ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರದಲ್ಲಿ ವಿಜಯೇಂದ್ರ ನಂಬರ್‌ ಒನ್‌: ಮಧು ಬಂಗಾರಪ್ಪ

Published : 3 ಆಗಸ್ಟ್ 2024, 23:22 IST
Last Updated : 3 ಆಗಸ್ಟ್ 2024, 23:22 IST
ಫಾಲೋ ಮಾಡಿ
Comments

ಶಿವಮೊಗ್ಗ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭ್ರಷ್ಟಾಚಾರದಲ್ಲಿ ನಂಬರ್‌ ಒನ್‌ ರ‍್ಯಾಂಕ್‌ ಪಡೆದಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದರು. 

‘ವಿಜಯೇಂದ್ರ ಮೇಲೆ ಭ್ರಷ್ಟಾಚಾರದ ಆರೋಪಗಳು ಸಾಕಷ್ಟಿವೆ. ಹಣ ಅಕ್ರಮ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳು ತಮ್ಮ ಮೇಲೆ ಇರುವುದಾಗಿ ಚುನಾವಣಾ ಅಫಿಡವಿಟ್‌ನಲ್ಲಿ ಅವರೇ ಘೋಷಿಸಿಕೊಂಡಿದ್ದಾರೆ. ಮುಡಾ ವಿಚಾರ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುವ ನೈತಿಕತೆ ಅವರಿಗಿಲ್ಲ. ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿರುವ ಆರೋಪಗಳಿಗೆ ಮೊದಲು ಉತ್ತರ ಕೊಡಲಿ. ಭಾರೀ ಪ್ರಮಾಣದ ಆಸ್ತಿ ಹೇಗೆ ಬಂತು ಎಂಬುದನ್ನು ಜನರಿಗೆ ತಿಳಿಸಲಿ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು. 

‘ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾಗಿದ್ದಾಗಲೇ ಜೈಲಿಗೆ ಹೋಗಲು ಕಾರಣರಾದವರು ಯಾರು? ಅವರ ಸಹಿ ನಕಲು ಮಾಡಿದವರು ಯಾರು? ಇಂತಹ ವ್ಯಕ್ತಿ ಭ್ರಷ್ಟಾಚಾರದ ವಿಚಾರ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ. ಯಡಿಯೂರಪ್ಪ ಕುಟುಂಬ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವುದಾಗಿ ಬಿಜೆಪಿಯವರೇ ಆರೋಪಿಸಿದ್ದಾರೆ. ಅದಕ್ಕೆ ಮೊದಲು ಉತ್ತರ ಕೊಡಲಿ’ ಎಂದು ಕಿಡಿಕಾರಿದರು.   

‘ಹಿಂದೆ ಬಿಜೆಪಿಯವರೇ ಮುಡಾ ಅಧ್ಯಕ್ಷರಾಗಿದ್ದರು. ಆಗ ಇಡೀ ಮುಡಾವನ್ನೇ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದವರು ಇದೇ ವಿಜಯೇಂದ್ರ. ಅವರ ಮೂಗಿನಡಿಯಲ್ಲೇ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಡಿ.ಕೆ.ಶಿವಕುಮಾರ್‌ ಜೈಲಿಗೆ ಹೋಗಲು ಕಾರಣರಾಗಿದ್ದ ಇವರು ಈಗ ಜೆಡಿಎಸ್‌ ಜೊತೆ ಸೇರಿಕೊಂಡು ರಾಜಕೀಯ ಪಿತೂರಿ ನಡೆಸುತ್ತಿದ್ದಾರೆ’ ಎಂದು ದೂರಿದರು. 

‘ಹಿಂದುಳಿದವರನ್ನು ಕಂಡರೆ ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು. ಅವರ ಪಕ್ಷದಲ್ಲಂತೂ ಸಿಎಂ ಮಾಡಲಿಲ್ಲ. ಡಿ.ದೇವರಾಜ ಅರಸು, ವೀರಪ್ಪ ಮೊಯ್ಲಿ, ಧರ್ಮಸಿಂಗ್‌ ಅವರಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲು ಬಿಡಲಿಲ್ಲ. ಕಳಂಕವಿಲ್ಲದೇ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಈಗ ಪಿತೂರಿ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT