ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಮಸೂದೆಗೆ ವಿರೋಧ: ಕ್ರೈಸ್ತರಿಂದ ಸಾಂಕೇತಿಕ ಉಪವಾಸ ಸತ್ಯಾಗ್ರಹ

ಸುವರ್ಣ ವಿಧಾನಸೌಧ
Last Updated 17 ಡಿಸೆಂಬರ್ 2021, 21:19 IST
ಅಕ್ಷರ ಗಾತ್ರ

ಬೆಳಗಾವಿ: ಮತಾಂತರ ನಿಷೇಧ ಮಸೂದೆ ಮಂಡನೆ ವಿರೋಧಿಸಿ ಮತ್ತು ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡಿಸಿ ಭಾರತೀಯ ಕ್ರೈಸ್ತ ಒಕ್ಕೂಟದವರು ಸುವರ್ಣ ವಿಧಾನಸೌಧ ಬಳಿ ಶುಕ್ರವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.

‘ಮಸೂದೆ ಅಂಗೀಕಾರವಾಗಿ ಕಾಯ್ದೆ ಜಾರಿಗೆ ಬಂದರೆ ಸಂವಿಧಾನದತ್ತ ವಾಕ್‌ ಸ್ವಾತಂತ್ರ್ಯ ಮೊಟಕುಗೊಳಿಸಿದಂತೆ ಆಗಲಿದೆ. ಧರ್ಮ ಪ್ರಚಾರದ ಹಕ್ಕಿಗೆ ಚ್ಯುತಿಯಾಗುತ್ತದೆ. ಅನೈತಿಕ ಪೊಲೀಸ್‌ಗಿರಿಗೆ ಅಸ್ತ್ರ ಕೊಟ್ಟಂತಾಗುತ್ತದೆ. ಸಂಘಟನೆಗಳವರು ತಮಗೆ ಆಗದ ಕ್ರೈಸ್ತ ಧರ್ಮ ಗುರುಗಳು ಮತ್ತು ಕ್ರೈಸ್ತ ನಾಯಕರ ಮೇಲೆ ಈ ಕಾನೂನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಆತಂಕವಿದೆ’ ಎಂದರು.

ಧರ್ಮಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್ ಅವರು, ‘ಕಾಯ್ದೆ ಇಲ್ಲದೆಯೇ ಕ್ರೈಸ್ತರ ಮೇಲೆ ಆಗಾಗ ದಾಳಿ ನಡೆಯುತ್ತಿದೆ. ಹೀಗಿರುವಾಗ ಕಾಯ್ದೆ ಬಂದರೆ ನಮ್ಮ ಪರಿಸ್ಥಿತಿ ಏನಾಗಬೇಕು?’ ಎಂದು ಆತಂಕ ವ್ಯಕ್ತಪಡಿಸಿದರು.

ಮೆಥೋಡಿಸ್ಟ್‌ ಸೆಂಟ್ರಲ್ ಚರ್ಚ್‌ ಜಿಲ್ಲಾ ಸೂಪರಿಂಟೆಂಡೆಂಟ್ ರೆ.ನಂದಕುಮಾರ್, ‘ಸದನದಲ್ಲಿ ದೇವರೇ ನಮ್ಮ ಪರವಾಗಿ ಕೆಲಸ ಮಾಡುತ್ತಾನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರಿಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌ ಬೆಂಬಲ ಸೂಚಿಸಿದರು.

ಸರ್ಕಾರದ ಪರವಾಗಿ ಸಚಿವ ಶಿವರಾಮ ಹೆಬ್ಬಾರ್‌ ಮನವಿ ಸ್ವೀಕರಿಸಿದರು. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ ಜತ್ತನ್ನ ಇದ್ದರು.

‘ನಾವು ವಾಪಸ್ ತಗೊತೀವಿ’
‘ಮತಾಂತರ ನಿಷೇಧ ಮಸೂದೆ ಮಂಡನೆ, ಅನುಮೋದನೆಗೆ ನಾವು ಬಿಡುವುದಿಲ್ಲ. ಸರ್ಕಾರ ದುಸ್ಸಾಹಸ ಮಾಡಿದರೆ, 2023ಕ್ಕೆ ನಮ್ಮ‌ ಸರ್ಕಾರ ಬಂದಾಗ ವಾಪಸ್ ತೆಗೆದುಕೊಳ್ಳುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕ್ರೈಸ್ತ ಒಕ್ಕೂಟ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ‘ಇದು ಗಂಭೀರ ವಿಚಾರ. ಕೋಮು ಸೌಹಾರ್ದ ಹಾಳು ಮಾಡಲು, ಒಂದು ಧರ್ಮ ಗುರಿಯಾಗಿಸಿ ಕಾಯ್ದೆ ತರುತ್ತಿದ್ದಾರೆ.ಇದು ಆರ್‌ಎಸ್‌ಎಸ್‌ ಹುನ್ನಾರ. ನಿಮ್ಮೊಂದಿಗೆ (ಕ್ರೈಸ್ತರ) ಸದಾ ಇರುತ್ತೇವೆ. ಸಂವಿಧಾನ ಹೇಳಿದಂತೆ ಸರ್ಕಾರ ನಡೆದುಕೊಳ್ಳಬೇಕು’ ಎಂದರು.

**

ರಾಜ್ಯದಲ್ಲಿ ಕ್ರೈಸ್ತರ ಸಂಖ್ಯೆ ಕಡಿಮೆ ಆಗುತ್ತಿದೆಯೇ‌ ಹೊರತು ಹೆಚ್ಚಾಗಿಲ್ಲ. ನಮ್ಮ ಆಸ್ಪತ್ರೆ ಹಾಗೂ ಶಾಲೆಗಳಲ್ಲಿ ಮತಾಂತರ ಮಾಡಬಹುದಿತ್ತು.‌ ಆದರೆ, ನಾವು ಅಂಥವರಲ್ಲ
-ರೆ. ನಂದಕುಮಾರ್‌,ಜಿಲ್ಲಾ ಸೂಪರಿಂಟೆಂಡೆಂಟ್, ಮೆಥೋಡಿಸ್ಟ್‌ ಸೆಂಟ್ರಲ್ ಚರ್ಚ್‌, ಬೆಳಗಾವಿ

**

‘ಸರ್ಕಾರವು ಮತಾಂತರ ನಿಷೇಧ ಮಸೂದೆಯನ್ನು ಮುಂದಿನ ವಾರ ಸದನದಲ್ಲಿ ಮಂಡಿಸಲಿದೆ. ಅದನ್ನು ತೀವ್ರವಾಗಿ ವಿರೋಧಿಸುತ್ತೇವೆ’
-ಸಿದ್ದರಾಮಯ್ಯ,ವಿಧಾನಸಭೆ ವಿರೋಧಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT