ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರಗಿನ’ ಉಗ್ರಪ್ಪ: ‘ಬಳ್ಳಾರಿ ಮಗಳು’ ಶಾಂತಾ

ಬಳ್ಳಾರಿ ಲೋಕಸಭೆ ಉಪ ಚುನಾವಣೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಹೋಲಿಕೆ ಶುರು
Last Updated 21 ಅಕ್ಟೋಬರ್ 2018, 20:13 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಕಣ ರಂಗೇರುತ್ತಿದ್ದಂತೆ, ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರ ಶಕ್ತಿ ಮತ್ತು ದೌರ್ಬಲ್ಯಗಳ ಕುರಿತ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

ಮತಗಳಿಕೆಯ ರಾಜಕೀಯ ಲೆಕ್ಕಾಚಾರಗಳನ್ನು ಮೀರಿದ ಈ ಹೋಲಿಕೆಯು ಅಭ್ಯರ್ಥಿಗಳಾಗಿ ಇವರಿಬ್ಬರ ಅನನ್ಯತೆ ಏನು ಎಂಬುದರ ಕಡೆಗೂ ಗಮನ ಹರಿಸುವಂತೆ ಮಾಡಿದೆ. ವಿಜಯದಶಮಿ ಹಬ್ಬದ ಸಂಭ್ರಮದ ನಡುವೆಯೇ ಹೋಟೆಲ್‌ಗಳಲ್ಲಿ, ಟೀ–ಕಾಫಿ, ಪೆಟ್ಟಿಗೆ ಅಂಗಡಿಗಳಲ್ಲಿ ಈ ಚರ್ಚೆಗಳು ಶುಕ್ರವಾರ ಕಂಡು ಕೇಳಿಬಂದವು.ಹೋಲಿಕೆಗಳು ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲೂ ಹರಿದಾಡುತ್ತಿವೆ.

‘ಉಗ್ರಪ್ಪ ಅವರು ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರು. ಬಿಜೆಪಿ ಅಭ್ಯರ್ಥಿ ಶಾಂತಾ ಅವರಿಗೆ ಸರಿಯಾದ ಕನ್ನಡವೂ ಬರುವುದಿಲ್ಲ’ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

‘ಶಾಂತಾ ಬಳ್ಳಾರಿಯ ಮಗಳು ಎಂಬುದರಾಚೆಗೆ ರಾಜಕೀಯದ ಕುರಿತು ಮಾತನಾಡಿದ್ದು ಕಡಿಮೆ. 2009ರಲ್ಲಿ ಅವರು ಬಳ್ಳಾರಿಯಿಂದ ಸಂಸದರಾಗಿ ಆಯ್ಕೆಯಾದ ಮೇಲೂ ರಾಜಕೀಯ ವರ್ಚಸ್ಸನ್ನು ಗಳಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ’ ಎಂದು ಗಾಂಧೀನಗರದ ವೆಂಕಟೇಶ್‌ ಅಭಿಪ್ರಾಯಪಟ್ಟರು.

‘ಸಂಸದರ ಅವಧಿ ಮುಗಿದ ಬಳಿಕ ಮನೆ ಸೇರಿದ್ದ ಅವರು ಜನರ ನಡುವೆ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೆಲವು ಸಮಾವೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು’ ಎಂದು ಕಪ್ಪಗಲ್‌ ರಸ್ತೆಯ ಕಿರಣ್‌ಕುಮಾರ್‌ ಹೇಳಿದರು.

‘ಇದೆಲ್ಲಕ್ಕಿಂತ ಶಾಂತಾ ಅವರು ಅಣ್ಣ ಶ್ರೀರಾಮುಲು ಅವರನ್ನು ತಮ್ಮ ಮುಖವಾಣಿಯನ್ನಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಚುನಾವಣೆಯಲ್ಲಿ ತಾವೊಬ್ಬ ನೆಪಮಾತ್ರದ ಅಭ್ಯರ್ಥಿ, ನಿಜವಾದ ಅಭ್ಯರ್ಥಿ ಅಣ್ಣ ಶ್ರೀರಾಮುಲು ಎಂದು ಹೇಳಿಕೊಂಡು ಪ್ರಚಾರದಲ್ಲಿದ್ದಾರೆ' ಎಂದು ರಾಮಾಂಜಿನಿ ಅವರು ಹೇಳಿದರು.

‘ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಉಗ್ರಪ್ಪ ಒಮ್ಮೆಯೂ ಜನಮತದಿಂದ ಗೆದ್ದ ನಿದರ್ಶನವಿಲ್ಲ. ಅವರಿಗೆ ಆ ಶಕ್ತಿಯೂ ಇಲ್ಲ. ಅವರು ಸ್ಥಳೀಯರೂ ಅಲ್ಲ. ಇಂಥದ್ದರಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ಗೆಲ್ಲುವುದು ಕನಸಿನ ಮಾತು’ ಎಂಬ ಮಾತುಗಳು ಜೋರು ಪಡೆದುಕೊಂಡಿವೆ.

‘ಉಗ್ರಪ್ಪ ರಾಜಕೀಯ ವರ್ಚಸ್ಸು ಎಷ್ಟೇ ದೊಡ್ಡದಿದ್ದರೂ ಅವರು ನಮ್ಮೂರಿಗೆ ಹೊಸಬರು. ಮತ ಗಳಿಸುವುದು ಅಷ್ಟು ಸುಲಭದ ಮಾತಲ್ಲ’ ಎಂಬುದು ಹಿರಿಯ ನಾಗರಿಕ ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.

‘ಶಾಂತಾ ಒಮ್ಮೆ ಸಂಸದರಾಗಿದ್ದವರು. ಐದು ವರ್ಷದ ಅನುಭವವಿದೆ. ಆದರೆ ಉಗ್ರಪ್ಪ ಅವರಿಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ಧಿಸಿದ ಅನುಭವವಿಲ್ಲ. ಅವರು ಉತ್ತಮ ವಾಗ್ಮಿ ಎನ್ನುವುದರ ಬಗ್ಗೆ ಅವರ ಪಕ್ಷದಲ್ಲೇ ಅಸಮಾಧಾನವಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT