ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದಲ್ಲಿ ಸ್ಫೋಟ: ದೇಹ ಅಷ್ಟೇ ಅಲ್ಲ; ಬದುಕೂ ಛಿದ್ರ...

Last Updated 23 ಫೆಬ್ರುವರಿ 2021, 19:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಒಂದು ಗಂಟೆ ಸಮಯ. ಹಿರೇನಾಗವಲ್ಲಿ ಬಳಿ ನಿರ್ಜನವಾದ ಕ್ವಾರಿಯ ಕಚ್ಚಾ ರಸ್ತೆಯಲ್ಲಿ ಟಾಟಾ ಏಸ್ ಹೋಗುತ್ತಿತ್ತು. ವಾಹನ ಚಾಲನೆ ಮಾಡುತ್ತಿದ್ದ ಜಾರ್ಖಂಡ್‌ದ ರಿಯಾಜ್‌ಗೆ ತಾನು ಅಪಾಯಕಾರಿ ಸ್ಫೋಟಕವನ್ನು ಸಾಗಿಸುತ್ತಿದ್ದೇನೆ ಎನ್ನುವ ಮಾಹಿತಿಯೇ ಇರಲಿಲ್ಲ. ಅವರ ಹಿಂದೆ ವಾಹನದಲ್ಲಿ ನಾಲ್ಕು ಮಂದಿ ಕುಳಿತಿದ್ದರೆ, ಬೈಕಿನಲ್ಲಿ ಇಬ್ಬರು ಹಿಂಬಾಲಿಸುತ್ತಿದ್ದರು.

ಇದ್ದಕ್ಕಿದ್ದಂತೆ ಭಯಂಕರ ಸದ್ದು. ವಾಹನ ಚಾಲನೆ ಮಾಡುತ್ತಿದ್ದ ರಿಯಾಜ್‌ಗೆ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ಹಾಗೆಯೇ ಚಾಲನೆ ಮಾಡಿಕೊಂಡು ಹಳ್ಳಿಗೆ ಹೋದಾಗ ಮೈಯೆಲ್ಲಾ ರಕ್ತ. ನಂತರ ಕಂಡ ದೃಶ್ಯ ಅತ್ಯಂತ ಭಯಾನಕ. ಈ ಮಾಹಿತಿಯನ್ನು ರಿಯಾಜ್‌ 108 ಸಿಬ್ಬಂದಿ ಶಿವಪ್ಪ ಅವರಿಗೆ ನೀಡಿದ್ದಾರೆ.

‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಮಾತು ಸತ್ಯವಾದರೂ, ನಾವೆಷ್ಟು ಅಪಾಯಕಾರಿ ಸ್ಥಳದಲ್ಲಿ ಸ್ವಲ್ಪವೇ ಹಣಕ್ಕೆ ಪ್ರಾಣವನ್ನು ಪಣಕ್ಕಿಟ್ಟು ದುಡಿಯುತ್ತಿದ್ದೇವೆ ಎಂದು ತಿಳಿಯದೆ, ಮುಗ್ಧತೆಯಲ್ಲಿ ಯಾರದ್ದೋ ದುರಾಸೆಗೆ ಪ್ರಾಣತೆರಬೇಕಾಗಿದೆ ಎಂದು ರಿಯಾಜ್‌ ನೊಂದುಕೊಂಡರು.

ಆಂಧ್ರ ಪ್ರದೇಶದಿಂದ ಕೆಲಸಕ್ಕೆಂದು ಬಂದಿದ್ದ ಮೂವರು, ನೇಪಾಳದಿಂದ ಬಂದಿದ್ದವರೊಬ್ಬ, ಚೇಳೂರಿನ ಅಭಿಲಾಷ ಮತ್ತು ಹಿರೇನಾಗವಲ್ಲಿ ರಾಮು ಇವರೆಲ್ಲರ ದೇಹಗಳು ಛಿದ್ರವಾಗಿ 30 ರಿಂದ 40 ಅಡಿ ದೂರದಲ್ಲಿ ಬಿದ್ದಿದ್ದವು. ಅವರ ದೇಹವಷ್ಟೇ ಛಿದ್ರವಾಗಿಲ್ಲ, ಅವರನ್ನೇ ನಂಬಿದ್ದ ಅವರ ಕುಟುಂಬದ ಪರಿಸ್ಥಿತಿಯೂ.

ಚೇಳೂರಿನ ಅಭಿಲಾಷ್‌, ತನ್ನ ಗರ್ಭಿಣಿ ಪತ್ನಿ ಹಾಗೂ ಕುಟುಂಬದವರಿಗೆ ಕೆಲಸಕ್ಕೆ ಹೋಗುವೆನೆಂದು ಹೇಳಿ ಬಂದಿದ್ದರು. ರಾತ್ರಿ ಹತ್ತಕ್ಕೆ ಚಿಕ್ಕಪ್ಪ ನರಸಿಂಹಪ್ಪ ಫೋನ್ ಮಾಡಿದಾಗ ಮಾತನಾಡಿದವರು ಮೂರು ಗಂಟೆ ಹೊತ್ತಿಗೆ ಮೃತಪಟ್ಟಿದ್ದರು. ಹಿರೇನಾಗವಲ್ಲಿ ರಾಮು ಇತ್ತೀಚೆಗಷ್ಟೆ ಮದುವೆಯಾಗಿದ್ದರು. ನೇಪಾಳದ ವ್ಯಕ್ತಿ ದೇಹವನ್ನು ಗುರುತಿಸುವುದೇ
ಕಷ್ಟವಾಗಿದೆ.

ಮೂವರ ವಿರುದ್ಧ ಎಫ್‌ಐಆರ್‌

ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಜಿಲೆಟಿನ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಭ್ರಮರವಾಸಿನಿ ಕ್ರಷರ್‌ ಮಾಲೀಕ ಜಿ.ಎಸ್‌.ನಾಗರಾಜ್‌ ರೆಡ್ಡಿ, ಶಿವಾರೆಡ್ಡಿ ಹಾಗೂ ಸ್ಫೋಟಕಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಗಂಗೋಜಿ ರಾವ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದಾರೆ.

ಸರ್ಕಾರದ ವೈಫಲ್ಯ ಸಾಬೀತು: ಎಚ್‌ಡಿಕೆ

ಬೆಂಗಳೂರು: ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಸ್ಫೋಟವು ಅಕ್ರಮ ಗಣಿಗಾರಿಕೆ ನಿಯಂತ್ರಣದ ವಿಷಯದಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಸಾಬೀತುಪಡಿಸಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲೂ ಕಾರ್ಮಿಕರು ಮೃತಪಟ್ಟಿದ್ದರು. ಈ ಸರ್ಕಾರದ ಆಡಳಿತ ಇಂತಹ ಘಟನೆಗಳು ನಡೆದಾಗ ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ ನೀಡಿ ಬರುವುದಕ್ಕೆ ಸೀಮಿತವಾಗಿದೆ’ ಎಂದರು.

‘ಕಾನೂನು ಪಾಲನೆ ಕಡತಕ್ಕೆ ಸೀಮಿತವಾಗಿ. ಅಕ್ರಮವೋ, ಸಕ್ರಮವೋ ಪ್ರತಿ ತಿಂಗಳೂ ಚಂದಾ ವಸೂಲಿ ನಡೆಯುತ್ತಿದೆ. ಮಂತ್ರಿಗಳು, ಶಾಸಕರು ನೇರವಾಗಿ ಇಂತಹ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ನಿತ್ಯವೂ ಇಂತಹ ಘಟನೆಗಳು ನಡೆಯುತ್ತಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಹೋಟೆಲ್‌ಗೆ ಕರೆಸಿ ಬೇಡಿಕೆ: ‘ಮಂಡ್ಯ ಸಂಸದರು ಅಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಭಾರಿ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಬದ್ಧತೆಗೆ ನಾವು ತಲೆ ತಗ್ಗಿಸಬೇಕಾಗಿದೆ. ಗಣಿ ಸಚಿವರೂ ಸೋಮವಾರ ಮಂಡ್ಯಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಿ ಬಂದಿದ್ದಾರೆ. ಡಿವೈಎಸ್‌ಪಿಗಳು, ಅಧಿಕಾರಿಗಳು ಗಣಿ ಮಾಲೀಕರನ್ನು ಹೋಟೆಲ್‌ಗೆ ಕರೆದು ಚಂದಾ ಕೇಳಿರುವ ದಾಖಲೆಗಳು ನಮ್ಮ ಬಳಿ ಇವೆ’ ಎಂದರು.

ಜನಪ್ರತಿನಿಧಿಗಳಿಂದಲೇ ಅಕ್ರಮ ಗಣಿಗಾರಿಕೆ:ರಾಜ್ಯದಲ್ಲಿ‌ ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು 'ಚಿಕ್ಕಬಳ್ಳಾಪುರದ ಗಣಿಯಲ್ಲಿ ಜಿಲೆಟಿನ್ ಸ್ಪೋಟಕ್ಕೆ ಸರ್ಕಾರದ ಬೇಜವಾಬ್ದಾರಿತನ, ಅಧಿಕಾರಿಗಳ ಪ್ರೋತ್ಸಾಹವೇ ಕಾರಣ. ಸರ್ಕಾರದಲ್ಲಿ ಜನರ ಜೀವದ ಬಗ್ಗೆ ಕಮಿಟ್ಮೆಂಟ್ ಇಲ್ಲ. ಮಂತ್ರಿಗಳು ಪ್ರಕರಣ ನಡೆದಾಗ ಮಾತ್ರ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುತ್ತಾರೆ' ಎಂದು ದೂರಿದರು.

‘ಒಂದು ವಾರದ ಮುಂಚೆಯೇ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆದರೂ ಈ ಘಟನೆ ನಡೆದಿದ್ದು, ಅವರಿಗೆ ಮೊದಲೇ ಮಾಹಿತಿ ಇತ್ತು ಎನಿಸುತ್ತದೆ. ಇದರಲ್ಲಿ ಹೆಚ್ಚು ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಅಧಿಕಾರಿಗಳು ವ್ಯಾಮೋಹಕ್ಕೆ ಒಳಗಾಗಿದ್ದಾರೆ. ರಾಜಕಾರಣಿಗಳ ಒತ್ತಡದಲ್ಲಿಯೂ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT