ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ, ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಬದ್ದ: ಡಿಸಿಎಂ ಡಿ.ಕೆ.ಶಿವಕುಮಾರ್

Published 18 ಸೆಪ್ಟೆಂಬರ್ 2023, 16:45 IST
Last Updated 18 ಸೆಪ್ಟೆಂಬರ್ 2023, 16:45 IST
ಅಕ್ಷರ ಗಾತ್ರ

ಬೆಂಗಳೂರು: 'ಕಾವೇರಿ ನೀರು ಹರಿಸಬೇಕೊ, ಬೇಡವೋ ಎಂಬುದರ ಕುರಿತು ಯೋಚನೆ ಮಾಡಲಾಗುತ್ತಿದೆ, ಮಂಗಳವಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹಾಕುತ್ತಿದ್ದೇವೆ ನಂತರ ತೀರ್ಮಾನ ಮಾಡಲಾಗುವುದು' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸೋಮವಾರ ಆದೇಶ ನೀಡಿದ ನಂತರ ಸದಾಶಿವನಗರದ ನಿವಾಸದಲ್ಲಿ ಸೋಮವಾರ ರಾತ್ರಿ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೆಹಲಿಗೆ ಯಾವ ಸಮಯದಲ್ಲಾದರೂ ಭೇಟಿ ನೀಡಲು ನಾವು ತಯಾರಿದ್ದೇವೆ. ರಾಜ್ಯದ ಎಂಪಿಗಳು ಹಾಗೂ ಮುಖ್ಯಮಂತ್ರಿಗಳು ಶೀಘ್ರವೇ ಒಂದು ದಿನಾಂಕ ನಿಗದಿ ಮಾಡೋಣ ಎಂದು ಹೇಳಿದ್ದಾರೆ. ರಾಜ್ಯದ ಎಂಪಿಗಳು ಎಲ್ಲಾ ರಾಜಕಾರಣ ಬಿಟ್ಟು ನಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಾವು ನೀರನ್ನು ಹೆಚ್ಚು ಬಿಟ್ಟಿಲ್ಲ, ಕಳೆದ ಎರಡು ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ನೀರನ್ನು ಹರಿಸಿದ್ದೇವೆ. ಕಾವೇರಿ ನೀರು ನೀರು ನಿರ್ವಹಣಾ ಸಮಿತಿಯವರು 5 ಸಾವಿರ ಕ್ಯೂಸೆಕ್ಸ್ ಬಿಡುಗಡೆ ಮಾಡಿ ಎಂದು ಹೇಳುತ್ತಾರೆ, ಆದರೆ ಅಲ್ಲಿಗೆ ತಲುಪುವುದು ಕೇವಲ 2 ರಿಂದ 3 ಸಾವಿರ ಕ್ಯೂಸೆಕ್ಸ್ ಮಾತ್ರ. ಪ್ರಧಾನಿ ಕಚೇರಿಗೆ ಎರಡು ಬಾರಿ ಪತ್ರ ಬರೆದಿದ್ದೇವೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕಾಯುತ್ತೇವೆ ಎಂದರು.

ಮಾಜಿ ಪ್ರಧಾನಿ ದೇವೆಗೌಡರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಕಾನೂನು ಹೋರಾಟ ಮತ್ತು ಉಭಯ ರಾಜ್ಯಗಳ ಸಭೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ " ಅವರ ಸಲಹೆಯಲ್ಲಿ ಅರ್ಥವಿದೆ, ಗೌರವವಿದೆ. ಅವರ ಸಲಹೆಗಳನ್ನು ಕೇಳುತ್ತೇವೆ. ಮೇಕೆದಾಟು ಯೋಜನೆಯೇ ಇದಕ್ಕೆ ಪರಿಹಾರ. ಸುಪ್ರೀಂ ಕೋರ್ಟ್ ತಾಂತ್ರಿಕ ವಿಚಾರಗಳಲ್ಲಿ ನಾವು ತಲೆಹಾಕುವುದಿಲ್ಲ ಎಂದು ಹೇಳಿದ ಕಾರಣ ಕೇಂದ್ರ ಜಲ ಆಯೋಗದ ಬಳಿ ಹೋಗಬೇಕಾಯಿತು ಎಂದು ಹೇಳಿದರು.

ಬೊಮ್ಮಾಯಿ ಅವರು ನೀರು ಬಿಡುಗಡೆ ಮಾಡುವುದು ಬೇಡ ಸುಪ್ರೀಂಕೋರ್ಟ್‌ಗೆ ಹೋಗಿ ಎಂದು ಟ್ಚೀಟ್ ಮಾಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ ‘ಹೌದು ಅವರು ಹೇಳುವುದು ಸರಿ ಇದೆ. ನೀರು ಬಿಡದೆ ಇದ್ದರೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುತ್ತದೆ, ಸಮಿತಿಯ ಮಾತು ಪಾಲಿಸದವರು ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದಾಗ ನಮ್ಮ ವಾದ ಬಿದ್ದು ಹೋಗುತ್ತದೆ’ ಎಂದರು.

ಬೊಮ್ಮಾಯಿ ಅವರು ಸುಪ್ರೀಂ ಕೋರ್ಟ್ ಇದೆ ಎಂದು ಹೇಳುತ್ತಾರೆ ಅಷ್ಟೇ. ಆದರೆ ನೀರಿನ ಹಂಚಿಕೆಯ ಬಗ್ಗೆಯೇ ಸೂತ್ರ ಹೊಂದಾಣಿಕೆಯಾಗಿಲ್ಲದೆ ಹೇಗೆ ಮುಂದುವರೆಯುವುದು? ರಾಜ್ಯವೂ ಉಳಿಯ ಬೇಕು ಹಾಗೂ ಆದೇಶ ಉಲ್ಲಂಘನೆ ಆಗದಂತೆಯೂ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಕಾನೂ‌ನು ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ ಎಂದು ನುಡಿದರು.

‘ನೀರನ್ನು ಬಿಡದೆ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದರೆ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವ ಕುರಿತು ಯೋಚಿಸುತ್ತೇವೆ‘ ಎಂದು ಹೇಳಿದರು.

‘ಸುಪ್ರೀಂ ಕೋರ್ಟಿನಲ್ಲಿ ಬಲವಾಗಿ ವಾದ ಮಂಡಿಸುತ್ತೇವೆ, ಎರಡೂ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಹೇಗಿದೆ ಎಂದು ಅವಲೋಕಿಸಿ, ಆನಂತರ ತೀರ್ಪು ನೀಡಿ ಎಂದು ಮನವಿ ಮಾಡುತ್ತೇವೆ.ನಾನು ಸಹ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದ್ದೇನೆ, ತಮಿಳುನಾಡಿನವರು ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಮಳೆ ಬೀಳದ ಪರಿಣಾಮ ನೀರಿನ ಹರಿವು ಕಡಿಮೆಯಾಗಿದೆ, ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂಬುದನ್ನು ಮನವರಿಕೆ ಮಾಡುತ್ತೇವೆ‘ ಎಂದರು.

ಕುಡಿಯುವ ನೀರಿಗೆ ಆದ್ಯತೆ

ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ, ಇದಕ್ಕೆ ಸರ್ಕಾರದ ಮೊದಲ ಆದ್ಯತೆ, ನಂತರ ರೈತರ ಬೆಳೆಗಳಿಗೆ ನೀರು ಹರಿಸಲಾಗುವುದು. ರೈತರು ಸಹ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಎಲ್ಲದಕ್ಕೂ ಕಾದು ನೋಡಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT