ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷ ನಿಜವಾದ ಹಿಟ್ಲರ್: ಆರ್. ಅಶೋಕ

Published 13 ಏಪ್ರಿಲ್ 2024, 8:07 IST
Last Updated 13 ಏಪ್ರಿಲ್ 2024, 8:07 IST
ಅಕ್ಷರ ಗಾತ್ರ

ಬೆಂಗಳೂರು: 'ಸಂವಿಧಾನವನ್ನು ಬುಡಮೇಲು ಮಾಡಿ‌ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷ ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್, ಮುಸ್ಸೋಲಿನಿಗೆ ಹೋಲಿಸುತ್ತಿದೆ. ಕಾಂಗ್ರೆಸ್ ಪಕ್ಷವೇ ನಿಜವಾದ ಹಿಟ್ಲರ್' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ವಿರುದ್ಧ ಕೀಳುಮಟ್ಟದ ವೈಯಕ್ತಿಕ ನಿಂದನೆ ನಡೆಸುತ್ತಿರುವುದು ಖಂಡನೀಯ. ಅಂತಹವರ ವಿರುದ್ಧ ಕೇಂದ್ರ ಚುನಾವಣಾ ಆಯೋಗ ತಕ್ಷಣ ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕರು ಈಗ ಸಂವಿಧಾನದ ಕುರಿತು ಮಾತನಾಡುತ್ತಿದ್ದಾರೆ. ಇಂದಿರಾ ಗಾಂಧಿಯವರು ಸಂವಿಧಾನ ಬುಡಮೇಲು ಮಾಡಿ ತುರ್ತು ಪರಿಸ್ಥಿತಿ ಹೇರಿದ್ದರು. ವಿರೋಧ ಪಕ್ಷಗಳ ನಾಯಕರು, ನ್ಯಾಯಾಧೀಶರು, ಪತ್ರಕರ್ತರನ್ನು ಜೈಲಿಗೆ ತಳ್ಳಿದ್ದರು ಎಂದರು.

ಸಂವಿಧಾನವು ಭಗವದ್ಗೀತೆಗಿಂತಲೂ ದೊಡ್ಡದು. ಸಂವಿಧಾ‌ನವೇ ಶ್ರೇಷ್ಠ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂಸದ ಅನಂತ ಕುಮಾರ ಹೆಗಡೆ ಸೇರಿದಂತೆ ಯಾರೇ ಸಂವಿಧಾನದ ವಿರುದ್ಧ ಮಾತನಾಡಿದರೂ ಪಕ್ಷ ಒಪ್ಪುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿದೆ. ಅದಕ್ಕಾಗಿ ಜನರ ದಿಕ್ಕು ತಪ್ಪಿಸಲು ಸಂವಿಧಾನವನ್ನು. ಮುಂದಿಟ್ಟುಕೊಂಡು ಸುಳ್ಳು ಹೇಳುತ್ತಿದೆ ಎಂದು ದೂರಿದರು.

ಬಿಜೆಪಿಯ ಶಕ್ತಿ ಹೆಚ್ಚಳ: ಜೆಡಿಎಸ್ ಜತೆಗಿನ‌ ಮೈತ್ರಿಯಿಂದ ರಾಜ್ಯದಲ್ಲಿ ಬಿಜೆಪಿಯ ಶಕ್ತಿ ಹೆಚ್ಚಲಿದೆ. ಪ್ರಧಾನಿ‌ ನರೇಂದ್ರ ಮೋದಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮೈಸೂರಿನಲ್ಲಿ ಭಾನುವಾರ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದರಿಂದ ಹಳೆ ಮೈಸೂರು ಭಾಗದಲ್ಲಿ ಎರಡೂ ಪಕ್ಷಗಳಿಗೆ ಅನುಕೂಲ ಆಗಲಿದೆ ಎಂದರು.

'ಹಿಂದೆ ಕಾಂಗ್ರೆಸ್ ಪಕ್ಷದವರು ಜೆಡಿಎಸ್ ನಾಯಕರ ಮನೆ ಬಾಗಿಲಿಗೆ ಹೋಗಿ ಮೈತ್ರಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡರ ಮನೆ ಮುಂದೆ ಭಿಕ್ಷುಕರಂತೆ ಕಾದಿದ್ದರು. ಈಗ ಸೋಲಿನ ಭೀತಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಟೀಕಿಸುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಭೀತಿ ಸಿದ್ದರಾಮಯ್ಯ ಅವರಿಗಿದೆ. ಅದಕ್ಕಾಗಿಯೇ ಸಂಸದ ವಿ. ಶ್ರೀನಿವಾಸಪ್ರಸಾದ್ ಮನೆಗೆ ಹೋಗಿದ್ದಾರೆ. ಅವರು ಈಗಲೂ ಬಿಜೆಪಿ ಸಂಸದರು. ಹಿಂದೆ ಇಬ್ಬರೂ ಬೀದಿ ಬೀದಿಗಳಲ್ಲಿ ಹೀನಾಮಾನ ಬೈದಾಡಿಕೊಂಡಿದ್ದರು. ಚುನಾವಣೆ ಬಂದಾಗ ಶ್ರೀನಿವಾಸಪ್ರಸಾದ್ ಮನೆಗೆ ಹೋಗಿರುವ ಸಿದ್ದರಾಮಯ್ಯ ಅವರಿಗೆ ಮಾನ, ಮರ್ಯಾದೆ ಇಲ್ಲವೆ ಎಂದು ಅಶೋಕ ಕೇಳಿದರು.

ಡೈನಮೈಟ್ ಇಡುವುದರಲ್ಲಿ ನಿಸ್ಸೀಮರು: ಜತೆಗಿದ್ದವರಿಗೇ ಡೈನಮೈಟ್ ಇಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಜಿ. ಪರಮೇಶ್ವರ ಅವರನ್ನು ಅದೇ ರೀತಿ ಸೋಲಿಸಿದ್ದರು. ಡಿ.ಕೆ. ಶಿವಕುಮಾರ್ ಅವರನ್ನೂ ಸೋಲಿಸಲು ಯತ್ನಿಸಿದ್ದರು. ಈ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರಿಗೆ ಡೈನಮೈಟ್ ಇಡುತ್ತಾರೆ ಎಂದು ಹೇಳಿದರು.

'ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯವಂತ ಡಾ.ಸಿ.ಎನ್. ಮಂಜುನಾಥ್ ಅವರು ಹೃದಯ ಇಲ್ಲದ ಕಟುಕ ಡಿ. ಕೆ. ಸುರೇಶ್ ಅವರನ್ನು ಸೋಲಿಸುವುದು ನೂರಕ್ಕೆ ನೂರರಷ್ಟು ಸತ್ಯ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT