ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಖರೀದಿ ಪ್ರಕ್ರಿಯೆ ಒಂದು ವಾರ ಸ್ಥಗಿತ

Published 14 ಫೆಬ್ರುವರಿ 2024, 14:20 IST
Last Updated 14 ಫೆಬ್ರುವರಿ 2024, 14:20 IST
ಅಕ್ಷರ ಗಾತ್ರ

ಬೆಂಗಳೂರು: ಕೊಬ್ಬರಿ ಖರೀದಿಗಾಗಿ ರೈತರ ನೋಂದಣಿಯಲ್ಲಿ ಅಕ್ರಮ ನಡೆದಿರುವುದರಿಂದ ಒಂದು ವಾರ ಖರೀದಿ ತಡೆ ಹಿಡಿದಿದ್ದು, ಬಳಿಕ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ವಿಧಾನಸಭೆಯಲ್ಲಿ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಮತ್ತು ಇತರರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ರೈತರ ನೋಂದಣಿ ಪ್ರಕ್ರಿಯೆಯಲ್ಲಿ ಲೋಪಗಳು ಕಂಡು ಬಂದಿವೆ. ದಲ್ಲಾಳಿಗಳೂ ರೈತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ಹೇಳಿದರು.

ಅಲ್ಲದೇ, ಇಲಾಖೆಯಿಂದ ಖರೀದಿಸಲಾಗಿದ್ದ ಕಂಪ್ಯೂಟರ್‌ ಬದಲಿಗೆ ಅಧಿಕಾರಿಗಳು ಮತ್ತು ಹೊರಗುತ್ತಿಗೆ ಸಿಬ್ಬಂದಿ ತಾವೇ ಪ್ರತ್ಯೇಕ ಕಂಪ್ಯೂಟರ್‌ ಖರೀದಿಸಿ ಅದನ್ನು ರೈತರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ನೋಂದಣಿ ಮಾಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇದು ವ್ಯಾಪಕವಾಗಿ ಕಂಡು ಬಂದಿದೆ. ಬೇರೆ ಜಿಲ್ಲೆಗಳ 3,500 ರೈತರನ್ನು ಹಾಸನದಲ್ಲಿ ನೋಂದಣಿ ಮಾಡಲಾಗಿದೆ. ತೆಂಗು ಅತಿ ಹೆಚ್ಚು ಬೆಳೆಯುವ ತುಮಕೂರು ಜಿಲ್ಲೆಯಲ್ಲಿ ನೋಂದಣಿ ಕಡಿಮೆಯಾಗಿದೆ. ಆದ್ದರಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿ, 9 ಮಂದಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವಂಚಿಸಿರುವವರ ವಿರುದ್ಧ ಮೊಕದ್ದಮೆ ಕೂಡ ದಾಖಲಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆಯನ್ನು ಪರಿಷ್ಕರಣೆಗೊಳಪಡಿಸಲಾಗುತ್ತಿದ್ದು, ಅಲ್ಲಿಯವರೆಗೆ ತಾತ್ಕಾಲಿಕವಾಗಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗುತ್ತದೆ ಎಂದರು.

ಈ ಮೊದಲು ಕೇಂದ್ರ ಸರ್ಕಾರ ಏಳು ತಿಂಗಳವರೆಗೂ ಕೊಬ್ಬರಿ ಖರೀದಿಗೆ ಅವಕಾಶ ನೀಡಿತ್ತು. ಪ್ರಸ್ತುತ 3 ತಿಂಗಳಿನಂತೆ ಎರಡು ಅವಧಿಗೆ ಖರೀದಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಖರೀದಿಯಲ್ಲಿ ನಾಫೆಡ್‌ ₹200 ಕೋಟಿ ನಷ್ಟ ಅನುಭವಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಶಿವಾನಂದ ಪಾಟೀಲ ತಿಳಿಸಿದರು.

ಉಂಡೆ ಕೊಬ್ಬರಿಯನ್ನು ಶೇ 25ರಷ್ಟು ಖರೀದಿಸಲು ಅವಕಾಶವಿದೆ. ಆ ಪ್ರಮಾಣವನ್ನು ಶೇ 50ಕ್ಕೆ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಹಾಗೆಯೇ ಹೋಳಾಗಿರುವ ಮಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT