ಕಲಬುರಗಿ: ‘ನಾವು ರಾಜಕೀಯ ಹೋರಾಟಕ್ಕಾಗಿ ಒಂದಾಗಿದ್ದೇವೆ. ಸನಾತನ ಧರ್ಮ ನಿರ್ಮೂಲನೆ ಕುರಿತು ಉದಯನಿಧಿ ಸ್ಟಾಲಿನ್ ಆಡಿರುವ ಮಾತು ವೈಯಕ್ತಿಕವಾದುದು. ಈ ವಿಚಾರ ನಮ್ಮ ಪಕ್ಷದ ಅಜೆಂಡಾದಲ್ಲಿ ಇಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
‘ಸನಾತನ ಧರ್ಮ ನಿರ್ಮೂಲನೆ’ ವಿವಾದ ಕುರಿತ ಪ್ರಶ್ನೆಗೆ ನಗರದಲ್ಲಿ ಶನಿವಾರ ಸುದ್ದಿಗಾರರರಿಗೆ ಉತ್ತರಿಸಿದ ಅವರು, ‘ಸಂವಿಧಾನದ ಆಧಾರದ ಮೇಲೆ ಎಲ್ಲರನ್ನೂ ಒಗ್ಗೂಡಿಸುವುದು, ಸರ್ವ ಧರ್ಮಗಳ ಸಮಭಾವ ನಮ್ಮ ಪಕ್ಷದ ನೀತಿ. ರಾಜಕೀಯದಲ್ಲಿ ಧರ್ಮ ಹಾಗೂ ಧರ್ಮದಲ್ಲಿ ರಾಜಕೀಯವನ್ನು ನಾವು ತರುವುದಿಲ್ಲ. ಯಾವ ಹೇಳಿಕೆ, ತತ್ವಗಳಿಂದ ಅನ್ಯಾಯ ಆಗುತ್ತದೆಯೋ ಅದನ್ನು ಬೇರೆ ವೇದಿಕೆಗಳಲ್ಲಿ ಚರ್ಚಿಸುತ್ತೇವೆ’ ಎಂದು ಸ್ಪಷ್ಟನೆ ನೀಡಿದರು.
‘ಭಾರತ–ಇಂಡಿಯಾದಂತಹ ವಿಷಯಗಳನ್ನು ತಂದು ಸಮಾಜ ಒಡೆದು, ಭ್ರಮೆ ಸೃಷ್ಟಿಸಬಾರದು. 4,500 ಕಿ.ಮೀ. ಭಾರತ ಜೋಡೊ ಯಾತ್ರೆ ಮಾಡಿ ಭಾರತದ ಹೆಸರನ್ನು ಪ್ರಚಾರ ಮಾಡಿದ್ದೇ ನಾವು. ‘ಇಂಡಿಯಾ’ ಒಕ್ಕೂಟ ಬಂದ ಮೇಲೆ ಏನು ಅನಿಸಿತ್ತೋ ಗೊತ್ತಿಲ್ಲ, ಈಗ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ಖೇಲೊ ಇಂಡಿಯಾ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಹೆಸರು ಇರಿಸಿದ್ದು ನೀವೇ ಅಲ್ಲವೇ’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
‘ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿರುವ ಕಾರಣವನ್ನು ಪ್ರತಿ ಪಕ್ಷಗಳಿಗೆ ನಾವು ಏಕೆ ಹೇಳಬೇಕು ಎಂದು ಆಡಳಿತ ಪಕ್ಷ ಪ್ರಶ್ನಿಸುತ್ತಿರುವುದರಿಂದ ಪ್ರಜಾಪ್ರಭುತ್ವದ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗಿದೆ. ವಿರೋಧ ಪಕ್ಷದವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಾವ ವಿಷಯ ಚರ್ಚಿಸಲು ವಿಶೇಷ ಅಧಿವೇಶನ ಕರೆಯುತ್ತಿದ್ದೇವೆ ಎಂದು ಮುಂಚಿತವಾಗಿ ತಿಳಿಸಬೇಕು. ಆದರೆ, ಈ ಕುರಿತು ಯಾವುದೇ ನೋಟಿಸ್ ಕೊಟ್ಟಿಲ್ಲ, ಅಧಿವೇಶನದ ಅಜೆಂಡಾ ಏನಿದೆಯೋ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಒಂದು ದೇಶ ಒಂದು ಚುನಾವಣೆ’ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಕೆಲವು ಕಡೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳು ವಿಸರ್ಜನೆ ಆಗುತ್ತವೆ. ಅವೆಲ್ಲವನ್ನೂ ತಡೆಯಲು ಆಗುವುದಿಲ್ಲ. ಅನೇಕ ಕಾರಣಗಳಿಂದ ಲೋಕಸಭೆಯಲ್ಲಿ ನಿರ್ಣಯ ತೆಗೆದುಕೊಂಡು ವಿಧಾನಸಭೆಗಳನ್ನು ವಿಸರ್ಜನೆ ಮಾಡುತ್ತಾರೆ. ಹೀಗಾಗಿ, ಇದು ಬಹಳ ಕಷ್ಟ ಕೆಲಸ. ಈಗಿರುವ ಸಮಸ್ಯೆಗಳನ್ನು ಮೊದಲು ಇತ್ಯರ್ಥಪಡಿಸಲಿ’ ಎಂದರು.
‘ಸಾಮರಸ್ಯದ ಘೋಷಣೆಯಡಿ ಶೃಂಗಸಭೆ ನಡೆಯುತ್ತಿದೆ. ದೇಶ–ಪ್ರಪಂಚದಲ್ಲಿ ಗದ್ದಲ ಇಲ್ಲದೇ ಸಾಮರಸ್ಯ ಮೂಡಲಿ ಎಂಬುದು ಒಳ್ಳೆಯ ಆಶಯ. ಜಿ20 ಶೃಂಗಸಭೆಗೆ ಆಹ್ವಾನ ನೀಡದೇ ಇರುವುದರಿಂದ ನಾನು ಪಾಲ್ಗೊಳ್ಳುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.