ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಾದಯಾತ್ರೆ: ಸಾವಿರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ಭಾಗಿ

Last Updated 2 ಮಾರ್ಚ್ 2022, 7:24 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಜಯನಗರದಿಂದ ಬುಧವಾರ ಆರಂಭವಾಗಿದೆ.

ಮಂಗಳವಾರ ಕೆಂಗೇರಿಯಿಂದ 15.5 ಕಿಲೋ ಮೀಟರ್ ವ್ಯಾಪ್ತಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದ ಪಾದಯಾತ್ರಿಗಳು ಮಂಗಳವಾರ ರಾಜ್ಯ ರಾಜಧಾನಿಯ ಒಳಗೆ ಪ್ರವೇಶಿಸಿದ್ದರು.

ಜಯನಗರದಿಂದ ಆರಂಭಿಸಿ ಕೋರಮಂಗಲ ಫೋರಂ ಮಾಲ್, ವಿವೇಕ ನಗರ, ಟ್ರಿನಿಟಿ ಸರ್ಕಲ್, ಮಿಲ್ಲರ್ಸ್ ರೋಡ್, ಜೆಸಿ ನಗರ ಮಾರ್ಗವಾಗಿ ಮೇಕ್ರಿ ಸರ್ಕಲ್ ಕಡೆಗೆ ಪಾದಯಾತ್ರೆ ಮುಂದುವರಿಯಲಿದೆ.

ನಾಲ್ಕನೇ ದಿನದ ಕೈ ಪಾದಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದಾರೆ. ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಮುಂದಾಗಿದ್ದಾರೆ.

ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಆನೇಕಲ್, ಮಹಾದೇವಪುರ, ಹೊಸಕೋಟೆ, ಮಾಲೂರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ವಿವೇಕ್ ನಗರದ ಜಸ್ಮಾಭವನದ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ.

ಬಳಿಕ ಮುಂದುವರಿಯುವ ಪಾದಯಾತ್ರೆಯಲ್ಲಿ ಶಾಂತಿನಗರ, ಸಿ.ವಿ ರಾಮನ್ ನಗರ, ಶಿವಾಜಿನಗರ, ಹೆಬ್ಬಾಳ ಹಾಗೂ ಕೆ.ಆರ್ ಪುರಂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬುಧವಾರ ಒಟ್ಟು 16.7 ಕಿಮೀ ಪಾದಯಾತ್ರೆ ಸಾಗಲಿದೆ.

ಬೆಂಗಳೂರಿನ ವಾಹನ ದಟ್ಟಣೆಯ ಮಾರ್ಗದಲ್ಲಿ ಪಾದಯಾತ್ರೆ ಸಾಗಲಿರುವುದರಿಂದ ಇಂದು ಕೂಡಾ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, 'ಪಾದಯಾತ್ರೆಗೆ ಜನ ಸೇರ್ತಿರೋದು ನೋಡಿ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರು ಮೊದಲೇ ಹೊಟ್ಟೆಕಿಚ್ಚಿನ ಜನ.‌ ಹೀಗಾಗಿ ಅವರಿಗೆ ಇದನ್ನು ಸಹಿಸಲಾಗುತ್ತಿಲ್ಲ. ಬಿಜೆಪಿಯದ್ದು ಡಬ್ಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಎಂಜಿನ್ ಸರ್ಕಾರ, ಎರಡು ಎಂಜಿನ್ ಕೆಟ್ಟು ಹೋಗಿದೆ' ಎಂದರು.

'ನಮಗೆ ಫ್ಲೆಕ್ಸ್ ಹಾಕಬೇಡಿ ಅಂತಾರೆ. ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಸಾವಿರಾರು ಫ್ಲೆಕ್ಸ್ ಹಾಕಿದ್ದಾರೆ. ಮುನಿರತ್ನ ಶಿವರಾತ್ರಿಗೆ 5 ಸಾವಿರ ಫ್ಲೆಕ್ಸ್ ಹಾಕಿದಾರೆ. ಮೊನ್ನೆ ವಿ. ಸೋಮಣ್ಣ ಸಾವಿರಾರು ಫ್ಲೆಕ್ಸ್ ಹಾಕಿದ್ದಾರೆ. ಬಿಜೆಪಿಯವರ ಪ್ರೋಗ್ರಾಂಗೆ ಫ್ಲೆಕ್ಸ್ ಹಾಕಬಹುದು ಕಾಂಗ್ರೆಸ್ ನವರ ಪ್ರೋಗ್ರಾಂಗೆ ಹಾಕಬಾರದಾ? ತರಗೆದರೆ ಎಲ್ಲರದ್ದೂ ತೆಗೆಯಿರಿ, ಕಾಂಗ್ರೆಸ್ ನವರದ್ದು ಮಾತ್ರ ತೆಗೆಯೋದು ಯಾಕೆ? ಎಂದು ಪ್ರಶ್ನಿಸಿದರು.

'ಅದನ್ನು ನಾವು ಹಾಕಿಲ್ಲ, ನೀರು ಬೇಕು ಎನ್ನುವವರು ಹಾಕಿದ್ದಾರೆ. ಎರಡು ಮೂರು ದಿನ ಟ್ರಾಫಿಕ್ ಜಾಮ್ ಆಗುತ್ತೆ, ದಯವಿಟ್ಟು ಸಹಿಸಿಕೊಳ್ಳಿ. ನಮ್ಮ ಈ ತಪ್ಪು ಮನ್ನಿಸಿ, ಹೊಟ್ಟೆಗೆ ಹಾಕಿಕೊಳ್ಳಿ. ಇದರಿಂದ ಮುಂದಿನ ಮೂವತ್ತು ವರ್ಷಗಳ ಕಾಲ ನೀರು ಸಿಗುತ್ತೆ, ಬಿಜೆಪಿಯವರು ಪೇಪರ್ ಟೈಗರ್. ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತೆ ಬಿಜೆಪಿಯವರ ನಡವಳಿಕೆ. ಕೇಂದ್ರದಿಂದ ಪರಿಸರ ಇಲಾಖೆ ಅನುಮತಿ ಪಡೆಯಲೂ ಇವರಿಂದ ಆಗುತ್ತಿಲ್ಲ. ಸಿಎಂ ಬೆಂಗಳೂರಲ್ಲಿ ನೀರು ಕುಡಿತಿದ್ದರಲ್ಲ ಅದನ್ನು ತಂದಿದ್ದು ಕಾಂಗ್ರೆಸ್. ಈ ಬಿಜೆಪಿ ಸರ್ಕಾರದ ಸಚಿವರು ಕುಡಿಯುತ್ತಿರೋ ನೀರು ತಂದಿದ್ದು ಕಾಂಗ್ರೆಸ್. ಬೆಂಗಳೂರಿನ ಜನ ಕುಡಿಯುತ್ತಿರುವ ನೀರು ತಂದಿದ್ದು ಕಾಂಗ್ರೆಸ್' ಎಂದರು.

ನಾಲ್ಕನೇ ದಿನದ ಪಾದಯಾತ್ರೆ ಸಾಗಲಿರುವ ದಾರಿ:

ಅದೈತ್ ಪೆಟ್ರೋಲ್ ಬಂಕ್‌ನಿಂದ ಆರಂಭ
1. ಮಾರುತಿನಗರ
2. ಹೊಸೂರು ಮುಖ್ಯರಸ್ತೆ
3. ಫೋರಂ ಮಾಲ್
4. ಪಾಸ್‌ಪೋರ್ಟ್ ಆಫೀಸ್
5. ಇನ್‌ಫೆಂಟ್ ಜೀಸಸ್ ರಸ್ತೆ
6. ಮಖಾ ಮಸ್ಜೀದ್
7. ಜಸ್ಮಾ ದೇವಿ ಭವನ ( ನಗರಪಾಲಿಕೆ ಮೈದಾನ )
8. ಹಾಸ್ಟೆಮ್ಯಾಟ್ ಆಸ್ಪತ್ರೆ
9. ಟ್ರಿನಿಟಿ ಸರ್ಕಲ್
10.ಗುರುನಾನಕ್ ಮಂದಿರ್
11. ತಿರುವಳ್ಳುವರ್ ಪ್ರತಿಮೆ
12.ಕೋಲ್ಸ್ ಪಾರ್ಕ್
13.ನಂದಿದುರ್ಗ ರಸ್ತೆ
14.ಜೆ.ಸಿ. ನಗರ ಪೊಲೀಸ್ ಠಾಣೆ
15.ಮುನಿರೆಡ್ಡಿ ಪಾಳ್ಯ ಮಾರ್ಗವಾಗಿ ಟಿ.ವಿ.ಟವರ್
16.ಮೇತ್ರಿ ಸರ್ಕಲ್
17.ಅರಮನೆ ಆವರಣ ತಲುಪುವುದು- ವಾಸ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT