ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಮೇಲೆ ಕೇಂದ್ರ ಸರ್ಕಾರದ ದಾಳಿ: ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್

Last Updated 30 ಡಿಸೆಂಬರ್ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಹಿಂದುತ್ವದ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ನ್ಯಾಯಾಂಗವು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವು ವ್ಯವಸ್ಥಿತವಾಗಿ ನ್ಯಾಯಾಂಗದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್‌ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ನ್ಯಾಯಾಂಗದ ಮೇಲೆ ವಾಗ್ದಾಳಿ ನಡೆಸಿದ್ದ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಸುಪ್ರೀಂ ಕೋರ್ಟ್‌ ಹೇಗೆ ಕೆಲಸ ಮಾಡಬೇಕು ಎಂದು ಬುದ್ಧಿವಾದ ಹೇಳಿದ್ದರು. ರಾಜ್ಯಸಭೆಯ ಅಧ್ಯಕ್ಷ ಜಗದೀಪ್‌ ಧನಕರ್‌ ಅವರು ತಮ್ಮ ಮೊದಲ ಭಾಷಣದಲ್ಲೇ ‘ನಮ್ಮ ಕಾರ್ಯಸೂಚಿಯ ಜಾರಿಗೆ ನ್ಯಾಯಾಂಗ ಅಡ್ಡಿಯಾಗಿದೆ’ ಎಂದಿದ್ದರು. ಇವೆಲ್ಲವೂ ಕೇಂದ್ರ ಸರ್ಕಾರವು ನ್ಯಾಯಾಂಗದ ಮೇಲೆ ನಡೆಸುತ್ತಿರುವ ದಾಳಿಯ ಹಿಂದಿನ ಉದ್ದೇಶವನ್ನು ಬಹಿರಂಗಗೊಳಿಸಿವೆ’ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಿಸಲು 106 ಜನರ ಹೆಸರುಗಳನ್ನು ಸುಪ್ರೀಂ ಕೋರ್ಟ್‌ ಕಳೆದ ವರ್ಷ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಏಳು ಮಂದಿಯ ನೇಮಕಾತಿಗೆ ಮಾತ್ರ ಒಪ್ಪಿಗೆ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲೂ ಆರು ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲೂ ಬೃಹತ್‌ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ, ಬಾಕಿ ಪ್ರಕರಣಗಳ ವಿಚಾರದಲ್ಲಿ ನ್ಯಾಯಾಂಗವನ್ನು ದೂರುತ್ತಿದೆ ಎಂದು ಟೀಕಿಸಿದರು.

ಉಪ ರಾಷ್ಟ್ರಪತಿಯವರು ಸಂಸತ್ತಿನ ಸರ್ವಾಧಿಕಾರದ ಬಗ್ಗೆ ಮಾತನಾಡಿದ್ದಾರೆ. ಸುಪ್ರೀಂ ಕೋರ್ಟ್‌ ಸೇರಿದಂತೆ ಎಲ್ಲ ಅಂಗಗಳ ಅಧಿಕಾರವನ್ನು ಕೇಂದ್ರೀಕರಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನದ ಭಾಗವಿದು. ಅವರ ಮಾತಿನಂತೆ ಒಂದೇ ಕಡೆ ಅಧಿಕಾರದ ಕೇಂದ್ರೀಕರಣವಾದರೆ ಸರ್ವಾಧಿಕಾರಿ ವ್ಯವಸ್ಥೆ ಜನ್ಮ ತಳೆಯುವ ಅಪಾಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT