ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | 108 ಅಡಿ ಎತ್ತರದ ಬಸವ ಪ್ರತಿಮೆಗೆ ಕ್ರಮ: ಸಿಎಂ ಬೊಮ್ಮಾಯಿ

Last Updated 15 ಮಾರ್ಚ್ 2023, 10:29 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸುತಗಟ್ಟಿ ಬಳಿ, ಘಟಪ್ರಭಾ ನದಿ ದಡದಲ್ಲಿ ಬಸವಣ್ಣನವರ 108 ಅಡಿ ಎತ್ತರದ ಪ್ರತಿಮೆ ಪ್ರತಿಷ್ಠಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ನಗರದಲ್ಲಿ ಬುಧವಾರ ಮಹಾನಗರ ಪಾಲಿಕೆಯಿಂದ ಬಸವೇಶ್ವರರ ವೃತ್ತದಲ್ಲಿ ಆಯೋಜಿಸಿದ್ದ ಬಸವಣ್ಣನವರ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ಘಟಪ್ರಭಾ ನದಿ ದಡದಲ್ಲಿ ಬಸವೇಶ್ವರರ ಬೃಹತ್‌ ಪ್ರತಿಮೆ ನಿಲ್ಲಿಸಬೇಕು ಎಂಬುದು ನಾಡಿನ ಹಲವು ಶ್ರೀಗಳ ಆಶಯವಾಗಿದೆ. ಪ್ರಭಾಕರ ಕೋರೆ ಅವರೂ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಹಿತಿ ತರಿಸಿಕೊಂಡು, ಪ್ರತಿಮೆ ಪ್ರತಿಷ್ಠಾಪನೆಯ ಜತೆಗೆ, ಆ ಸ್ಥಳವನ್ನು ವಿಶ್ವಮಟ್ಟದ ಪ್ರವಾಸಿ ತಾಣ ಮಾಡಲು ಕ್ರಮ ವಹಿಸುತ್ತೇನೆ’ ಎಂದರು.

‘ಬಸವಣ್ಣ ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡಿದ್ದಾನೆ. ಬಸವಣ್ಣನ ಕೆಲಸವೆಂದರೆ ಅದು ಜನರ ಕೆಲಸವೇ ಆಗಿರುತ್ತದೆ. ಎಲ್ಲಿಯವರೆಗೆ ಕನ್ನಡ ಭಾಷೆ ಇರುತ್ತದೆಯೋ ಅಲ್ಲಿಯವರೆಗೂ ಬಸವಣ್ಣ ಮತ್ತು ಅವನ ವಚನಗಳು ಅಜರಾಮರ’ ಎಂದರು.

‘ಅಸಮಾನತೆ ತೊಡೆದು ಹಾಕಲು ಬಸವಣ್ಣ ಹೋರಾಡಿದರು. ಆದರೆ, ಅದು ಇನ್ನೂ ಪೂರ್ಣವಾಗಿ ಸಾಧ್ಯವಾಗಿಲ್ಲ. ದೊಡ್ಡ ಮೂರ್ತಿ, ದೊಡ್ಡ ಕಟ್ಟಡಗಳನ್ನು ನಾವು ಕಟ್ಟಬಹುದು. ಆದರೆ, ಬಸವಣ್ಣನ ತತ್ವಗಳನ್ನು ಎಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸುತ್ತೇವೆ, ಪಾಲಿಸುತ್ತೇವೆ ಎಂಬುದರ ಮೇಲೆ ಯಶಸ್ಸು ನಿಂತಿದೆ’ ಎಂದರು.

ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ‘ಇಲ್ಲಿನ ಬಸವೇಶ್ವರರ ಸರ್ಕಲ್‌ನಲ್ಲಿ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರು ದಶಕ ಕಳೆದಿದೆ. ವೀರಶೈವ ಮಹಾಸಭಾದ ಮುಖಂಡರೊಂದಿಗೆ ಚರ್ಚೆ ಮಾಡಿ ಕಂಚಿನ ಮೂರ್ತಿ ಸ್ಥಾಪನೆ ಮಾಡಲು ಮುಂದಾಗಿದ್ದೇವೆ. ಮುಂಬೈನಲ್ಲಿ ಪ್ರಸಿದ್ಧ ಕಲಾವಿದರೊಬ್ಬರು ಕಂಚಿನ ಮೂರ್ತಿ ಸಿದ್ಧಗೊಳಿಸುತ್ತಿದ್ದಾರೆ’ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಬಸವೇಶ್ವರ ಸರ್ಕಲ್‌ನಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಜತೆಗೆ, ಅನುಭವ ಮಂಟಪದ ಥೀಮ್‌ ಪಾರ್ಕ್‌ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದ ತಕ್ಷಣ ಇಲ್ಲಿನ ಸ್ಥಳವನ್ನು ಇನ್ನಷ್ಟು ವಿಸ್ತರಿಸಿ ಮಾದರಿಯಾದ ಅನುಭವ ಮಂಟಪ ಪಾರ್ಕ್‌ ಸಿದ್ಧಗೊಳ್ಳಲಿದೆ’ ಎಂದರು.

ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಗದಗ– ಡಂಬಳ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಅನಿಲ ಬೆನಕೆ, ದುರ್ಯೋಧನ ಐಹೊಳೆ, ಚನ್ನರಾಜ ಹಟ್ಟಿಹೊಳಿ, ಮೇಯರ್ ಶೋಭಾ ಸೋಮನಾಚೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT