ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ವಿಳಂಬಕ್ಕೆ ಕೇಂದ್ರ ಸರ್ಕಾರ ಕಾರಣವಲ್ಲ: ನಿರ್ಮಲಾ ಸೀತಾರಾಮನ್

Published 6 ಏಪ್ರಿಲ್ 2024, 12:08 IST
Last Updated 6 ಏಪ್ರಿಲ್ 2024, 12:08 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರದ ಅನುದಾನ ಬಿಡುಗಡೆ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ. ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಕೇಂದ್ರ ಚುನಾವಣಾ ಆಯೋಗದ ಅನುಮತಿ ಬಾರದಿರುವುದು ವಿಳಂಬಕ್ಕೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಮಾಧ್ಯಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಂತರ ಸಚಿವಾಲಯ ಅಧಿಕಾರಿಗಳ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಕೃಷಿ ಮತ್ತು ಗೃಹ ಸಚಿವಾಲಯಗಳು ಪರಿಶೀಲನೆ ನಡೆಸಿದ್ದವು. ಆದರೆ, ಅಷ್ಟರಲ್ಲೇ ಚುನಾವಣೆ ಘೋಷಣೆಯಾಯಿತು. ಆಯೋಗದ ಅನುಮತಿ ದೊರಕದೇ ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಸಾಧ್ಯವಾಗಿಲ್ಲ' ಎಂದರು.

ಕರ್ನಾಟಕ ಮಾತ್ರವಲ್ಲ, ತೆಲಂಗಾಣ, ತಮಿಳುನಾಡು, ಸಿಕ್ಕಿಂ, ಮಿಜೋರಾಂ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಡಿ ನೆರವು ನೀಡುವ ಪ್ರಸ್ತಾವಗಳು ಉನ್ನತಾಧಿಕಾರ ಸಮಿತಿ ಮುಂದಿವೆ. ಚುನಾವಣಾ ಆಯೋಗದ ಅನುಮತಿ ದೊರಕಿದ ಬಳಿಕವೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಕೇಂದ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಕಾಯ್ದೆಯಲ್ಲಿ ಪರಿಹಾರ ವಿತರಣೆ ಅವಕಾಶ ಇಲ್ಲ. ಪರಿಹಾರ, ನೆರವು, ಮಧ್ಯಂತರ ಪರಿಹಾರ ಎಂಬ ಉಲ್ಲೇಖಗಳೇ ಇಲ್ಲ. ಕೇಂದ್ರ ಸರ್ಕಾರ ಇನ್ಪುಟ್ ಸಹಾಯಧನ ಮತ್ತು ಪರಿಸ್ಥಿತಿ ಸುಧಾರಣೆಗೆ ಸಹಾಯಧನವನ್ನು ಮಾತ್ರ ನೀಡುತ್ತದೆ ಎಂದು ಕಾಯ್ದೆಯನ್ನು ಓದಿದರು.

ತುರ್ತು ಪರಿಹಾರ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಇದಕ್ಕಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಕೇಂದ್ರವು ವಂತಿಗೆ ನೀಡುತ್ತದೆ. ಕರ್ನಾಟಕಕ್ಕೆ ಎರಡೂ ಕಂತುಗಳ ₹ 629 ಕೋಟಿಯನ್ನು ಮುಂಗಡವಾಗಿಯೇ ಬಿಡುಗಡೆ ಮಾಡಲಾಗಿತ್ತು ಎಂದರು.

ಆರೋಪದಲ್ಲಿ ಹುರುಳಿಲ್ಲ: ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಇಲ್ಲಿನ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ‌. ಸುಳ್ಳು ಆರೋಪ‌ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷದವರು ನಿಸ್ಸೀಮರು ಎಂದು ನಿರ್ಮಲಾ ಹೇಳಿದರು.

ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಗೆ ವಿಶೇಷ ನೆರವು ನೀಡಬೇಕೆಂಬ ಶಿಫಾರಸು 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಮಾತ್ರ ಇತ್ತು. ಅಂತಿಮ ವರದಿಯಲ್ಲಿ ಅಂತಹ ಶಿಫಾರಸು ಇರಲಿಲ್ಲ.‌ ಬೇರೆ ಯಾವ ರಾಜ್ಯಗಳೂ ಅಂತಹ ಬೇಡಿಕೆ ಇಡುತ್ತಿಲ್ಲ ಎಂದರು.

ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕೆ ನೆರವು ನೀಡಬೇಕೆಂಬ ಶಿಫಾರಸು ಕೂಡ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿರಹಿತ ಸಾಲ ನೀಡಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದವರು ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದರು.

'ಪ್ರಧಾನಿ ಮೋದಿಯವರು ಕರ್ನಾಟಕದ ಎಲ್ಲ ಬೇಡಿಕೆಗಳಿಗೂ ಸ್ಪಂದಿಸಿದ್ದಾರೆ. ಇಲ್ಲಿನ ಜನರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಆರೋಪಕ್ಕೆ ಕಿವಿಗೊಡುವುದಿಲ್ಲ ಎಂಬ ವಿಶ್ವಾಸವಿದೆ' ಎಂದರು.

'ನಮ್ಮ ತೆರಿಗೆ- ನಮ್ಮ ಹಕ್ಕು ಎಂಬ ಘೋಷಣೆ ಚೆನ್ನಾಗಿದೆ. ಆದರೆ, ಅದನ್ನು ಹೇಳುತ್ತಿರುವವರ ಉದ್ದೇಶ ಸರಿ ಇಲ್ಲ. ಹಣಕಾಸು ಅವ್ಯವಹಾರದ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಗಿರುವ ಕಾಂಗ್ರೆಸ್ ಪಕ್ಷದ ನಾಯಕರು ತನಿಖಾ ಸಂಸ್ಥೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವುದು ದುರದೃಷ್ಟಕರ' ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT