ಮಂಡ್ಯ: ಮೂರು ತಿಂಗಳಿಂದೀಚೆಗೆ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಹಾಗೂ ಸುರುಳಿಯಾಕಾರದ ಬಿಳಿ ನೊಣ ಬಾಧೆ ಕಾಣಿಸಿಕೊಂಡಿದ್ದು, ಲಕ್ಷಕ್ಕೂ ಹೆಚ್ಚು ಮರಗಳು ಒಣಗಿ ಹೋಗಿವೆ. ಒಣಗಿದ ಮರಗಳನ್ನು ಕಡಿಯುತ್ತಿರುವ ರೈತರು ಸಾಮಿಲ್ಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ.

ಕೀಟಬಾಧೆಯಿಂದಾಗಿ 45 ಸಾವಿರ ಮರಗಳ ಸುಳಿ ಸಂಪೂರ್ಣವಾಗಿ ಒಣಗಿವೆ. ಪಾಂಡವಪುರ, ಕೆ.ಆರ್.ಪೇಟೆ. ನಾಗಮಂಗಲ ಹಾಗೂ ಮದ್ದೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಮರಗಳನ್ನು ಕತ್ತರಿಸಲಾಗಿದೆ. ಮನೆ ನಿರ್ಮಿಸುವವರಿಗೆ ತೀರು, ಜಂತಿ, ತೊಲೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರೈತರಿಗೆ ಆರ್ಥಿಕ ಭದ್ರತೆ ನೀಡಿದ್ದ ತೆಂಗಿನಮರಗಳಿಗೆ ಕೀಟಬಾಧೆ ಉಂಟಾಗಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ಈವರೆಗೆ 15 ಸಾವಿರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸುತ್ತಿದ್ದು 45 ಸಾವಿರ ಮರಗಳಿಗೆ ತಲಾ ₹ 400 ಪರಿಹಾರ ನೀಡುವುದಾಗಿ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದ್ದಾರೆ. ತೋಟಕ್ಕೆ ವಿಮೆ ಮಾಡಿಸಿದ್ದರೆ ವಿಮಾ ಕಂಪನಿಯಿಂದಲೂ ಪರಿಹಾರ ಪಡೆಯಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

‘ಕಳೆದ ನಾಲ್ಕು ವರ್ಷಗಳಿಂದ ನುಸಿಪೀಡೆಗೆ ತುತ್ತಾಗಿದ್ದ ತೆಂಗಿನಮರಗಳು ಬೆತ್ತಲಾಗಿ ನಿಂತಿದ್ದವು. ಇಳುವರಿ ಕುಸಿದು ರೈತರು ನಷ್ಟ ಅನುಭವಿಸಿದ್ದರು. ಈಗ ತೋಟದಲ್ಲಿ ನೀರಾಡುತ್ತಿದೆ. ಆದರೆ ಹೊಸ ರೋಗ ಕಾಣಿಸಿಕೊಂಡಿದ್ದು ಮರ ಸಂಪೂರ್ಣವಾಗಿ ಹಾಳಾಗುತ್ತಿವೆ. ಕಣ್ಣಮುಂದೆಯೇ ಸುಳಿ ಒಣಗಿ ಹೋಗುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಹಣವಾದರೂ ಬರಲಿ ಎಂಬ ಕಾರಣಕ್ಕೆ ಮರ ಕಡಿದು ಮಾರಾಟ ಮಾಡುತ್ತಿದ್ದೇವೆ’ ಎಂದು ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ರೈತ ನಿಂಗಪ್ಪಗೌಡ ಹೇಳಿದರು.

ತಮಿಳುನಾಡಿನಿಂದ ಬಂದ ರೋಗ: ಕಳೆದ ಎರಡು ವರ್ಷಗಳ ಹಿಂದೆ ಈ ಎರಡೂ ಕೀಟಗಳ ಕಾಟ ತಮಿಳುನಾಡಿನಲ್ಲಿ ಕಾಣಿಸಿಕೊಂಡ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ಮಾಹಿತಿ ಇದೆ. ಕಪ್ಪುತಲೆ ಹುಳು ತೆಂಗಿನ ಗರಿಯ ಬುಡ ತಿನ್ನುವ ಕಾರಣ ಗರಿ ಒಣಗಿ ಬೀಳುತ್ತದೆ. ಸುರಳಿಯಾಕಾರದ ಬಿಳಿ ನೊಣದ ದಾಳಿಯಿಂದ ತೆಂಗಿನ ಮರದ ಸುಳಿ ಒಣಗಿ ಕಳಚುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಬೇವಿನ ಎಣ್ಣೆ ಸಿಂಪಡಿಸಲು ಸೂಚನೆ: ಕಪ್ಪುತಲೆ ಹುಳು ಹಾಗೂ ಸುರಳಿಯಾಕಾರದ ಬಿಳಿ ನೊಣದ ಬಾಧೆ ಹೆಚ್ಚಳವಾಗುತ್ತಿದ್ದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ರೈತರು ಬೇವಿನ ಎಣ್ಣೆಯನ್ನು ವಾರದಲ್ಲಿ ಮೂರು ದಿನ ಸಿಂಪಡಣೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ಕುರಿತು ಅರಿವು ಮೂಡಿಸಲು ರೈತರಿಗೆ ಭಿತ್ತಿ ಪತ್ರ ಹಂಚುತ್ತಿದ್ದಾರೆ.

‘ಸಮಗ್ರ ನೀರು ನಿರ್ವಹಣೆ ಹಾಗೂ ಗೊಬ್ಬರ ನಿರ್ವಹಣೆ ಕೊರತೆಯಿಂದ ಕೀಟ ಬಾಧೆ ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಬಿಳಿ ನೊಣ ಕಾಣಿಸಿಕೊಂಡಿದೆ. ಈ ನೊಣ ಹೆಚ್ಚು ಕಾಲ ಜೀವಂತವಾಗಿರುವುದಿಲ್ಲ. ಹೀಗಾಗಿ ಇದನ್ನು ನಾಶ ಮಾಡುವುದು ಬಹಳ ಸುಲಭ. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಬೇವಿನ ಎಣ್ಣೆಯನ್ನು ಮೂರು ಬಾರಿ ಸಿಂಪಡಿಸಿದರೆ ರೋಗ ನಿಯಂತ್ರಿಸಬಹುದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ರಾಜು ತಿಳಿಸಿದರು.

ಮರ ಕಡಿಯದಿರಲು ಸಲಹೆ

ಕೀಟಬಾಧೆಗೆ ಒಳಗಾದ ಮರಗಳನ್ನು ಕತ್ತರಿಸಬಾರದು. ತೆಂಗಿನ ಗರಿ ಒಣಗುತ್ತಿರುವುದು ಗೊತ್ತಾದ ಕೂಡಲೇ ಬೇವಿನ ಎಣ್ಣೆ ಸಿಂಪಪಡಿಸಬೇಕು. ಸುಳಿ ಒಣಗುವುದಕ್ಕೂ ಮೊದಲೂ ಈ ಕಾರ್ಯ ಮಾಡಿದರೆ ಮರ ರಕ್ಷಣೆ ಮಾಡಬಹುದು. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಮದ್ದೂರು ತಾಲ್ಲೂಕಿನಿಂದ ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಳೆಗಾರರು ತೋಟಗಾರಿಕೆ ವಿಜ್ಞಾನಿಗಳ ಮಾರ್ಗದರ್ಶನ ಪಡೆದು ನೀರು, ಗೊಬ್ಬರ ನಿರ್ವಹಣೆ ಮಾಡಿದರೆ ತೆಂಗಿನಮರ ಮತ್ತೆ ಹಸಿರಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.