ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಜಿ ವರದಿ ಮೇಲೆ ತನಿಖೆ ಯಾವಾಗ?: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

'ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎಂದಿದ್ದ ಪ್ರಧಾನಿ ಹಗರಣಗಳ ತನಿಖೆಗೆ ಆದೇಶಿಸಲಿ'
Published 18 ಆಗಸ್ಟ್ 2023, 16:10 IST
Last Updated 18 ಆಗಸ್ಟ್ 2023, 16:10 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾಲೇಖಪಾಲರ (ಸಿಎಜಿ) ವರದಿಯು ಕೇಂದ್ರ ಸರ್ಕಾರದಲ್ಲಿ ನಡೆದಿರುವ ಹಲವು ಹಗರಣಗಳನ್ನು ಬಹಿರಂಗಪಡಿಸಿದೆ. ‘ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ’ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಹಗರಣಗಳ ಬಗ್ಗೆ ತನಿಖೆಗೆ ಆದೇಶಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಗುತ್ತಿಗೆದಾರರು ಮಾಡಿದ್ದ ಶೇಕಡ 40ರಷ್ಟು ಕಮಿಷನ್‌ ಆರೋಪದ ಬಗ್ಗೆ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್ ದಾಸ್‌ ನೇತೃತ್ವದ ಸಮಿತಿ ರಚಿಸಿ ನುಡಿದಂತೆ ನಡೆದಿದ್ದೇವೆ. ಸಿಎಜಿ ವರದಿಯ ಮೇಲೆ ಯಾವಾಗ ತನಿಖೆ ನಡೆಸುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

‘ನಿಮ್ಮ ಮೂಗಿನಡಿಯಲ್ಲೇ ದ್ವಾರಕಾ ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ ₹ 250 ಕೋಟಿ ಕೊಳ್ಳೆ ಹೊಡೆಯಲಾಗಿದೆ. ಐದು ಟೋಲ್‌ ಕೇಂದ್ರಗಳಲ್ಲಿ ₹ 132 ಕೋಟಿ ಲೂಟಿ ಮಾಡಲಾಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ 88,000 ಮೃತ ವ್ಯಕ್ತಿಗಳ ಹೆಸರಿನಲ್ಲೂ ಬಿಲ್‌ ಸೃಷ್ಟಿಸಿ ಹಣ ನುಂಗಿರುವುದು ಸಿಎಜಿ ವರದಿಯಲ್ಲಿದೆ. ಈ ಬಗ್ಗೆ ತನಿಖೆ ನಡೆಸುವ ಧೈರ್ಯ ತೋರುತ್ತೀರಾ’ ಎಂದು ಕೇಳಿದ್ದಾರೆ.

‘ಭಾರತ್‌ ಮಾಲಾ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ ₹ 15.37 ಕೋಟಿಯಿಂದ ₹ 32 ಕೋಟಿಗಳವರೆಗೆ ಹೆಚ್ಚುವರಿ ವೆಚ್ಚ ತೋರಿಸಲಾಗಿದೆ. ಈ ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ವಿಸ್ತೃತ ಯೋಜನಾ ವರದಿ ಇಲ್ಲದೆ ₹ 3,500 ಕೋಟಿ ವರ್ಗಾಯಿಸಲಾಗಿತ್ತು ಎಂಬ ಉಲ್ಲೇಖ ಸಿಎಜಿ ವರದಿಯಲ್ಲಿದೆ. ಈ ಬಗೆಗಿನ ನಿಮ್ಮ ಮೌನವನ್ನು ಅಕ್ರಮದಲ್ಲಿ ಶಾಮೀಲಾಗಿದ್ದೀರಿ ಎಂಬುದಾಗಿ ವ್ಯಾಖ್ಯಾನಿಸಬಹುದೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT