ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿ ತಿರಸ್ಕರಿಸಿ: ಕಾಂಗ್ರೆಸ್‌ ನಾಯಕರ ಮನವಿ

ಬಂದ್‌ಗೆ ಬೆಂಬಲ ಸೂಚಿಸಿ ರಸ್ತೆಗಿಳಿದ ‘ಕೈ’ ನಾಯಕರು * ಯಡಿಯೂರಪ್ಪ ವಿರುದ್ಧ ವಾಗ್ದಾಳಿ
Last Updated 29 ಸೆಪ್ಟೆಂಬರ್ 2020, 8:02 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತರುತ್ತಿರುವ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ತಿರಸ್ಕರಿಸಬೇಕು’ ಎಂದು ಆಗ್ರಹಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಕಾಂಗ್ರೆಸ್‌ ನಾಯಕರು ಮನವಿ ಸಲ್ಲಿಸಿದರು.

ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಸೋಮವಾರದ ಬಂದ್‌ ಬೆಂಬಲಿಸಿ ಕಾಂಗ್ರೆಸ್‌ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ನಿಯೋಗ ಈ ಮನವಿ ಸಲ್ಲಿಸಿದೆ.

ಬಳಿಕ ಮಾತನಾಡಿದ ಶಿವಕುಮಾರ್‌, ‘ಜನ ವಿರೋಧಿ ಕಾಯ್ದೆಗಳಿಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಮನವಿ ಸಲ್ಲಿಸಿದ್ದೇವೆ. ರಾಷ್ಟ್ರಪತಿ ಕೂಡ ಇವುಗಳನ್ನು ವಜಾ ಮಾಡಬೇಕೆಂದು ರಾಜ್ಯಪಾಲರ ಮೂಲಕ ಕೋರಿದ್ದೇವೆ’ ಎಂದರು.

ಅದಕ್ಕೂ ಮೊದಲು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ‘ಯಡಿಯೂರಪ್ಪ ಒಬ್ಬ ಡೋಂಗಿ ರೈತ ನಾಯಕ. ನಾವು ಉಳುವವನೇ ಭೂಮಿ ಒಡೆಯ ಅಂತ ಮಾಡಿದರೆ, ಇವರು ಉಳ್ಳವನೇ ಭೂಮಿ ಒಡೆಯ ಮಾಡಲು ಹೊರಟಿದ್ದಾರೆ’ ಎಂದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶಿವಕುಮಾರ್‌, ‘ಮುಂದಿನ ತಿಂಗಳು 10ನೇ ತಾರೀಕಿನಿಂದ 30ರವರೆಗೆ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತಿ ರೈತನಿಂದ ಸಹಿ ಸಂಗ್ರಹಿಸಬೇಕು. ಬ್ಲಾಕ್ ಅಧ್ಯಕ್ಷರು ಹಾಗೂ ಪರಾಜಿತ ಅಭ್ಯರ್ಥಿಗಳು ಎಷ್ಟೇ ದೊಡ್ಡವರಾದರೂ ಯಾವುದೇ ಜಾತಿಗೆ ಸೇರಿದ್ದರೂ ಈ ಜವಾಬ್ದಾರಿ ವಹಿಸಿಕೊಳ್ಳಬೇಕು. ಸಹಿ ಸಹಿತ ಮನವಿಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ, ಶಾಸಕರಾದ ಕೃಷ್ಣ ಬೈರೇಗೌಡ,ರಾಮಲಿಂಗಾ ರೆಡ್ಡಿ, ಯು.ಟಿ. ಖಾದರ್, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಂಸದರಾದ ಕೆ.ಎಚ್. ಮುನಿಯಪ್ಪ, ಧ್ರುವನಾರಾಯಣ್, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ ಸೇರಿ ಹಲವರು ಭಾಗವಹಿಸಿದ್ದರು. ಹಸಿರು ಶಾಲು ತಲೆಗೆ ಕಟ್ಟಿಕೊಂಡು ಶಾಸಕಿ ಅಂಜಲಿ ನಿಂಬಾಳ್ಕರ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಕೆಪಿಸಿಸಿ ಮಹಿಳಾ ಘಟಕದ ಸದಸ್ಯೆಯರು ಪ್ರತಿಭಟನೆ ನಡೆಸಿದರು.

ಅ. 2ರಂದು ಪ್ರತಿಭಟನೆ– ಸುರ್ಜೇವಾಲಾ
‘ಕಾಯ್ದೆ ತಿದ್ದುಪಡಿ ವಿರೋಧಿಸಿ ಅ. 2ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. 10ರಂದು ರೈತ ಸಮಾವೇಶ ನಡೆಸಲಾಗುವುದು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

‘ಅ. 30ರೊಳಗೆ ದೇಶದಾದ್ಯಂತ 2 ಕೋಟಿ ಸಹಿ ಸಂಗ್ರಹಿಸಲಾಗುವುದು. ಅದನ್ನು ನಬವ ಸಹಿತ ಸೋನಿಯಾ ಗಾಂಧಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT