ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rains | ರಾಜ್ಯದ ವಿವಿಧೆಡೆ ನಾಳೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ!

Published : 29 ಸೆಪ್ಟೆಂಬರ್ 2024, 15:44 IST
Last Updated : 29 ಸೆಪ್ಟೆಂಬರ್ 2024, 15:44 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದ ವಿವಿಧೆಡೆ ಸೋಮವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಮೂರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.

ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಮೋಡಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಮೈಸೂರು, ಶಿರಸಿಯಲ್ಲಿ ಜೋರು ಮಳೆ

ಮೈಸೂರು: ನಗರದಲ್ಲಿ ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಿಗ್ಗೆ 6.45ರವರೆಗೆ ಗುಡುಗು, ಮಿಂಚು ಸಹಿತ ಜೋರು ಮಳೆ ಸುರಿಯಿತು.

ಭಾನುವಾರ ಸಂಜೆಯೂ ನಗರದಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆ ಬಿದ್ದಿತು. ಇದರಿಂದ, ದಸರಾ ಮಹೋತ್ಸವದ ಸಿದ್ಧತಾ ಕಾರ್ಯಕ್ಕೆ ಅಡ್ಡಿಯಾಯಿತು.

ಚಾಮರಾಜನಗರ, ಮಂಡ್ಯ, ಹಾಸನದಲ್ಲೂ ಮಳೆ ಸುರಿಯಿತು. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ಹಲವೆಡೆ ಶನಿವಾರ ರಾತ್ರಿ ಭಾರಿ ಮಳೆಯಾಯಿತು. ಕಂದೇಗಾಲದ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನ, ಪ್ರೌಢಶಾಲೆ ಆವರಣದಲ್ಲಿ ಎರಡು ಅಡಿ ಗಳಿಗೂ ಜಾಸ್ತಿ ನೀರು ಸಂಗ್ರಹವಾಗಿತ್ತು.
ಮೊಳೆದೊಡ್ಡಿ, ಕಲ್ಲುವೀರನಹಳ್ಳಿ,
ಕಂದೇಗಾಲದಲ್ಲಿ ಜಮೀನುಗಳು
ಜಲಾವೃತವಾಗಿದ್ದವು.

ಹುಬ್ಬಳ್ಳಿ ವರದಿ: ಧಾರವಾಡ, ಗದಗ, ಉತ್ತರ ಕನ್ನಡದ ಶಿರಸಿ ಸೇರಿದಂತೆ ಹಲವೆಡೆ ಭಾನುವಾರ ಸಾಯಂಕಾಲ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ಬಿಸಿದ ಧಗೆ, ಸೆಕೆಯಿಂದ ಬಸವಳಿದಿದ್ದ ಹುಬ್ಬಳ್ಳಿ ಜನತೆಗೆ ಸಂಜೆ ಸುರಿದ ಧಾರಾಕಾರ ಮಳೆ  ತಂಪೆರೆಯಿತು. ತಾಲ್ಲೂಕಿನ ಬ್ಯಾಹಟ್ಟಿ, ಕುಸುಗಲ್, ಹೆಬಸೂರು, ಧಾರವಾಡ ಜಿಲ್ಲೆಯ ಕುಂದಗೋಳ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಬಿರುಸಿನ ಮಳೆಯಾಗಿದೆ. ಉತ್ತರ ಕನ್ನಡದ ಶಿರಸಿ,
ಸಿದ್ದಾಪುರ, ಗದಗ ಬೆಟಗೇರಿ ಅವಳಿ ನಗರದಲ್ಲಿ ಮುಕ್ಕಾಲು ತಾಸು ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT