ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಬಲ ಬೆಲೆಯಲ್ಲಿ ಉದ್ದು, ಸೋಯಾಬಿನ್ ಖರೀದಿಗೂ ಕೇಂದ್ರ ಅನುಮತಿ

Published 30 ಆಗಸ್ಟ್ 2024, 4:12 IST
Last Updated 30 ಆಗಸ್ಟ್ 2024, 4:12 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದಲ್ಲಿ ಮತ್ತೆರಡು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಸರು, ಸೂರ್ಯಕಾಂತಿ ಜತೆಗೆ ಈಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶಿಸಿದೆ ಎಂದು ಹೇಳಿದ್ದಾರೆ.

ನಾಲ್ಕೈದು ದಿನಗಳ ಹಿಂದಷ್ಟೇ ಹೆಸರು ಮತ್ತು ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ರೈತರಿಗೆ ಗಣೇಶ ಹಬ್ಬದ ಗಿಫ್ಟ್ ನೀಡಿದೆ ಎಂದಿದ್ದಾರೆ ಸಚಿವ ಜೋಶಿ.

"ಹೆಸರು ಮತ್ತು ಸೂರ್ಯಕಾಂತಿ"ಗೆ ಬೆಂಬಲ ಬೆಲೆ ಘೋಷಿಸಿ ರಾಜ್ಯದಲ್ಲಿ ಖರೀದಿ ಕೇಂದ್ರ ತೆರೆಯುತ್ತಿದ್ದಂತೆಯೇ ಕೇಂದ್ರ ಕೃಷಿ ಸಚಿವಾಲಯ ಇದೀಗ "ಉದ್ದು ಮತ್ತು ಸೋಯಾಬೀನ್" ಗೂ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.

ಕರ್ನಾಟಕದಲ್ಲಿ 2024-25 ರ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 19,760 ಟನ್ ಉದ್ದು ಹಾಗೂ 1,03,315 ಟನ್ ಸೋಯಾಬಿನ್ ಖರೀದಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ರಾಜ್ಯದಲ್ಲಿ 90 ದಿನಗಳ ಅವಧಿಗೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಸೋಯಾಬೀನ್ ಖರೀದಿಸುವಂತೆ ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಿದೆ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಉದ್ದಿನ ಕಾಳು 7400 ರು. ಮತ್ತು ಸೋಯಾಬಿನ್ ಗೆ 4892 ರು. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಕಳೆದ ವರ್ಷ 6950 ರು. ಇದ್ದ ಉದ್ದಿನ ಬೆಂಬಲ ಬೆಲೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 450 ರು. ಹೆಚ್ಚಳ ಕಂಡಿದೆ. 4600 ದರವಿದ್ದ ಸೋಯಾಬಿನ್ ಬೆಂಬಲ ಬೆಲೆ ಈಗ 292 ರು. ಹೆಚ್ಚಳವಾಗಿದೆ.

ತಕ್ಷಣ ಖರೀದಿ ಕೇಂದ್ರ ತೆರೆಯಲು ಒತ್ತಾಯ: ರಾಜ್ಯ ಸರ್ಕಾರ ತಕ್ಷಣವೇ ರಾಜ್ಯದಾದ್ಯಂತ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಿ ಹೆಸರು, ಸೂರ್ಯಕಾಂತಿ ಜತೆಗೆ ಉದ್ದು ಮತ್ತು ಸೋಯಾಬಿನ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT