2023ರ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿದ್ದ ನಮ್ಮ ಮನವಿ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳದ ಕಾರಣ, ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯ ರಕ್ಷಣೆ ಹಾಗೂ ರಾಜ್ಯದ ಜನರ ಬರ ಪರಿಹಾರಕ್ಕಾಗಿ ನಡೆಸಿದ ಸುದೀರ್ಘ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇದೊಂದು ಮೈಲಿಗಲ್ಲು.–ಸಿದ್ದರಾಮಯ್ಯ, ಮುಖ್ಯಮಂತ್ರಿ
ಬರ ಪರಿಹಾರ ಬಿಡುಗಡೆ ಮಾಡದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ರಾಜ್ಯಕ್ಕೆ ಕಾಲಿಡಬಾರದು. ಬಂದರೆ, ಇಲ್ಲಿನ ಜನರೇ ಪ್ರತಿಭಟನೆ ನಡೆಸಲಿದ್ದಾರೆ. ಅವರಿಗೆ ಇಲ್ಲಿ ಒಂದು ಸೀಟೂ ಸಿಗದು. ಮೋದಿ ಮತ್ತು ಶಾ ರಾಜ್ಯಕ್ಕೆ ಅನ್ಯಾಯ ಮಾಡಿದ್ದರು. ಕೊನೆಗೂ ನ್ಯಾಯಕ್ಕೆ ಜಯವಾಗಿದೆ. ಪ್ರಧಾನಿಯ ಅಹಂಕಾರ ಹಾಗೂ ಅವರ ದ್ವೇಷ ರಾಜಕಾರಣ ಸೋತಿದೆ.–ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಇದೆಲ್ಲವೂ ಸೌಹಾರ್ದಯುತವಾಗಿ ನಡೆಯಬೇಕು.–ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾ ಪೀಠ
ಬರ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸಿತ್ತು. ನಮ್ಮ ರೈತರನ್ನು ಏಳು ತಿಂಗಳ ಕಾಲ ಸತಾಯಿಸಿತ್ತು. ಕೇಂದ್ರ ತಂಡ ವರದಿ ನೀಡಿದ ಒಂದು ತಿಂಗಳಲ್ಲಿ ಪರಿಹಾರ ನೀಡಬೇಕೆಂಬ ನಿಯಮ ಇದೆ. ಆದರೆ, ಕೇಂದ್ರ ಸರ್ಕಾರ ಅನ್ಯಾಯ ಮಾಡಿತ್ತು. ಇದೀಗ ರಾಜ್ಯ ಸರ್ಕಾರದ ಕಾನೂನು ಸಮರಕ್ಕೆ ಹಾಗೂ ರಾಜ್ಯದ ಜನತೆಗೆ ನ್ಯಾಯ ಸಿಕ್ಕಿದೆ.–ಕೃಷ್ಣ ಬೈರೇಗೌಡ, ಕಂದಾಯ ಸಚಿವ
2023–24ನೇ ಸಾಲಿನಲ್ಲಿ ಕರ್ನಾಟಕಕ್ಕೆ ನರೇಗಾ ಯೋಜನೆ ಅಡಿ ಒಟ್ಟು 13 ಕೋಟಿ ಮಾನವ ದಿನಗಳಷ್ಟು (ಎಂಟು ಗಂಟೆಗಳ ಒಂದು ಕೆಲಸವನ್ನು ಒಂದು ಮಾನವ ದಿನ ಎಂದು ಪರಿಗಣಿಸಲಾಗುತ್ತದೆ. 100 ಮಂದಿ ಒಂದೇ ದಿನದಲ್ಲಿ ಎಂಟು ತಾಸು ಕೆಲಸ ಮಾಡಿದರೆ, ಅದನ್ನು 100 ಮಾನವ ದಿನಗಳು ಎಂದು ಪರಿಗಣಿಸಲಾಗುತ್ತದೆ) ಉದ್ಯೋಗವನ್ನು ಕೇಂದ್ರ ಸರ್ಕಾರವು ಹಂಚಿಕೆ ಮಾಡಿತ್ತು. ತೀವ್ರ ಬರದ ಸ್ಥಿತಿ ಇರುವ ಕಾರಣದಿಂದ ರಾಜ್ಯ ಸರ್ಕಾರವು ಈಗಾಗಲೇ 12.40 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಒದಗಿಸಿದೆ. ಈ ಆರ್ಥಿಕ ವರ್ಷದ ಅಂತ್ಯದವರೆಗೆ ರಾಜ್ಯದ ಜನರಿಗೆ ಉದ್ಯೋಗ ಖಾತರಿಯನ್ನು ಒದಗಿಸಲು ಇನ್ನೂ ಹೆಚ್ಚುವರಿಯಾಗಿ 5 ಕೋಟಿ ಮಾನವ ದಿನಗಳವರೆಗೆ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.