ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಾ–ತಮ್ನಾರ್‌ ಯೋಜನೆಗೆ ಸಹಕಾರ: ರಾಜ್ಯಕ್ಕೆ ಮೋದಿ ಪತ್ರ

Published : 5 ಸೆಪ್ಟೆಂಬರ್ 2024, 22:30 IST
Last Updated : 5 ಸೆಪ್ಟೆಂಬರ್ 2024, 22:30 IST
ಫಾಲೋ ಮಾಡಿ
Comments

ನವದೆಹಲಿ: ಗೋವಾ– ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗದ ಯೋಜನೆಗೆ ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. 

ಈ ಯೋಜನೆಗೆ ಕರ್ನಾಟಕದ 435 ಎಕರೆ ಅರಣ್ಯ ಒದಗಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿದ್ದ ಶಿಫಾರಸಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾರ್ಚ್‌ನಲ್ಲಿ ತಡೆ ಒಡ್ಡಿದ್ದರು. 

ಧಾರವಾಡದ ನರೇಂದ್ರದಿಂದ ಗೋವಾಕ್ಕೆ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’, ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಒಪ್ಪಿಗೆ ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಈ ಯೋಜನೆಗೆ ಗೋವಾದ ಭಗವಾನ್‌ ಮಹಾವೀರ ವನ್ಯಜೀವಿ ಧಾಮದ 27 ಹೆಕ್ಟೇರ್ ಅರಣ್ಯ ಬಳಕೆಗೆ ಒಪ್ಪಿಗೆ ಕೇಳಿತ್ತು. ಈ ‍ಪ್ರಸ್ತಾವಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ ಷರತ್ತುಬದ್ಧ ಒಪ್ಪಿಗೆ ನೀಡಲಾಗಿತ್ತು. 

ಛತ್ತೀಸಗಢದ ತಮ್ನಾರ್‌ನಿಂದ ಗೋವಾಕ್ಕೆ ವಿದ್ಯುತ್ ಸರಬರಾಜು ಮಾಡುವ ಯೋಜನೆ ಇದಾಗಿದೆ. ಈ ಮಾರ್ಗ ಕರ್ನಾಟಕದ ಮೂಲಕ ಹಾದು ಹೋಗುತ್ತದೆ. ಈ ಹಾದಿಯಲ್ಲಿ ಈಗಾಗಲೇ 400 ಕೆ.ವಿ.ಯ ಮಾರ್ಗ ಇದೆ. ‘ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ. ಇದು ರಾಷ್ಟ್ರೀಯ ಗ್ರಿಡ್‌ ಅಭಿವೃದ್ಧಿಯ ಭಾಗ. ಈ ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡಬೇಕು’ ಎಂದು ಪ್ರಧಾನಿಯವರು ಪತ್ರದಲ್ಲಿ ಮನವಿ ಮಾಡಿದ್ದಾರೆ. 

‘ಉದ್ದೇಶಿತ ವಿದ್ಯುತ್ ಮಾರ್ಗವು ದಾಂಡೇಲಿ ಆನೆ ಕಾರಿಡಾರ್‌, ಭೀಮಗಡ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳ ಮೂಲಕ ಹಾದುಹೋಗಲಿದೆ. ದೊಡ್ಡ ಪ್ರಮಾಣದಲ್ಲಿ ಕಾಡು ನಾಶವಾಗಲಿದೆ’ ಎಂದು ಪರಿಸರ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಈ ಹಿಂದೆಯೇ ಪತ್ರ ಬರೆದಿದ್ದಾರೆ. 

‘ಹೆಚ್ಚುವರಿ ವಿದ್ಯುತ್‌ ಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಕರ್ನಾಟಕದಲ್ಲಿ 1 ಲಕ್ಷ ಮರಗಳನ್ನು ಕಡಿಯಲು ‍ಪ್ರಸ್ತಾಪಿಸಲಾಗಿತ್ತು. ಪರಿಷ್ಕೃತ ಪ್ರಸ್ತಾಪದ ಪ್ರಕಾರ, 13 ಸಾವಿರ ಮರಗಳ ಹನನ ಮಾಡಲಾಗುತ್ತಿದೆ ಎಂದು ಯೋಜನಾ ಸಂಸ್ಥೆ ಹೇಳಿಕೊಂಡಿದೆ. ಈ ಬಗ್ಗೆ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಕೇಂದ್ರ ಸರ್ಕಾರ ಒತ್ತಡ ಹೇರಿದ್ದರಿಂದ ರಾಜ್ಯ ಸರ್ಕಾರ ಸಹಕಾರ ನೀಡುವುದು ಅನಿವಾರ್ಯ’ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT