ಬೆಂಗಳೂರು: ‘ಕಳ್ಳರು, ಗಾಂಜಾ ಪೆಡ್ಲರ್‌ಗಳ ಜತೆ ಸಂಬಂಧ ಹೊಂದಿದ ಕಾರಣಕ್ಕೆ ಕಳೆದ ತಿಂಗಳು ಅಮಾನತುಗೊಂಡಿದ್ದ ಹೆಡ್ ಕಾನ್‌ಸ್ಟೆಬಲ್ ಸಲೀಂ ಪಾಷಾಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ’ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಸಲೀಂ ಪಾಷಾ ಅವರ ಅಮಾನತು ಆದೇಶ ಪ್ರತಿಯನ್ನು ‘ಎಕ್ಸ್’ನಲ್ಲಿ ಟ್ಯಾಗ್ ಮಾಡಿರುವ ಬಿಜೆಪಿ, ‘ಖದೀಮರು, ರೌಡಿಗಳು, ದುಷ್ಟ– ದುರುಳರು, ಕಾಮುಕರು, ಭಯೋತ್ಪಾದಕರಿಗೆ ಕಾಂಗ್ರೆಸ್ ಸರ್ಕಾರ ರತ್ನಗಂಬಳಿ ಹಾಕಿ ರಾಜ ಮರ್ಯಾದೆ ಕೊಡುತ್ತಿರುವುದು ಇದು ಮೊದಲೂ ಅಲ್ಲ ಕೊನೆಯೂ ಅಲ್ಲ’ ಎಂದು ಹೇಳಿದೆ.
‘ಪೊಲೀಸ್ ಇಲಾಖೆಯನ್ನೇ ಹಾಳು ಮಾಡಿರುವ ಗೃಹಮಂತ್ರಿ ಜಿ.ಪರಮೇಶ್ವರ ಅವರಿಗೆ ಇಲಾಖೆ ಹಿಡಿತದಲ್ಲೇ ಎಂಬುದು ಸ್ಪಷ್ಟವಾಗಿದೆ. ಕಪ್ಪುಚುಕ್ಕೆಗಳ ಸರದಾರ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿದ್ರೋಹಿಗಳಿಗೆ ಪದಕ ವಿತರಿಸುತ್ತಿರುವುದು ನಾಡಿನ ಜನರಿಗೆ ಆಶ್ಚರ್ಯ ಉಂಟು ಮಾಡುತ್ತಿಲ್ಲ’ ಎಂದು ಕಿಡಿಕಾರಿದೆ.