ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಖರೀದಿ ದರ ಹೆಚ್ಚಳ: ಜುಲೈ 11ರಂದು ಸಿಎಂ ಜೊತೆ ಸಭೆ- ಸಹಕಾರ ಸಚಿವ ಕೆ.ಎನ್.ರಾಜಣ್ಣ

Published 8 ಜುಲೈ 2023, 11:04 IST
Last Updated 8 ಜುಲೈ 2023, 11:04 IST
ಅಕ್ಷರ ಗಾತ್ರ

ಮೈಸೂರು: ‘ರೈತರಿಂದ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ ₹ 5 ಹೆಚ್ಚಿಸಬೇಕೆಂಬ ಅಭಿಲಾಷೆ ನಮ್ಮದಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜುಲೈ 11ರಂದು ಚರ್ಚಿಸಲಾಗುವುದು. ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಬಂದು ಮನವರಿಕೆ ಮಾಡಿಕೊಡಬೇಕು’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಹಾಲಿನ ದರ ಏರಿಕೆಯಲ್ಲಿ ಎರಡು ಅಂಶವಿದೆ. ಖರೀದಿ ದರ ಹಾಗೂ ಮಾರಾಟದ ದರ. ಯಾವುದನ್ನು ಹೆಚ್ಚಿಸಬೇಕು ಎನ್ನುವ ಪ್ರಶ್ನೆಯೂ ಇದೆ. ಉತ್ಪಾದಕರಿಗೂ ಅನಾನುಕೂಲ ಆಗದಂತೆ ಹಾಗೂ ಗ್ರಾಹಕರಿಗೂ ಹೊರೆಯಾಗದಂತೆ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

‘ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಹಾಲು ಖರೀದಿ ದರ (ಉತ್ಪಾದಕರಿಗೆ ಕೊಡುವುದು) ಹಾಗೂ ಮಾರಾಟ ದರ ನಮ್ಮಲ್ಲೇ ಕಡಿಮೆ ಇದೆ. ಮೇವು, ಫೀಡ್ಸ್‌ ದರವೂ ಜಾಸ್ತಿಯಾಗಿದೆ. ಇದೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಉತ್ಪಾದಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ನಮ್ಮದು’ ಎಂದರು.

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸದ್ಯ 2–3 ಗ್ರಾಮ ಪಂಚಾಯಿತಿಗಳಿಗೆ ಒಂದರಂತೆ ಇವೆ. ಪ್ರತಿ ಪಂಚಾಯಿತಿಗೊಂದನ್ನು ಸ್ಥಾಪಿಸಬೇಕು. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಇದನ್ನು ಅನುಷ್ಠಾನಗೊಳ್ಳಬೇಕು’ ಎಂದು ಸೂಚಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ, ತಾಕತ್ತಿದ್ದರೆ ಕೂಡಲೇ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಬುಟ್ಟಿಯಲ್ಲಿ ಹಾವಿದೆ, ಹಾವಿದೆ ಎನ್ನುವುದು ಥರವಲ್ಲ. ವರ್ಗಾವಣೆ ದಂಧೆ ನಡೆಯುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದುದು. ಸಾಮಾನ್ಯ ವರ್ಗಾವಣೆ ನಡೆಯುತ್ತಿದೆಯಷ್ಟೆ. ಪೆನ್‌ಡ್ರೈವ್‌ನಲ್ಲಿರುವುದನ್ನು ಬಿಡುಗಡೆಗೊಳಿಸದೇ, ತಡ ಮಾಡುವ ಮೂಲಕ ಅವರೇ ದಂಧೆ ನಡೆಸುತ್ತಿದ್ದಾರೆಯೇ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT