ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗುವುದು: ಸಿದ್ದರಾಮಯ್ಯ

ಹೊಸ ವರ್ಷಾಚರಣೆ, ಕ್ರಿಸ್ ಮಸ್‌ಗೆ ಪ್ರತ್ಯೇಕ ಮಾರ್ಗಸೂಚಿ ಇಲ್ಲ– ಸಿಎಂ
Published 21 ಡಿಸೆಂಬರ್ 2023, 16:25 IST
Last Updated 21 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಸಮರ್ಪಕ ನಿರ್ವಹಣೆ ಹಾಗೂ ಪಾರದರ್ಶಕತೆಗಾಗಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗುವುದು. ಈ ಸಮಿತಿಯು ತಾಂತ್ರಿಕ ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಮತ್ತು ಮೂವರು ಮೃತಪಟ್ಟಿದ್ದಾರೆ. ಹೀಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ‌ಗುರುವಾರ ಉನ್ನತ ಮಟ್ಟದ ಸಭೆ ನಡೆಯಿತು.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಓಮೈಕ್ರಾನ್‌ ಉಪತಳಿ ಜೆಎನ್‌.1 ತಳಿಗೆ ಆತಂಕಪಡುವ ಅಗತ್ಯವಿಲ್ಲ. ಆದರೆ‌, ಎಚ್ಚರಿಕೆ ಇರಬೇಕು. ಸದ್ಯ ರಾಜ್ಯದಲ್ಲಿ 60 ವರ್ಷ ಕೆಳಗಿನವರಿಗೆ ಮಾಸ್ಕ್ ಕಡ್ಡಾಯವಿಲ್ಲ. ಜನಸಂದಣಿಯಲ್ಲಿ ಮಾಸ್ಕ್ ಧರಿಸಿದರೆ ಒಳ್ಳೆಯದು’ ಎಂದರು.

‘ಲಸಿಕೆ ಸಿದ್ಧ ಇಟ್ಟುಕೊಳ್ಳಲು ಸೂಚಿಸಲಾಗಿದೆ. ‌ಅಗತ್ಯ ಇದ್ದರೆ ಲಸಿಕೆ ಖರೀದಿ ಮಾಡುತ್ತೇವೆ. ಕೇಂದ್ರ ಸರ್ಕಾರ ಪೂರೈಸುವ ಮೊದಲು ಖರೀದಿಸುವಂತೆ ಹೇಳಿದ್ದೇನೆ’ ಎಂದರು.

‘ಹೊಸ ವರ್ಷಾಚರಣೆ, ಕ್ರಿಸ್‌ಮಸ್‌  ಹಬ್ಬಕ್ಕೆ ಪ್ರತ್ಯೇಕ ನಿಯಮ ಇಲ್ಲ. ಮುಂದಿನ ದಿನಗಳಲ್ಲಿ ಮಾರ್ಗಸೂಚಿ ಹೊರಡಿಸುವ ಕುರಿತು ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಲಿದೆ’ ಎಂದರು.

‘ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದೆಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಆಕ್ಸಿಜನ್, ವೆಂಟಿಲೇಟರ್, ಹಾಸಿಗೆ, ಔಷಧಿ‌ ಸೇರಿದಂತೆ ಯಾವೆಲ್ಲ ವಸ್ತು ಬೇಕೋ ಅದನ್ನು ಖರೀದಿಸಲು ಸೂಚನೆ‌ ನೀಡಲಾಗಿದೆ’ ಎಂದರು. 

‘ಸಂಪುಟ ಉಪ ಸಮಿತಿ‌ಯು ತಜ್ಞರ ಜೊತೆ ಸಮನ್ವಯದಿಂದ ನಿರಂತರ ಕೆಲಸ ಮಾಡಬೇಕು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಜಾರಿ ಮಾಡಬೇಕು. ಗಡಿ ಜಿಲ್ಲೆಗಳಲ್ಲಿ ಹೆಚ್ಚು ಪರೀಕ್ಷೆ ಮಾಡಬೇಕು’ ಎಂದು ಸೂಚನೆ ನೀಡಿದ್ದು, ‘ಶನಿವಾರದಿಂದ ಪ್ರತಿದಿನ ಐದು ಸಾವಿರ ತಪಾಸಣೆ ನಡೆಸಲಾಗುವುದು. 60 ವರ್ಷ ದಾಟಿದವರು  ಮಾಸ್ಕ್ ಹಾಕಬೇಕು’ ಎಂದರು.

‘ಎಲ್ಲ ಕಡೆ ತಪಾಸಣೆ ನಡೆಸಿದ ಬಳಿಕ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ದರ ಇನ್ನೂ ನಿಗದಿಪಡಿಸಿಲ್ಲ. ಕೋವಿಡ್ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಕೋವಿಡ್‌ಗೆಂದೇ ಪ್ರತ್ಯೇಕ ಆಸ್ಪತ್ರೆಗಳನ್ನು ಮೀಸಲಿಡಲಾಗುವುದು. ಈಗಲೇ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರು ಸಲಹೆ ನೀಡಿದ್ದಾರೆ’ ಎಂದೂ ಹೇಳಿದರು.

ಕೋವಿಡ್: ಸಕ್ರಿಯ ಪ್ರಕರಣ 105ಕ್ಕೆ ಏರಿಕೆ

ರಾಜ್ಯದಲ್ಲಿ ಗುರುವಾರ 24 ಕೋವಿಡ್ ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರರ ಗಡಿ (105) ದಾಟಿದೆ.  ಬೆಂಗಳೂರಿನಲ್ಲಿಯೇ 93 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ 24 ಗಂಟೆಗಳಲ್ಲಿ 2263 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಶೇ 1.06 ರಷ್ಟಿದೆ. ಬೆಂಗಳೂರಿನಲ್ಲಿ ಒಂದು ದಿನದಲ್ಲಿ 1540 ಪರೀಕ್ಷೆ ನಡೆಸಲಾಗಿದ್ದು ಹೊಸದಾಗಿ 23 ಪ್ರಕರಣ ದೃಢಪಟ್ಟಿವೆ. 

ಸೋಂಕಿತರಲ್ಲಿ 85 ಮಂದಿ ಮನೆ ಆರೈಕೆಗೆ ಒಳಗಾದರೆ 20 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 9 ಮಂದಿ ತೀವ್ರ ನಿಗಾ ಘಟಕದಲ್ಲಿ ಉಳಿದ 11 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಇದ್ದಾರೆ. ಸೋಂಕಿತರಲ್ಲಿ 11 ಮಂದಿ ಚೇತರಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT