ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾಧಾನದ ಅಹವಾಲು | ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ: ಸಿದ್ದರಾಮಯ್ಯ ಭರವಸೆ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ
Published 27 ಜುಲೈ 2023, 20:27 IST
Last Updated 27 ಜುಲೈ 2023, 20:27 IST
ಅಕ್ಷರ ಗಾತ್ರ

ಬೆಂಗಳೂರು: ವರ್ಗಾವಣೆ ಶಿಫಾರಸು ಮತ್ತು ಅನುದಾನ ವಿಚಾರದಲ್ಲಿ ಸಚಿವರು ಸ್ಪಂದಿಸುತ್ತಿಲ್ಲವೆಂದು ಕೆಲವು ಶಾಸಕರು ಅಪಸ್ವರ ಎತ್ತಿದ ಬೆನ್ನಲ್ಲೆ, ಗುರುವಾರ ರಾತ್ರಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ, ‘ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ’ ಎಂದು ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ.

ಹೋಟೆಲ್‌ ರ‍್ಯಾಡಿಸನ್‌ ಬ್ಲೂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಆಡಳಿತಾತ್ಮಕ ಒತ್ತಡಗಳ  ಮಧ್ಯೆಯೂ ನಾನು ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆಯುತ್ತೇನೆ. ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

‘ಕೆಲವು ಸಚಿವರ ಮೇಲೆ ಶಾಸಕರು ಅಸಮಾಧಾನಗೊಂಡಿದ್ದಾರೆ. ಪತ್ರ ಬರೆದು ಸಭೆ ಕರೆಯಲು ಒತ್ತಾಯಿಸಿದರು. ಏನೇ ಅಸಮಾಧಾನ ಇದ್ದರೂ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ. ಮಾಧ್ಯಮಗಳ ಮುಂದೆ ಮಾತನಾಡಬೇಡಿ. ನಕಲಿ ಪತ್ರ ಕೂಡ ಹರಿದಾಡಿತು. ಬಿಜೆಪಿ ಇಂತಹ ವಿಷಯಗಳ ಬಗ್ಗೆ ಕಾಯುತ್ತಿರುತ್ತದೆ. ಹೀಗಾಗಿ, ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ ಎಂದು ಸಲಹೆ ನೀಡಿದರು’ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿ ಮಾತನಾಡುತ್ತಿದ್ದಾಗ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಧ್ಯಪ್ರವೇಶಿಸಿ, ‘ನಮ್ಮಿಂದ ಪತ್ರ ಬಂದಿದೆ ಎಂದು ಗೊಂದಲ ಶುರುವಾಗಿದೆ. ನಾವು ಪತ್ರಕ್ಕೆ ಸಹಿ ಹಾಕಿರುವುದು ನಿಜ. ಆದರೆ, ಮಾಧ್ಯಮಗಳಲ್ಲಿ ಬರುತ್ತಿರುವ ಪತ್ರ ಬೇರೆ. ನಿಮ್ಮ ಗಮನ ಸೆಳೆಯಲು ನಾವು ಪತ್ರ ಬರೆದಿದ್ದೆವು. ಅದು ಇಷ್ಟು ಬೆಳೆಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ’ ಎಂದು ಹೇಳಲಾಗಿದೆ.

‘ನಮಗೆ ಎಲ್ಲೂ ಅಸಮಾಧಾನವಿಲ್ಲ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ. ಸಚಿವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಇದನ್ನಷ್ಟೇ ನಾವು ಕೇಳಿರುವುದು. ಬೇರೆ ಉದ್ದೇಶ ಇಟ್ಟುಕೊಂಡು ಪತ್ರ ಬರೆದಿದ್ದಲ್ಲ. ನಮ್ಮದು ಪಕ್ಷ ವಿರೋಧಿ, ಸರ್ಕಾರದ ವಿರೋಧಿ ನಡೆಯೂ ಅಲ್ಲ. ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ’ ಎಂದು ಹೇಳಿದ್ದಾಗಿ ಗೊತ್ತಾಗಿದೆ.

ಆಗ ಗರಂ ಆದ ಮುಖ್ಯಮಂತ್ರಿ, ಬಹಿರಂಗ ಪತ್ರ ಬರೆದಿರುವುದಕ್ಕೆ ಬಸವರಾಜ ರಾಯರಡ್ಡಿಯನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ರಾಯರಡ್ಡಿ, ‘ಪತ್ರ ನಾನು ಬರೆದಿಲ್ಲ‌. ಸಹಿ ಹಾಕಿದ್ದೇನೆ ಅಷ್ಟೆ. ನಿಮ್ಮ ಗಮನ ಸೆಳೆಯಲು ಹೀಗೆ ಮಾಡಿದ್ದೇವೆ’ ಎಂದು ಸಮಜಾಯಿಷಿ ನೀಡಲು ಮುಂದಾದರು. ‘ನನ್ನ ಗಮನ ಸೆಳೆಯುವುದಾದರೆ ನೇರವಾಗಿ ಬಂದು ಮಾತನಾಡಬೇಕಿತ್ತು. ಹೀಗೆಲ್ಲ ಏಕೆ ಮಾಡುತ್ತೀರಿ? ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

‘ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಆದರೆ, ನಮ್ಮ ಮಾತುಗಳೇ ನಡೆಯುತ್ತಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿ ‌ತಮ್ಮ ಮಾತಿಗೆ ಬೆಲೆ ಇಲ್ಲ. ಸಚಿವರ ಮನೆ ಬಾಗಿಲಿಗೆ ಹೋದರೂ ಸ್ಪಂದಿಸುತ್ತಿಲ್ಲ. ನಾವು ಹೇಳಿದವರ ವರ್ಗಾವಣೆ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರ್ಗಾವಣೆ: ಸಂಪುಟ ಸಭೆಯಲ್ಲಿ ಮಾರ್ದನಿ

ಸಚಿವರೇ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ವಿಷಯ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಾರ್ದನಿಸಿತು.

ಸಭೆಯಲ್ಲಿ ಮಾತನಾಡಿದ ಕೆಲ ಸಚಿವರು ಮುಖ್ಯಮಂತ್ರಿಗೆ ಸಮಜಾಯಿಷಿ ನೀಡಿ ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಅಲವತ್ತುಕೊಂಡರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆ ಸುದೀರ್ಘವಾಗಿ ನಡೆಯಿತು. ಪ್ರಮುಖ ವಿಷಯಗಳ ತೀರ್ಮಾನದ ಬಳಿಕ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಸಮಯ ಶಾಸಕರ ಪತ್ರದ ಬಗ್ಗೆಯೇ ಚರ್ಚಿಸಲಾಯಿತು ಎಂದು ಮೂಲಗಳು ಹೇಳಿವೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಎನ್‌.ಚಲುವರಾಯಸ್ವಾಮಿ ಅವರು ವರ್ಗಾವಣೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ, ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸಭೆಯಲ್ಲಿ ವಿವರಿಸಿದ್ದಾಗಿ ಮೂಲಗಳು ತಿಳಿಸಿವೆ.

ಶಾಸಕರ ಪತ್ರ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗಿದೆ. ಅಲ್ಲದೇ, ಶಾಸಕರೂ ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಬೇಕಾಗಿದೆ. ಈ ವಿದ್ಯಮಾನ ಪ್ರತಿಪಕ್ಷಗಳಿಗೆ ಅಸ್ತ್ರವಾಗುತ್ತಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.

ಶಾಸಕ ಬಿ.ಆರ್‌.ಪಾಟೀಲ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡೇ ಪತ್ರ ಬರೆದಿದ್ದಾರೆ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿರುವುದನ್ನು ಸಭೆಯಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಲಾಯಿತು. 

ಇದಕ್ಕೆ ಸಮಜಾಯಿಷಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ, ‘ನಾನು 1000 ಪಿಡಿಒಗಳನ್ನು ವರ್ಗಾವಣೆ ಮಾಡಿದ್ದೇನೆ ಎಂಬುದು ಸರಿಯಲ್ಲ. ಪಟ್ಟಿಯನ್ನು ಬೇಕಾದರೂ ಕೊಡಲು ಸಿದ್ಧನಿದ್ದೇನೆ. ಹಲವು ಸಂಸದರು ಮತ್ತು ಶಾಸಕರೂ ವರ್ಗಾವಣೆಗೆ ಸಂಬಂಧ ಪತ್ರ ಕೊಟ್ಟಿದ್ದರು. ಅಂತಹ ಪ್ರಕರಣಗಳಲ್ಲಿ ವರ್ಗಾವಣೆ ಮಾಡಿದ್ದೇನೆ’ ಎಂದು ಅವರು ಪತ್ರಗಳನ್ನು ತೋರಿಸಲು ಮುಂದಾದರು ಎಂದು ಮೂಲಗಳು ಹೇಳಿವೆ.

‘ಒಟ್ಟು ಪಿಡಿಒ ಹುದ್ದೆಗಳ ಪೈಕಿ ಶೇ 25 ರಷ್ಟು ಮಿತಿಯಲ್ಲಿ ವರ್ಗಾವಣೆಗೆ ನನಗೆ ಅಧಿಕಾರವಿದೆ. ಬೇಕಾಬಿಟ್ಟಿ ಮಾಡಿಲ್ಲ’ ಎಂದೂ ಖರ್ಗೆ ಹೇಳಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ, ‘ನಾನು ಯಾವುದೇ ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿಲ್ಲ. ಅಂತಹ ಬೇಡಿಕೆ ಪತ್ರ ಬಂದರೆ ಅವುಗಳನ್ನು ಮುಖ್ಯಮಂತ್ರಿಗೆ ಕಳಿಸಿದ್ದೇನೆ. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.

ಕೃಷಿ ಸಚಿವ ಎನ್‌.ಚಲುವರಾಯ ಸ್ವಾಮಿ, ‘ನನ್ನ ಇಲಾಖೆಯಲ್ಲಿ ಯಾವುದೇ ವರ್ಗಾವಣೆಗಳನ್ನು ಮಾಡಿಲ್ಲ. ಕುಮಾರಸ್ವಾಮಿ ವೃಥಾ ಆರೋಪಗಳನ್ನು ಮಾಡಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

 ಡಿ.ಕೆ.ಶಿವಕುಮಾರ್ ಮಾತನಾಡಿ, ಮುಖ್ಯ ಎಂಜಿನಿಯರ್‌ಗಳ ವರ್ಗಾವಣೆ ಮಾಡಿಲ್ಲ. ಆ ಅಧಿಕಾರ ಇರುವುದು ಮುಖ್ಯಮಂತ್ರಿಗೆ. ಬೇರೆ ಯಾವುದೇ ವರ್ಗಾವಣೆ ಮಾಡಿಲ್ಲ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT