ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ಪತ್ನಿಯ ಪತ್ರದ ‘ವೈಟ್ನರ್’ ಹಿಂದೆ ಏನಿದೆ?

Published 22 ಆಗಸ್ಟ್ 2024, 12:26 IST
Last Updated 22 ಆಗಸ್ಟ್ 2024, 12:26 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಕ್ಕೆ ಬರೆದಿದ್ದ ಪತ್ರಕ್ಕೆ ವೈಟ್ನರ್‌ ಹಚ್ಚಿ ತಿರುಚಲಾಗಿದೆ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ. ಅವರು ವಿಜಯನಗರದಲ್ಲೇ ನಿವೇಶನ ಕೊಡುವಂತೆ ಕೇಳಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ‘ಮುಖ್ಯಮಂತ್ರಿ ಪತ್ನಿಗೆ ನಿವೇಶನ ನೀಡುವಾಗ ಮುಡಾದಿಂದ ಪರಿಗಣಿಸಲಾಗಿರುವ ಪತ್ರವೇ ಬೇರೆ. ಕುಮಾರಸ್ವಾಮಿ ಆರೋಪಿಸುತ್ತಿರುವ ಪತ್ರವೇ ಬೇರೆ. ವೈಟ್ನರ್‌ ಹಚ್ಚಿರುವ ಜಾಗದಲ್ಲಿರುವುದು ‘ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ರಚಿಸಿದ ಸಮಾನಾಂತರ ಬಡಾವಣೆಯಲ್ಲಿ ‌ಕೊಡಿ’ ಎಂದಷ್ಟೇ ಇದೆ. ಇದನ್ನು ಏನೇನೋ ಊಹೆ ಮಾಡಿಕೊಂಡು ಆರೋಪಿಸಲಾಗುತ್ತಿದೆ’ ಎಂದು ತಿಳಿಸಿದರು.

‘ವೈಟ್ನರ್‌ ಹಚ್ಚಿರುವ ಹಿಂದೆಯಿಂದ ಟಾರ್ಜ್‌ನಿಂದ ಲೈಟ್‌ ಬಿಟ್ಟು ನೋಡಿದರೆ ಅದು ಗೊತ್ತಾಗುತ್ತದೆ’ ಎಂದು ಪ್ರದರ್ಶಿಸಿದರು.

‘ಪಾರ್ವತಿ ಅವರು ಮುಡಾಕ್ಕೆ 2014ರಲ್ಲಿ ಪತ್ರ ಬರೆದಿದ್ದರು. ಆಗ ಭೂಪರಿಹಾರವನ್ನು ನೀಡಿಲ್ಲ. ಅವರು 2021ರಲ್ಲಿ ಬರೆದಿದ್ದ ಪತ್ರವನ್ನು ಆಧರಿಸಿ ಮುಡಾದಿಂದ ನಿವೇಶನ ಹಂಚಿಕೆ ಮಾಡಲಾಗಿದೆ. ಆ ಪತ್ರವನ್ನೇ ಸಿಎಂ ನ್ಯಾಯಾಲಯಕ್ಕೆ ನೀಡಿದ್ದಾರೆ. ಇದರಲ್ಲಿ ತಿರುಚುವ ಪ್ರಮೇಯವೇ ಬರುವುದಿಲ್ಲ. ಕಾನೂನುಪ್ರಕಾರವಾಗಿಯೇ ನಿವೇಶನ ಕೊಡಲಾಗಿದೆ. ಅಷ್ಟಕ್ಕೂ ಆಗ ಇದ್ದ ಸರ್ಕಾರ ಯಾವುದು ಎಂಬುದನ್ನು ಕುಮಾರಸ್ವಾಮಿ ಹಾಗೂ ವಿರೋಧಪಕ್ಷದವರು ಅರಿಯಬೇಕು. ಮುಖ್ಯಮಂತ್ರಿ ಯಾವುದೇ ಪತ್ರವನ್ನೂ ಬರೆದು ಪ್ರಭಾವ ಬೀರಿಲ್ಲ. ಏನನ್ನೂ ಮರೆ ಮಾಚಿಲ್ಲ. ರೋಲ್‌ಕಾಲ್‌ ಮಾಡುವ ಆರ್‌ಟಿಐ ಕಾರ್ಯಕರ್ತರು ಸೇರಿಕೊಂಡು ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿಯನ್ನು ಅನಗತ್ಯವಾಗಿ ತೇಜೋವಧೆ ಮಾಡುವ ಮೂಲಕ, ಅವರು ಕೆಲಸ ನಿರ್ವಹಿಸುವುದಕ್ಕೆ ವಿರೋಧ ಪಕ್ಷದವರು ಬಿಡುತ್ತಲೇ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಬೇಕಾದ ಹುನ್ನಾರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT