ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಭಾನುವಾರಕ್ಕಿಂತ ಸೋಮವಾರ 30 ಸಾವಿರ ಕಡಿಮೆಯಾಗಿದ್ದರೂ ಹೆಚ್ಚು ಪರೀಕ್ಷೆ ನಡೆಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. 6.11 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಪ್ರತಿ ಲಕ್ಷಕ್ಕೆ 16,360 ಜನ ಪರೀಕ್ಷೆಗೆ ಒಳಗಾಗಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಪ್ರತಿ ಲಕ್ಷ ಜನರಲ್ಲಿ 14,769 ಜನ ಪರೀಕ್ಷೆಗೆ ಒಳಗಾಗಿದ್ದಾರೆ. ಕೊನೆಯ ಸ್ಥಾನದಲ್ಲಿ ತೆಲಂಗಾಣ (221) ಇದೆ. ಉತ್ತರ ಪ್ರದೇಶ, ಬಿಹಾರ, ಆಂಧ್ರಪ್ರದೇಶ, ಲಕ್ಷದ್ವೀಪದ ಮಾಹಿತಿ ಲಭ್ಯವಾಗಿಲ್ಲ.
30 ಸಾವಿರ ಕಡಿಮೆ: ರಾಜ್ಯದಲ್ಲಿ ಭಾನುವಾರ 1,26,904 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಸೋಮವಾರ 8,682 ಆ್ಯಂಟಿಜೆನ್ ಮತ್ತು 87,413 ಆರ್ಟಿ ಪಿಸಿಆರ್ ಸೇರಿದಂತೆ ಒಟ್ಟು 96,095 ಜನ ಪರೀಕ್ಷೆಗೆ ಒಳಪಟ್ಟಿದ್ದಾರೆ. ನ.22ರಂದು ಹೊಸ ಪ್ರಕರಣಗಳ ಸಂಖ್ಯೆ 1,704 ಇದ್ದರೆ, ನ.23ರಂದು ಈ ಸಂಖ್ಯೆ 1,509ಕ್ಕೆ ಇಳಿದಿದೆ. ರಾಜ್ಯದಲ್ಲಿ ಈವರೆಗೆ 1.03 ಕೋಟಿ ಜನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.
ಸೋಂಕಿತರು 8.74 ಲಕ್ಷ: ಹೊಸದಾಗಿ 1,509 ಜನರಿಗೆ ಸೋಂಕು ತಗುಲುವುದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 8,74,555 ಕ್ಕೆ ತಲುಪಿದೆ. 1,645 ಮಂದಿ ಗುಣಮುಖರಾಗಿದ್ದು, ಈವರೆಗೆ 8,38,150 ಮಂದಿ ಕೋವಿಡ್ನಿಂದ ಮುಕ್ತರಾಗಿದ್ದಾರೆ. ಸೋಮವಾರ 24 ಮಂದಿ ಸಾವಿಗೀಡಾಗುವುದರೊಂದಿಗೆ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 11,678ಕ್ಕೆ ತಲುಪಿದೆ.
ಸಕ್ರಿಯ ಪ್ರಕರಣಗಳ ಪೈಕಿ 24,708 ಮಂದಿ ಕೋವಿಡ್ ಆರೈಕೆ ಕೇಂದ್ರ, ಆಸ್ಪತ್ರೆ ಮತ್ತು ಮನೆಯಲ್ಲಿ ಆರೈಕೆ ಮತ್ತು ಚಿಕಿತ್ಸೆಯಲ್ಲಿದ್ದಾರೆ. 438 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜಧಾನಿಯಲ್ಲಿ 10 ಸಾವು: ಬೆಂಗಳೂರಿನಲ್ಲಿ ಹೊಸದಾಗಿ 725 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ 10 ಜನ ಸಾವಿಗೀಡಾಗಿದ್ದಾರೆ. 478 ಮಂದಿ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಾಲ್ಕು, ಮೈಸೂರಿನಲ್ಲಿ ಇಬ್ಬರು, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಧಾರವಾಡ, ರಾಯಚೂರು, ಉತ್ತರ ಕನ್ನಡ, ವಿಜಯಪುರದಲ್ಲಿ ತಲಾ ಒಬ್ಬರು ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಇಂದಿನ 23/11/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@DKShivakumar @Tejasvi_Surya @BYVijayendra @Ramesh_aravind @PuneethRajkumar @CovidIndiaSeva @iaspankajpandey @KarnatakaVarthe @PIBBengaluru @kiranshaw @WFRisinghttps://t.co/KbunX7C9Aj pic.twitter.com/7oJP5vifVq
— K'taka Health Dept (@DHFWKA) November 23, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.