ಬೆಂಗಳೂರು: ನಾಡಿಗೆ ‘ಕರ್ನಾಟಕ’ವೆಂದು ಮರು ನಾಮಕರಣ ಮಾಡಿ 50 ವರ್ಷಾಚರಣೆಯ ಸಂಭ್ರಮದ ಹೊತ್ತಿನಲ್ಲಿ, ‘ಸ್ವಾಭಿಮಾನಿ_ ಕನ್ನಡಿಗರ ಪ್ರಶ್ನೆ’ ಎಂಬ ಹ್ಯಾಷ್ ಟ್ಯಾಗ್‌ನಡಿ ‘ಎಕ್ಸ್’ನಲ್ಲಿ ಅಭಿಯಾನ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
‘ಕೇಂದ್ರದ @BJP4Indiaಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಪ್ರಧಾನಿ @narendramodiಅವರೇ, ಇದು ಆರೂವರೆ ಕೋಟಿ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ #AnswerMadiModi’ ಎಂದು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಬಿಂಬಿಸುವ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಪ್ರತ್ಯೇಕ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಆರೋಪಗಳ ವಾಗ್ದಾಳಿಗೆ ಸಿದ್ದರಾಮಯ್ಯ ರೂಪಿಸಿರುವ ಪ್ರತಿತಂತ್ರ ಇದಾಗಿದೆ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಮುನ್ನವೇ ಕನ್ನಡಿಗ ಮತದಾರರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
‘ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ನಡವಳಿಕೆಗಳು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ವಿರುದ್ಧವಾಗಿ ಇರುವುದರಿಂದ ಅದರ ವಿರುದ್ಧ ಧ್ವನಿ ಎತ್ತುವುದು ಅನಿವಾರ್ಯವೆಂದು ಭಾವಿಸಿ ಇವತ್ತಿನಿಂದಲೇ ‘ಸ್ವಾಭಿಮಾನಿ_ ಕನ್ನಡಿಗರ ಪ್ರಶ್ನೆ ಹ್ಯಾಷ್‌ಟ್ಯಾಗ್ ಅಡಿ ಸಾಮಾಜಿಕ ಜಾಣತಾಣದಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ಮಾಡಿರುವ ಅವರು, ‘ನಿಮ್ಮ ನೇತೃತ್ವದ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ. ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂದಿದ್ದಾರೆ.
‘ನಮ್ಮ ನಾಡು ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕರ್ನಾಟಕ ಸಾಗಿ ಬಂದ ಹಾದಿ ಸ್ಮರಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಅನ್ಯಾಯದ ಸರಮಾಲೆ ಮುಂದುವರಿದಿದೆ. ನಿರಂತರವಾಗಿ ಸ್ವಾಭಿಮಾನಿ ಕನ್ನಡಿಗರನ್ನು ನಿರ್ಲಕ್ಷಿಸಿ ಅವಮಾನಿಸಲಾಗುತ್ತಿದೆ ಎಂದು ದೂರಿರುವ ಅವರು, ಅದಕ್ಕೆ ಕೆಲವು ಅಂಕಿ ಅಂಶಗಳನ್ನೂ ಲಗತ್ತಿಸಿದ್ದಾರೆ.
- ಸಿದ್ದರಾಮಯ್ಯ ಕಿಡಿ ನುಡಿ
* ರಾಜ್ಯದ 216 ತಾಲ್ಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ. ಈವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ‘ಪ್ರಧಾನಿ ಮೋದಿ ಅವರೇ ಜಗತ್ತಿನ ಕಷ್ಟಕ್ಕೆಲ್ಲ ದುಃಖಕ್ಕೆಲ್ಲ ಮಿಡಿಯುವ ನಿಮ್ಮ ವಿಶಾಲ ಹೃದಯ ಕನ್ನಡಿಗರ ಬಗ್ಗೆ ಇಷ್ಟೊಂದು ಕಟುವಾಗಿರುವುದು ಏಕೆ?’
*ಬರಗಾಲದಿಂದಾಗಿ ಸುಮಾರು ₹33770 ಕೋಟಿ ನಷ್ಟ ಆಗಿದೆ. ₹17901 ಕೋಟಿ ಪರಿಹಾರ ಕೇಳಿದ್ದೇವೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 2017ರ ಬರದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸಿತ್ತು. ₹30 ಸಾವಿರ ಕೋಟಿ ನಷ್ಟ ಆಗಿತ್ತು. ಕೇಂದ್ರದಿಂದ ಸಿಕ್ಕಿದ ಪರಿಹಾರ ₹1435 ಕೋಟಿ. ಮಹಾರಾಷ್ಟ್ರಕ್ಕೆ ₹8195 ಕೋಟಿ ಗುಜರಾತ್‌ಗೆ ₹3894 ಕೋಟಿ ರಾಜಸ್ಥಾನಕ್ಕೆ ₹2153 ಕೋಟಿ ಪರಿಹಾರ ನೀಡಿತ್ತು.
* ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಅನುದಾನ ತೆರಿಗೆಯಲ್ಲಿ ಪಾಲು ಬರ ಮತ್ತು ಜಿಎಸ್‌ಟಿ ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಮತ್ತು ಐಬಿಪಿಎಸ್ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ನೀಡದೇ ಲಕ್ಷಾಂತರ ಯುವ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ.
* ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ. ನಾಡಿನ ರೈತರ ಜೀವನಾಧಾರವಾಗಿರುವ ಕಾವೇರಿ ಮಹದಾಯಿ ಕೃಷ್ಣಾ ಭದ್ರಾ ಮೇಲ್ದಂಡೆ ಮೊದಲಾದ ನದಿಗಳ ನೀರಾವರಿ ಯೋಜನೆಗಳಿಗೆ ಬೆಂಬಲ ನೀಡದೇ ಅನ್ನದಾತನನ್ನು ಸಂಕಷ್ಟಕ್ಕೆ ನೂಕಲಾಗಿದೆ.
* ಕನ್ನಡಿಗರೇ ಬೆವರು–ರಕ್ತ ಸುರಿಸಿ ಕಟ್ಟಿ ಬೆಳೆಸಿದ ಕರ್ನಾಟಕದ ಹೆಮ್ಮೆಯ ವಿಜಯಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಕಾರ್ಪೊರೇಷನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೊದಲಾದ ಲಾಭದಲ್ಲಿದ್ದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ.
‘ಕನ್ನಡ ಧ್ವಜಕ್ಕೆ ಒಪ್ಪಿಗೆ ನೀಡದ ಕೇಂದ್ರ’
‘ರಾಜ್ಯದಲ್ಲಿ ಪ್ರತ್ಯೇಕ ಧ್ವಜ ಹೊಂದುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿಲ್ಲ. ಈ ಕಾರಣದಿಂದ ಈ ಬಾರಿಯ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜ ಹಾರಿಸುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ‘ಹಳದಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡ ಕನ್ನಡ ಧ್ವಜ ಅಳವಡಿಸಿಕೊಳ್ಳುವ ಪ್ರಸ್ತಾವ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಒಪ್ಪಿಗೆ ನೀಡುವಂತೆ ಕೇಂದ್ರಕ್ಕೆ ಮತ್ತೆ ಪತ್ರ ಬರೆಯಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.