ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳದಲ್ಲಿ ಗುತ್ತಿಗೆದಾರ ಆತ್ಮಹತ್ಯೆ: 7 ಜನರ ವಿರುದ್ಧ ಎಫ್‌ಐಆರ್‌

Published 14 ಅಕ್ಟೋಬರ್ 2023, 13:44 IST
Last Updated 14 ಅಕ್ಟೋಬರ್ 2023, 13:44 IST
ಅಕ್ಷರ ಗಾತ್ರ

ಕೊಪ್ಪಳ: ಹಣಕಾಸಿನ ವಿಚಾರವಾಗಿ ಆದ ಸಮಸ್ಯೆಯಿಂದಾಗಿ ಇಲ್ಲಿನ ಬಿ.ಟಿ. ಪಾಟೀಲ ನಗರದ ಗುತ್ತಿಗೆದಾರ ರಾಜೀವ್ ಬಗಾಡೆ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಗರಸಭೆಯ ಸದಸ್ಯ ಸೇರಿ ಏಳು ಜನರ ವಿರುದ್ಧ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಾಗಿದೆ.

ರಾಜೀವ್ ಅ. 10ರಂದು ಇಲ್ಲಿನ ಫಿಶ್ ಲ್ಯಾಂಡ್ ಹೋಟೆಲ್‌ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಗ ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ಶುಕ್ರವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.

ಮಗನ ಸಾವಿನ ಕುರಿತು ತಂದೆ ಮೋಹನ್ ಬಗಾಡೆ ದೂರು ನೀಡಿದ್ದು ‘ನನ್ನ ಮಗನಿಂದ ಸಾಲದ ರೂಪದಲ್ಲಿ ಪಡೆದುಕೊಂಡಿದ್ದ ಹಣ ವಾಪಸ್‌ ಕೇಳಿದ್ದಕ್ಕೆ ಅವಮಾನ ಮಾಡಿದ್ದಾರೆ. ಕಿರುಕುಳ ನೀಡಿ, ಬೆದರಿಕೆ ಹಾಕಿ ಏಳು ಜನ ಮಗನ ಆತ್ಮಹತ್ಯೆಗೆ ಕಾರಣರಾಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗುತ್ತಿಗೆದಾರರಾದ ದೊಡ್ಡಪ್ಪ ಹರಿಗುರ, ರಫಿ ಎಂ., ಕಾಂಗ್ರೆಸ್‌ ಮುಖಂಡರೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಗಡಾದ, ಮಲ್ಲಿಕಾರ್ಜುನ ಹೆಗ್ಗಾವಿ, ಮುನಿ ವಿಜಯಕುಮಾರ್‌, ನಗರಸಭೆ ಸದಸ್ಯ ಜೆಡಿಎಸ್‌ ಪಕ್ಷದ ಚೆನ್ನಪ್ಪ ಕೊಟ್ಯಾಳ ಹಾಗೂ ಮಾಜಿ ಸದಸ್ಯ ಡಾ. ಉಪೇಂದ್ರ ರಾಜು ವಿರುದ್ಧ ದೂರು ದಾಖಲಾಗಿದೆ.

ಮೊದಲ ಆರೋಪಿಯಾಗಿರುವ ದೊಡ್ಡಪ್ಪ ಹರಿಗುರ ಎಂಬುವರ ಬಳಿ ರಾಜೀವ್ ಉಪಗುತ್ತಿಗೆದಾರರಾಗಿ ಕಾಮಗಾರಿ ಮಾಡುತ್ತಿದ್ದರು. ಸ್ವಂತ ಹಣ ಹಾಕಿ ಕೆಲಸ ಮಾಡಿದರೂ ಹಣ ನೀಡಲು ದೊಡ್ಡಪ್ಪ ವಿನಾಕಾರಣ ಸತಾಯಿಸುತ್ತಿದ್ದರು. ಬಳ್ಳಾರಿಯ ಗುತ್ತಿಗೆದಾರ ಮಲ್ಲಿಕಾರ್ಜುನ ಹೆಗ್ಗಾವಿ ಎಂಬುವರ ಬಳಿ ರಾಜೀವ್ ₹1 ಲಕ್ಷ ಪಡೆದು ವಾಪಸ್ ನೀಡಿದ್ದರೂ ಮಲ್ಲಿಕಾರ್ಜುನ ಹಣ ಕೊಡುವಂತೆ ಬೆದರಿಸಿ ಕಿರುಕುಳ ನೀಡಿದ್ದರು. ಪದೇ ಪದೇ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಸರ್ಕಾರಿ ಕೆಲಸವನ್ನು ನನ್ನ ಮಗ ಮತ್ತು ಕೊಪ್ಪಳದ ಮುನಿ ವಿಜಯಕುಮಾರ್ ಎಂಬುವರು ಜೊತೆಗೂ ಪಾಲುದಾರಿಕೆಯಲ್ಲಿ ಮಾಡುತ್ತಿದ್ದರು. ವಿಜಯಕುಮಾರ್‌ ನನ್ನ ಮಗನ ಬಳಿ ₹8 ಲಕ್ಷ ಸಾಲ ಪಡೆದು ವಾಪಸ್‌ ಕೊಟ್ಟಿಲ್ಲ. ನಗರಸಭೆ ಮಾಜಿ ಸದಸ್ಯ ಉಪೇಂದ್ರ ರಾಜು ₹5 ಲಕ್ಷ ಪಡೆದುಕೊಂಡಿದ್ದು ಇದಕ್ಕೆ ಉಪೇಂದ್ರ ಇಲ್ಲಿನ ದಿವಟರ ನಗರದಲ್ಲಿರುವ ತಮ್ಮ ಮನೆಯನ್ನು ಒತ್ತೆ ಇಟ್ಟಿದ್ದಾರೆ. ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದರೆ ಅವಮಾನಿಸಿದ್ದಾರೆ. ನಗರಸಭೆ ಸದಸ್ಯ ಚೆನ್ನಪ್ಪ ಕೊಟ್ಯಾಳ ಕೂಡ ₹2 ಲಕ್ಷ ಪಡೆದು ವಾಪಸ್‌ ಕೊಟ್ಟಿಲ್ಲ ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT