ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ಹೆಚ್ಚಳ: ಸುಗ್ರೀವಾಜ್ಞೆಗೆ ಬಸವರಾಜ ಬೊಮ್ಮಾಯಿಗೆ ಸಲಹೆ

Last Updated 14 ಅಕ್ಟೋಬರ್ 2022, 15:39 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇಕಡ 6 ರಷ್ಟು ಹೆಚ್ಚಿಸುವ ನಿರ್ಧಾರವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವಂತೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್ ದಾಸ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ.

ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವರದಿ ನೀಡಿದ್ದ ಆಯೋಗದ ಮುಖ್ಯಸ್ಥರಾಗಿದ್ದ ನಾಗಮೋಹನ್‌ ದಾಸ್‌ ಅವರೊಂದಿಗೆ ಮುಖ್ಯಮಂತ್ರಿಯವರು ಶುಕ್ರವಾರ ಚರ್ಚೆ ನಡೆಸಿ, ಸಲಹೆ ಪಡೆದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

‘ಕೇವಲ ಸರ್ಕಾರಿ ಆದೇಶದ ಮೂಲಕ ಮೀಸಲಾತಿ ಹೆಚ್ಚಿಸಿದರೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದು. ಮಸೂದೆಯೊಂದನ್ನು ರೂಪಿಸಿ, ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು. ಬಳಿಕ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಬೇಕು. ಆರು ತಿಂಗಳೊಳಗೆ ತಿದ್ದುಪಡಿ ಮಸೂದೆಗೆ ವಿಧಾನ ಮಂಡಲದ ಒಪ್ಪಿಗೆ ಪಡೆಯಬೇಕು. ನಂತರ ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬ ಸಲಹೆಯನ್ನು ನಾಗಮೋಹನ್‌ ದಾಸ್‌ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ತಕ್ಷಣವೇ ತಿದ್ದುಪಡಿ ಮಸೂದೆಯ ಕರಡು ಸಿದ್ಧಪಡಿಸುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲೇ ತಿದ್ದುಪಡಿ ಮಸೂದೆಗೆ ಸಂಪುಟದ ಒಪ್ಪಿಗೆ ಪಡೆದು, ಸುಗ್ರೀವಾಜ್ಞೆ ಜಾರಿಗೊಳಿಸಲು ರಾಜ್ಯಪಾಲರ ಅನುಮತಿ ಕೋರಲು ಬೊಮ್ಮಾಯಿ ನಿರ್ಧರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT