ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿದ ಕೇಂದ್ರ, ಬಂತು ಪರಿಹಾರ: ಬರ ನಿರ್ವಹಣೆಗೆ ರಾಜ್ಯಕ್ಕೆ ₹3,454 ಕೋಟಿ ಬಿಡುಗಡೆ

Published 27 ಏಪ್ರಿಲ್ 2024, 20:39 IST
Last Updated 27 ಏಪ್ರಿಲ್ 2024, 20:39 IST
ಅಕ್ಷರ ಗಾತ್ರ

ನವದೆಹಲಿ: ಬರ ಪರಿಹಾರ ಬಿಡುಗಡೆಗಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ನಡೆಸಿದ ನಿರಂತರ ಸಂಘರ್ಷ ಹಾಗೂ ಕಾನೂನು ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರವು ₹3,454 ಕೋಟಿ ಬಿಡುಗಡೆ ಮಾಡಿದೆ.  

ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಉನ್ನತಾಧಿಕಾರ ಸಮಿತಿಯು ಕರ್ನಾಟಕ ಹಾಗೂ ತಮಿಳುನಾಡಿಗೆ ಬರ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಪರಿಹಾರ ಘೋಷಣೆಯಾದ ಬೆನ್ನಲ್ಲೇ, ಕರ್ನಾಟಕದ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಅಕ್ಟೋಬರ್‌ನಿಂದ ಹೋರಾಟ: ’ಬರ ಪರಿಹಾರ ನೀಡಬೇಕು’ ಎಂದು ಕೋರಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 2023ರ ಅಕ್ಟೋಬರ್‌ನಲ್ಲಿ ಮನವಿ ಸಲ್ಲಿಸಿದ್ದರು. ಈ ನಡುವೆ, ಕೇಂದ್ರದ ತಜ್ಞರ ತಂಡವು ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ವಿಸ್ತೃತ ವರದಿ ಸಲ್ಲಿಸಿತ್ತು. 

ಸಿದ್ದರಾಮಯ್ಯ ಅವರು ಡಿಸೆಂಬರ್‌ 19ರಂದು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಕುರಿತು ಗಮನಕ್ಕೆ ತಂದಿದ್ದರು. ಡಿಸೆಂಬರ್‌ 20ರಂದು ಅಮಿತ್‌ ಶಾ ಅವರನ್ನು ಭೇಟಿ ಮನವಿ ಸಲ್ಲಿಸಿದ್ದರು. ಡಿಸೆಂಬರ್‌ 23ರಂದು ಉನ್ನತ ಮಟ್ಟದ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಾ ವಾಗ್ದಾನ ನೀಡಿದ್ದರು. ಆದರೆ, 23ರಂದು ಸಭೆ ನಡೆದಿರಲಿಲ್ಲ. 

‘ಪರಿಹಾರ ಬಿಡುಗಡೆಗೆ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದ್ದು, ರಾಜ್ಯಕ್ಕೆ ದ್ರೋಹ ಎಸಗಿದೆ. ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ’ ಎಂದು ಆರೋಪಿಸಿ ಕಾಂಗ್ರೆಸ್‌ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಸತ್ಯಾಗ್ರಹ ನಡೆಸಿತ್ತು. ‘ರಾಜ್ಯ ಸರ್ಕಾರವು ವಿಳಂಬವಾಗಿ ಮನವಿ ಸಲ್ಲಿಸಿತ್ತು. ಹೀಗಾಗಿ, ಪರಿಹಾರ ಬಿಡುಗಡೆ ಆಗಿಲ್ಲ’ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿತ್ತು. ಚುನಾವಣಾ ನೀತಿಸಂಹಿತೆ ಜಾರಿಯಾದ ಕಾರಣ ಪರಿಹಾರ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಕೇಂದ್ರದ ಸಚಿವರು ಈಚೆಗೆ ಪ್ರತಿಕ್ರಿಯಿಸಿದ್ದರು. 

‘ಸುಪ್ರೀಂ’ ಕದ ತಟ್ಟಿದ್ದ ರಾಜ್ಯ: ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ, ರಾಜ್ಯ ಸರ್ಕಾರವು ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿತ್ತು. ಅರ್ಜಿಯ ವಿಚಾರಣೆಯನ್ನು ಏಪ್ರಿಲ್‌ 8ರಂದು ನಡೆಸಿದ್ದ ಬಿ.ಆರ್‌.ಗವಾಯಿ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠ, ‘ಅನುದಾನ ಬಿಡುಗಡೆ ಸೇರಿದಂತೆ ಯಾವುದೇ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಸಲ್ಲದು’ ಎಂದು ಕಿವಿಮಾತು ಹೇಳಿತ್ತು. ರಾಜ್ಯದ ಬೇಡಿಕೆ ಬಗ್ಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವುದಾಗಿ ಕೇಂದ್ರ ತಿಳಿಸಿತ್ತು. 

ಕಳೆದ ಸೋಮವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ, ‘ಪರಿಹಾರ ನೀಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ವಾಗ್ದಾನ ಮಾಡಿದ್ದರು. ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡುವಂತೆ ಕೋರಿದ್ದರು. ಇದೀಗ, ಪರಿಹಾರ ಬಿಡುಗಡೆಯಾಗಿದೆ. ಸೋಮವಾರದ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸುವ ಸಂಭವ ಇದೆ. 

‘ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸ ಲಾಗಿದೆ. ₹35 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದ್ದು, 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. ಹೀಗಾಗಿ, ಕೂಡಲೇ ಬರ ಪರಿಹಾರ ನೀಡಬೇಕು’ ಎಂಬುದು ರಾಜ್ಯ ಸರ್ಕಾರದ ಮನವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT