಗೆ ಮಾಹಿತಿ ಒದಗಿಸಲಾಗುತ್ತದೆ. ಸಮಿತಿಯಿಂದ ನಮಗೆ ಇನ್ನೂ ಯಾವುದೇ ಸೂಚನೆ ಬಂದಿಲ್ಲ’ ಎಂದು ತಿಳಿಸಿದರು.

‘ಶಿಫಾರಸು ತಂದವರಿಗೆ ಹಣ’

‘ಶಿಫಾರಸು ತಂದವರಿಗೆ ರಾತ್ರೋರಾತ್ರಿ ಚೆಕ್‌ ನೀಡಿದ ಉದಾಹರಣೆಗಳಿವೆ. ತಮಗೆ ಬೇಕಾದವರಿಗೆ ಹಣ ಪಾವತಿಸಲಾಗುತ್ತಿದೆ. ಯಾರಿಗೆ ಎಷ್ಟು ಹಣ ನೀಡಲಾಗುತ್ತಿದೆ ಎಂಬ ಬಗ್ಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ಇಲ್ಲ. ಸಚಿವರೊಂದಿಗೆ ಮಾತನಾಡಿ ಎನ್ನುತ್ತಿದ್ದಾರೆ. ಆರ್‌ಟಿಐ ಮೂಲಕ ಯಾರಿಗೆ ಹಣ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಕೇಳಿದ್ದೇವೆ’ ಎಂದು ಕೆಂಪಣ್ಣ ಹೇಳಿದರು. ‘ಲೋಕೋಪಯೋಗಿ ಇಲಾಖೆಯಲ್ಲಿ ಮಾತ್ರ ಸರಿಯಾಗಿ ಪಾವತಿಯಾಗುತ್ತಿದೆ. ಎಲ್ಲ ನಿಯಮ ಅನುಸರಿಸಿ ಬಿಲ್ ಪಾವತಿಸುವಂತೆ ಸಚಿವ ಜಾರಕಿಹೊಳಿ ಸೂಚಿಸಿದ್ದಾರೆ. ಇದೊಂದೇ ಇಲಾಖೆ ನಮಗೆ ಸ್ಪಂದಿಸಿರುವುದು’ ಎಂದರು.

ಕೆಂಪಣ್ಣ ಆತಂಕ ಪಡಬೇಕಿಲ್ಲ: ಡಿಸಿಎಂ

‘ಬಿಲ್ ಪಾವತಿ ವಿಚಾರದಲ್ಲಿ ಕೆಂಪಣ್ಣ ಅವರು ಆತಂಕ ಪಡುವ ಅಗತ್ಯವಿಲ್ಲ. ಏನಾದರೂ ಇದ್ದರೆ ಬಂದು ನಮ್ಮ ಬಳಿ ಮಾತನಾಡಲಿ. ನಾವು ನ್ಯಾಯ ಒದಗಿಸುತ್ತೇವೆ. ಕೆಂಪಣ್ಣ ಅವರ ಮನವಿ ಮೇರೆಗೆ ನಾವು ತನಿಖೆ ಪಕ್ಕಕ್ಕಿಟ್ಟು ಕಾಮಗಾರಿಗಳ ಶೇ 60-70ರಷ್ಟು ಹಣವನ್ನು ಆದ್ಯತೆ ಮೇರೆಗೆ ಬಿಡುಗಡೆ ಮಾಡಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ‘ನಮ್ಮ ಪರಿಸ್ಥಿತಿ ರೈತರಿಗಿಂತ ಶೋಚನೀಯವಾಗಿದೆ. ತನಿಖೆ ಪಕ್ಕಕ್ಕಿಟ್ಟು ಬಿಲ್ ಪಾವತಿ ಮಾಡಲಿ’ ಎಂಬ ಕೆಂಪಣ್ಣ ಮಾತಿಗೆ ಅವರು ಪ್ರತಿಕ್ರಿಯಿಸಿದರು. ‘ಬಿಲ್ ಪಾವತಿ ಸಮಯದಲ್ಲಿ ಜಿಎಸ್‌ಟಿ ಕೂಡ ಪಾವತಿ ಮಾಡಬೇಕು. ಹೀಗಾಗಿ ತನಿಖೆ ವರದಿ ಬರುವ ಮುನ್ನವೇ ನಾವು ಸುಮಾರು ಮುಕ್ಕಾಲು ಭಾಗ ಹಣ ಬಿಡುಗಡೆ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT