ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆಗೆ ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಷ್ಟ್ರಪತಿಯನ್ನು ಭೇಟಿ ಮಾಡಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಗುರುವಾರ ನಡೆಯಿತು.
ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಶುಕ್ರವಾರ (ಆಗಸ್ಟ್ 23) ನಾನು ಮತ್ತು ಡಿ.ಕೆ. ಶಿವಕುಮಾರ್ ಪಕ್ಷದ ವರಿಷ್ಠರನ್ನು ದೆಹಲಿಯಲ್ಲಿ ಭೇಟಿ ಮಾಡುತ್ತೇವೆ. ದೆಹಲಿಯಲ್ಲಿ ಹೋರಾಟ ನಡೆಸುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ’ ಎಂದಿದ್ದಾರೆ.
ಸಭೆಯ ಬಳಿಕ ಮುಖ್ಯಮಂತ್ರಿ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಮುಡಾ ವಿಚಾರದಲ್ಲಿ ಪಕ್ಷದ ಎಲ್ಲ ಶಾಸಕರು ಸರ್ವಾನುಮತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಒಮ್ಮತದ ನಿರ್ಧಾರವನ್ನು ಆರ್.ವಿ. ದೇಶಪಾಂಡೆ ಮಂಡಿಸಿದರು. ಅದನ್ನು ತನ್ವೀರ್ ಸೇಠ್ ಅನುಮೋದಿಸಿದರು. ಶಾಸಕಾಂಗ ಸಭೆಯಲ್ಲಿ ಬಹಳ ವಿಚಾರ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಸರಿಯಾದ ತನಿಖೆ ನಡೆಸದೆ ವಿಚಾರಣೆಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ನಡೆಯನ್ನು ಸರ್ವಾನುಮತದಿಂದ ಖಂಡಿಸಿದ್ದೇವೆ’ ಎಂದರು.
‘ಇಡೀ ಶಾಸಕಾಂಗ ಸಭೆ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಕಾರ್ಯಕರ್ತರು ಬೆಂಬಲಿಸಿ ಹೋರಾಟ ನಡೆಸುತ್ತಿದ್ದಾರೆ’ ಎಂದರು.
‘ರಾಜ್ಯಪಾಲರು ರಾಜಕಾರಣ ಮಾಡುತ್ತಿದ್ದಾರೆ. ಯಾವ ತನಿಖೆಯೂ ಇಲ್ಲದೆ ಪ್ರಕರಣ ದಾಖಲಿಸಿ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಇದನ್ನು ಸರ್ವಾನುಮತದಿಂದ ಎಲ್ಲರೂ ಖಂಡಿಸಿದ್ದೇವೆ. ರಾಜ್ಯದ ಜನರು ನಮಗೆ 136 ಸೀಟು ಕೊಟ್ಟಿದ್ದಾರೆ. ಸರ್ಕಾರವನ್ನು ಅಭದ್ರಗೊಳಿಸಲು ಯತ್ನ ನಡೆಯುತ್ತಿದೆ. ಏನೇ ಮಾಡಿದರೂ ಸರ್ಕಾರವನ್ನು ಪತನಗೊಳಿಸಲು ಸಾಧ್ಯವಿಲ್ಲ’ ಎಂದರು.
‘ಮುಡಾ ವಿಚಾರದಲ್ಲಿ ಈಗಾಗಲೇ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಕಾನೂನು ಬಾಹಿರವಾಗಿ ಅನುಮತಿ ನೀಡಿರುವುದರ ವಿರುದ್ಧ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿ ವಿರುದ್ಧ ದೊಡ್ಡ ಸಂಚು ನಡೆಯುತ್ತಿದೆ. ಸದ್ಯ ರಾಜ್ಯದಲ್ಲಿ ಮಾತ್ರ ಹೋರಾಟ ನಡೆಯುತ್ತಿದೆ. ಮುಂದೆ ಹೈಕಮಾಂಡ್ ಜೊತೆ ಚರ್ಚಿಸಿದ ಬಳಿಕ ‘ಇಂಡಿಯಾ’ ಮೈತ್ರಿಕೂಟದ ಜೊತೆ ಸೇರಿ ಪ್ರತಿಭಟನೆ ನಡೆಸುವ ಕುರಿತು ತೀರ್ಮಾನಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.