ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳ ಸಮುದಾಯವರ ಏಳಿಗೆಗಾಗಿ ಮೀಸಲಿಟ್ಟಿರುವ ₹ 26 ಸಾವಿರ ಕೋಟಿ ಬಳಕೆಗೆ ಕೋವಿಡ್ ಅಡ್ಡಿ

ಪರಿಶಿಷ್ಟ ಜಾತಿ, ಪಂಗಡದವರ ಏಳ್ಗೆಗೆ ಮೀಸಲಾದ ಅನುದಾನ: ಕ್ರಿಯಾ ಯೋಜನೆಗಿಲ್ಲ ಅನುಮೋದನೆ
Last Updated 28 ಮೇ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ತಳ ಸಮುದಾಯವರ ಏಳಿಗೆಗಾಗಿ ಪರಿಶಿಷ್ಟ ಜಾತಿಗಳ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ) ಅಡಿಯಲ್ಲಿ ಮೀಸಲಿಟ್ಟಿರುವ ₹ 26,005 ಕೋಟಿ ಅನುದಾನದ ಬಳಕೆಗೆ ಕೋವಿಡ್‌ ಅಡ್ಡಿಯಾಗಿದೆ.

ಈ ವರ್ಷ ಎಸ್‌ಸಿಎಸ್‌ಪಿ ಯೋಜನೆಯಡಿ ₹18,331.54 ಕೋಟಿ ಮತ್ತು ಟಿಎಸ್‌ಪಿ ಯೋಜನೆಯಡಿ₹ 7,673.47 ಕೋಟಿ ಅನುದಾನ ಇದೆ. ಒಟ್ಟು ₹ 26,005.01 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆ ಅಂತಿಮಗೊಳಿಸಿದೆ. ಆದರೆ, ಮುಖ್ಯಮಂತ್ರಿ ನೇತೃತ್ವದ ರಾಜ್ಯ ಪರಿಷತ್‌ ಸಭೆ ನಡೆಸಲು ಸಾಧ್ಯವಾಗದೇ ಇರುವುದರಿಂದ ಕ್ರಿಯಾ ಯೋಜನೆ ಅನುಮೋದನೆಯೂ ವಿಳಂಬವಾಗುತ್ತಿದೆ.

‘2019–20ರ ಕ್ರಿಯಾ ಯೋಜನೆಗೆ ಜೂನ್‌ ತಿಂಗಳಿನಲ್ಲಿ ರಾಜ್ಯ ಪರಿಷತ್‌ ಅನುಮೋದನೆ ನೀಡಿತ್ತು. 2020–21ರ ಕ್ರಿಯಾ ಯೋಜನೆಗೆ 2020ರ ಮೇ 28ರಂದು ಅನುಮೋದನೆ ನೀಡಿತ್ತು. ಈ ಬಾರಿ ಬೇಗ ಯೋಜನೆಗಳ ಅನುಷ್ಠಾನ ಆರಂಭಿಸುವ ಉದ್ದೇಶದಿಂದ ಎಲ್ಲ ಇಲಾಖೆಗಳಿಂದಲೂ ಮೇ ಆರಂಭದಲ್ಲೇ ಕ್ರಿಯಾ ಯೋಜನೆಗಳನ್ನು ಪಡೆಯಲಾಗಿತ್ತು. ಆದರೆ, ಪ್ರಕ್ರಿಯೆ ಲಾಕ್‌ಡೌನ್‌ ಕಾರಣದಿಂದ ಮುಂದಿನ ಹಂತ ತಲುಪುತ್ತಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

ಮೊದಲ ಕಂತು ಬಳಕೆ ವಿಳಂಬ: ಎರಡೂ ಯೋಜನೆಗಳ ಒಟ್ಟು ಅನುದಾನದಲ್ಲಿ ಹೊಸ ಕಾರ್ಯಕ್ರಮಗಳ ಆರಂಭಕ್ಕೆ ರಾಜ್ಯ ಪರಿಷತ್‌ನ ಅನುಮೋದನೆ ಕಡ್ಡಾಯ. ಆದರೆ, ಮುಂದುವರಿದ ಹಿಂದಿನ ವರ್ಷದ ಕಾರ್ಯಕ್ರಮಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ. ಇಂತಹ ಕೆಲವು ಕಾರ್ಯಕ್ರಮಗಳ ಅನುಷ್ಠಾನ ಆರಂಭವಾಗಿದ್ದರೂ ಕೋವಿಡ್‌ನಿಂದಾಗಿ ಫಲಾನುಭವಿಗಳನ್ನು ಗುರುತಿಸುವುದು ಮತ್ತು ಸೌಲಭ್ಯ ತಲುಪಿಸುವುದಕ್ಕೆ ಆಗಿಲ್ಲ.

‘ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮೊದಲ ಕಂತಿನಲ್ಲಿ ವಾರ್ಷಿಕ ಅನುದಾನದ ಒಟ್ಟು ಮೊತ್ತದಲ್ಲಿ ಶೇ 25ರಷ್ಟನ್ನು ಬಿಡುಗಡೆ ಮಾಡುವಂತೆ ಎಲ್ಲ ಇಲಾಖೆಗಳಿಗೂ ನಿರ್ದೇಶನ ನೀಡಲಾಗಿದೆ. ಕೆಲವು ಇಲಾಖೆಗಳು ಈಗಾಗಲೇ ಬಿಡುಗಡೆ ಮಾಡಿವೆ. ಆದರೆ, ಹೆಚ್ಚಿನ ಇಲಾಖೆಗಳು ನೇರವಾಗಿ ಫಲಾನುಭವಿಗಳನ್ನು ತಲುಪಬೇಕಾದ ಯೋಜನೆಗಳ ಅನುಷ್ಠಾನ ಮಾಡಬೇಕಿರುವುದರಿಂದ ಸಮಸ್ಯೆ ಎದುರಾಗಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತುರ್ತು ಸಭೆಗೆ ಆಗ್ರಹ: ‘ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರದ ಸಭೆಗಳು ನಡೆಯುತ್ತಲೇ ಇವೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುಷ್ಠಾನ ತುರ್ತಾಗಿ ಆಗಬೇಕಿದೆ. ಆದ್ದರಿಂದ ತಕ್ಷಣವೇ ರಾಜ್ಯ ಪರಿಷತ್‌ ಸಭೆ ನಡೆಸಿ ಕ್ರಿಯಾಯೋಜನೆಗಳಿಗೆ ಒಪ್ಪಿಗೆ ನೀಡುವ ಕೆಲಸ ಮಾಡಬೇಕು’ ಎಂದು ಆಗ್ರಹಿಸುತ್ತಾರೆ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಹ ಸಂಚಾಲಕ ಬಿ. ರಾಜಶೇಖರ ಮೂರ್ತಿ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ನೇರವಾಗಿ ಆಹಾರದ ಕಿಟ್‌, ಧನ ಸಹಾಯ, ಚಿಕಿತ್ಸಾ ವೆಚ್ಚ ಭರಿಸುವುದಕ್ಕೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಮಾಡಬೇಕು. ಅದಕ್ಕೆ ಪೂರಕವಾಗಿ ಕ್ರಿಯಾ ಯೋಜನೆಯಲ್ಲಿ ಬದಲಾವಣೆಗಳನ್ನು ತಂದು, ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸುತ್ತಾರೆ.

ಹೋರಾಟಕ್ಕೆ ಸಿದ್ಧತೆ:ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಒದಗಿಸಲು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಮಾಡಬೇಕು. ಇದರಲ್ಲಿ ಶಾಲಾ ಮಕ್ಕಳಿಗೆ ಆಹಾರದ ಕಿಟ್‌ ವಿತರಣೆ ಮಾಡಬೇಕು ಎಂಬ ಬೇಡಿಕೆಯನ್ನು ದಲಿತ ಸಂಘಟನೆಗಳ ಒಕ್ಕೂಟ ಸಮಾಜ ಕಲ್ಯಾಣ ಇಲಾಖೆಯ ಮುಂದಿಟ್ಟಿದೆ.

‘ಲಾಕ್‌ಡೌನ್‌ ನೆಪ ಹೇಳಿಕೊಂಡು ಅನುಷ್ಠಾನದಲ್ಲಿ ವಿಳಂಬ ಮುಂದುವರಿಸಿದರೆ, ಹೋರಾಟ ಮಾಡುತ್ತೇವೆ’ ಎಂದು ಒಕ್ಕೂಟದ ಭಾಗವಾಗಿರುವ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ತಿಳಿಸಿದರು.

ಶೇ 95ರಷ್ಟು ವೆಚ್ಚ:2020–21ರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಶೇ 95ರಷ್ಟು ವೆಚ್ಚವಾಗಿದೆ.

ಎಸ್‌ಸಿಎಸ್‌ಪಿಯಡಿ ₹ 18,113.92 ಕೋಟಿ ಮೀಸಲಿಟ್ಟಿದ್ದು, ₹ 17,304 ಕೋಟಿ ವೆಚ್ಚ ಮಾಡಲಾಗಿದೆ. ಟಿಎಸ್‌ಪಿ ₹ 7,802.46 ಕೋಟಿ ಅನುದಾನ ಮೀಸಲಿಟ್ಟಿದ್ದು, ₹ 7,263.74 ವೆಚ್ಚ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT