ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಚರಿತ್ರೆಯನ್ನು ಮುಕ್ತವಾಗಿ ಹೇಳುವ ಕಾಲ ಬರಬೇಕಿದೆ: ಕೃಷ್ಣಮೂರ್ತಿ ಬಿಳಿಗೆರೆ

ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯ
Last Updated 26 ಮಾರ್ಚ್ 2023, 13:41 IST
ಅಕ್ಷರ ಗಾತ್ರ

ಧಾರವಾಡ: ‘ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವಂತೆ ಆತ್ಮಚರಿತ್ರೆಯನ್ನು ಧೈರ್ಯದಿಂದ ಹಾಗೂ ಮುಕ್ತವಾಗಿ ಹೇಳಿಕೊಳ್ಳುವ ಕಾಲವಿನ್ನೂ ಭಾರತದಲ್ಲಿ ಬರಬೇಕಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.

ಮನೋಹರ ಗ್ರಂಥಮಾಲಾ ಆಯೋಜಿಸಿದ್ದ ಡಾ. ಡಿ.ವಿ.ಗುರುಪ್ರಸಾದ್ ಅವರ ’ಕೈಗೆ ಬಂದ ತುತ್ತು’ ಪರಿಷ್ಕೃತ ಎರಡನೇ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವ್ಯಕ್ತಿಯ ಜೀವನ ಚರಿತ್ರೆ ಎಂದರೆ ಅದು ಆ ವ್ಯಕ್ತಿಯ ಕಥೆಯಷ್ಟೇ ಅಲ್ಲದೆ, ಸಮುದಾಯದ ಜೊತೆಗಿನ ಅನುಸಂಧಾನದ ಆತ್ಮಚರಿತ್ರೆಯೂ ಆಗಿರುತ್ತದೆ. ಹೀಗಾಗಿ ಇವುಗಳು ವ್ಯಾಪಕ ಚರ್ಚೆ ಹಾಗೂ ಬೆಳವಣಿಗೆಗಳಿಗೆ ಕಾರಣವಾದ ಉದಹಾರಣೆಗಳೂ ಇವೆ’ ಎಂದರು.

‘ನಮ್ಮಲ್ಲಿ ಇಂದಿಗೂ ಪ್ರಭುತ್ವದ ಛಾಯೆ ಮರೆಯಾಗಿಲ್ಲ. ಹೀಗಾಗಿ ಕರ್ತವ್ಯಕ್ಕಿಂತ ಹುದ್ದೆಗಳೇ ದೊಡ್ಡವು ಎಂದೆನಿಸುತ್ತಲೇ ಇರುತ್ತದೆ. ಪ್ರಜಾಪ್ರಭುತ್ವ ವಿಕಸನಗೊಳ್ಳುತ್ತಲೇ ಎಲ್ಲಾ ಹುದ್ದೆಗಳೂ ಅಷ್ಟೇ ಶ್ರೇಷ್ಠವೆಂದಿನಿಸುತ್ತವೆ. ಕಲಾವಿದರು, ಕುಶಲಕರ್ಮಿಗಳೂ ಈ ಜಗತ್ತನ್ನು ಆಳಿದ ಉದಾಹರಣೆಗಳಿವೆ. ಹೀಗಾಗಿ ಹುದ್ದೆಗಳು ವ್ಯಕ್ತಿಯ ಕೆಲಸದಿಂದ ದೊಡ್ಡವಾಗುತ್ತವೆಯೇ ಹೊರತು, ಹುದ್ದೆಯೇ ದೊಡ್ಡದಲ್ಲ ಎಂಬುದನ್ನು ದೊಡ್ಡ ಹುದ್ದೆಯಲ್ಲಿರುವವರು ಅರಿಯಬೇಕು’ ಎಂದರು.

‘ಲೇಖಕ ಡಾ. ಗುರುಪ್ರಸಾದ್ ಅವರು ತಮ್ಮ ಆತ್ಮಕಥೆಯಲ್ಲಿ ತಮ್ಮ ಬದುಕಿನ ಹಲವು ಸೋಲುಗಳ ಕುರಿತು ದಾಖಲಿಸಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬಂದ ಎಲ್ಲಾ ಸವಾಲುಗಳನ್ನೂ ಸಂತೋಷದಿಂದಲೇ ಸ್ವೀಕರಿಸಿದ್ದನ್ನು ಈ ಕೃತಿಯಲ್ಲಿ ಕಾಣಬಹುದು. ತಮಗೆ ಐಎಎಸ್‌ ಹುದ್ದೆ ಸಿಕ್ಕಾಗಲೂ ಅವರು ತಮ್ಮ ಮನಸ್ಸಿನ ಇಚ್ಛೆಯಂತೆ ಐಪಿಎಸ್‌ ಆಯ್ಕೆ ಮಾಡಿಕೊಂಡ ಕಥೆಯ ಹಿಂದಿನ ಸಂಗತಿ ರೋಚಕವಾಗಿದೆ’ ಎಂದು ಬಿಳಿಗೆರೆ ಹೇಳಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ‘ಉತ್ತಮ ಅಧಿಕಾರಿಯಾಗಬಹುದು. ಆದರೆ ಉತ್ತಮ ಲೇಖಕ ಆಗುವುದು ಕಷ್ಟದ ಕೆಲಸ. ಗುರುಪ್ರಸಾದ್ ಅವರ ಅಗಾಧವಾದ ನೆನಪಿನ ಶಕ್ತಿಯೇ ಈ ಕೃತಿಯ ಮೂಲ ಸತ್ವ. ಎಲ್ಲಾ ಅಧಿಕಾರಿಗಳು ತಮ್ಮ ವೃತ್ತಿ ಜೀವನದ ಸಂಗತಿಗಳನ್ನು ದಾಖಲಿಸಿದಲ್ಲಿ, ಅದು ಮುಂದೆ ಬರುವ ಕಿರಿಯರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಲೇಖಕಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಮಾತನಾಡಿ, ‘ಬೋಧಕ ವೃತ್ತಿಯಲ್ಲಿ ಸಾಹಿತ್ಯದ ಅತ್ಯಂತ ಸಮೀಪವಿದ್ದರೂ ನಾನು 25 ಕೃತಿಗಳನ್ನಷ್ಟೇ ರಚಿಸಿದ್ದೇನೆ. ಆದರೆ ಒತ್ತಡದ ಜೀವನ ಹಾಗೂ ನಿರಂತರ ವರ್ಗಾವಣೆಯ ನಡುವೆಯೂ ಡಿ.ವಿ.ಗುರುಪ್ರಸಾದ್ ಅವರು 75 ಕೃತಿಗಳನ್ನು ರಚಿಸಿರುವುದು ಸಾಧನೆಯೇ ಸರಿ. ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿರುವ ಗುರುಪ್ರಸಾದ್ ಅವರು ಇನ್ನಷ್ಟು ಕೃತಿಗಳನ್ನು ಬರೆಯುವ ಮೂಲಕ, ತಾವು ಕೆಲಸ ಮಾಡಿದ ಕ್ಷೇತ್ರವನ್ನು ಲೋಕಕ್ಕೆ ಪರಿಚಯಿಸಬೇಕು’ ಎಂದು ಆಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿದರು. ಡಾ. ರಮಾಕಾಂತ ಜೋಶಿ, ಹ.ವೆಂ.ಕಾಖಂಡಕಿ ಇದ್ದರು.

ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಇಷ್ಟವಾಗದಿದ್ದರೆ ಹಣ ವಾಪಾಸ್

‘ಕೈಗೆ ಬಂದ ತುತ್ತು’ ಮೊದಲ ಆವೃತ್ತಿಗಿಂತ ಎರಡನೇ ಆವೃತ್ತಿ ಶೇ 90ರಷ್ಟು ಪರಿಷ್ಕೃತ ಮತ್ತು ಹೊಸ ವಿಷಯಗಳಿಂದ ಕೂಡಿದೆ. ಹೀಗಾಗಿ ಮೊದಲ ಆವೃತ್ತಿ ಓದಿದವರು ತಮ್ಮ ಕೃತಿಯನ್ನು ತಂದು ತೋರಿಸಿದಲ್ಲಿ ಎರಡನೇ ಕೃತಿಯನ್ನು ₹150ಕ್ಕೆ ಕೊಡಲಾಗುವುದು’ ಎಂದು ಗುರುಪ್ರಸಾದ್ ದೃಢಪಡಿಸಿದರು.

‘ಒಂದೊಮ್ಮೆ ಎರಡನೇ ಆವೃತ್ತಿ ಓದಿದವರಿಗೆ ಕೃತಿ ಇಷ್ಟವಾಗದಿದ್ದರೆ ಪುಸ್ತಕವನ್ನು ಮರಳಿಸಬಹುದು. ಅವರ ಹಣವನ್ನು ಹಿಂದಿರುಗಿಸಲಾಗುವುದು. ಪರಿಷ್ಕೃತ ಆವೃತ್ತಿಯಲ್ಲಿ ಬಹಳಷ್ಟು ಹೊಸ ಸಂಗತಿಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದೇನೆ. ಧಾರವಾಡ ನನ್ನ ಜೀವನದ ಪರಿವರ್ತನೆಗೆ ಕಾರಣವಾದ ದಿನ. ಕರ್ನಾಟಕ ವಿಶ್ವವಿದ್ಯಾಲಯದ ಡಾ. ಎಂ.ಕೆ.ನಾಯಕ ಅವರು ಆ ಪರಿವರ್ತನೆಗೆ ಕಾರಣರಾದವರು. ಬಿಎಸ್ಸಿಯಲ್ಲಿ ಮೂರು ಬಾರಿ ಫೇಲ್ ಆದ ನಾನು, ಅವರಿಂದಾಗಿ ರ‍್ಯಾಂಕ್‌ನೊಂದಿಗೆ ಎಂ.ಎ. ಪಾಸಾದೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಮೂರು ಬಾರಿ ಎದುರಿಸಿ, ಮೂರು ಬಾರಿಯೂ ಪಾಸಾದೆ. ವೃತ್ತಿ ಜೀವನ ಹಾಗು ವೈಯಕ್ತಿಕ ಜೀವನಗಳಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದರೂ, ಬರುವ ನಾಳೆಗಳು ಉತ್ತಮವಾಗಿರಲಿವೆ ಎಂಬ ಆಶಾಭಾವದಲ್ಲೇ ಜೀವನ ನಡೆಸುತ್ತಿದ್ದೇನೆ. ಅವುಗಳನ್ನೇ ಇಲ್ಲಿ ದಾಖಲಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT