ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಭೀತಿ: ಬೆಂಗಳೂರು ಬಿಟ್ಟು ಊರಿನತ್ತ ಪ್ರಯಾಣ

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಭರ್ತಿ
Last Updated 14 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್ –19 ಭೀತಿಯಿಂದ ನಗರದಲ್ಲಿ ಸಂಚಾರಕ್ಕೆ ಹೆದರಿರುವ ಜನ, ಬೆಂಗಳೂರು ಖಾಲಿ ಮಾಡುತ್ತಿದ್ದಾರೆ. ಶನಿವಾರ ನಗರದಿಂದ ಹೊರಟ ಕೆಎಸ್‌ಆರ್‌ಟಿಸಿ ಬಸ್‌ಗಳು ಬಹುತೇಕ ಭರ್ತಿಯಾಗಿದ್ದವು. ಪ್ರಯಾಣಿಕರ ದಟ್ಟಣೆ ಹೆಚ್ಚಾದ ಕಾರಣ 40 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನೂ ನಿಗಮದ ಅಧಿಕಾರಿಗಳು ಮಾಡಿದರು.

ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳಿಂದ ಹೊರಟ ಎಲ್ಲಾ ಬಸ್‌ಗಳು ಭರ್ತಿಯಾಗಿ ತೆರಳಿದವು. ಕರ್ನಾಟಕ ಸಾರಿಗೆ (ಕೆಂಪು ಬಸ್‌) ಬಸ್‌ಗಳು ಮಾತ್ರವಲ್ಲದೇ ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿಗೆ ಹೋದ ಐಷಾರಾಮಿ (ಹವಾನಿಯಂತ್ರಿತ) ಬಸ್‌ಗಳೂ ಭರ್ತಿಯಾಗಿದ್ದವು.

ಹೊರಜಿಲ್ಲೆಗಳಿಗೆ ಹೋಗಲು ನಗರದ ಎಲ್ಲಾ ನಿಲ್ದಾಣಗಳಲ್ಲಿ ಬಸ್ ಹತ್ತಲು ಜನ ಮುಗಿಬಿದ್ದಿದ್ದರು. ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳ ಮುಂದೆಯೂ ಸಾಲುಗಟ್ಟಿ ನಿಂತಿದ್ದರು.ಆದರೆ, ಐಷಾರಾಮಿ ಬಸ್‌ಗಳನ್ನು ಹತ್ತಲು ಪ್ರಯಾಣಿಕರು ಆಸಕ್ತಿ ತೋರಿಸಲಿಲ್ಲ. ಹೀಗಾಗಿ, ಐಷಾರಾಮಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದರು.

ಹೊರ ರಾಜ್ಯಗಳಿಗೆ ತೆರಳುವ ಐಷಾರಾಮಿ ಬಸ್‌ಗಳಿಗೆ ಆಸನ ಕಾಯ್ದಿರಿಸಿರುವ ಪ್ರಯಾಣಿಕರ ಸಂಖ್ಯೆ ಶೇ 20ರಷ್ಟು ಕಡಿಮೆ ಇದೆ. ಹೈದರಾಬಾದ್, ತಿರುಪತಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯ, ಊಟಿ, ಕೊಡೈಕೆನಾಲ್ ಮತ್ತು ಪಣಜಿ ಮಾರ್ಗದ 92 ಐಷಾರಾಮಿ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಆದರೆ, ವಿಜಯವಾಡಕ್ಕೆ 4 ಮತ್ತು ಎರ್ನಾಕುಲಂಗೆ 2 ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಲಾಯಿತು ಎಂದು ವಿವರಿಸಿದರು.

ಖಾಸಗಿ ಬಸ್‌ಗಳೂ ಭರ್ತಿ: ವಿಆರ್‌ಎಲ್‌, ಎಸ್‌ಆರ್‌ಎಸ್‌, ನ್ಯಾಷನಲ್‌, ದುರ್ಗಾಂಬಾ, ಸುಗಮ ಸಹಿತ ಬಹುತೇಕ ಖಾಸಗಿ ಬಸ್‌ಗಳಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಸಂಚರಿಸಿದ್ದು, ಬಹುತೇಕ ಬಸ್‌ಗಳು ಶನಿವಾರ ಭರ್ತಿಯಾಗಿಯೇ ದೂರದ ಊರುಗಳಿಗೆ ತೆರಳಿದವು. ಮಧ್ಯಾಹ್ನದ ಹೊತ್ತಿಗೇ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಕೊನೆಗೊಂಡಿತ್ತು.

₹1.75 ಕೋಟಿ ಖೋತಾ: ಕೋವಿಡ್‌ –19 ಭೀತಿ ಹಿನ್ನೆಲೆಯಲ್ಲಿ ಐಷಾರಾಮಿ ಬಸ್‌ಗಳು ಮತ್ತು ಫ್ಲೈಬಸ್‌ಗಳಲ್ಲಿ ಸಂಚಾರಕ್ಕೆ ಜನ ಹೆದರಿದ್ದು, ಮಾ.1ರಿಂದ ಈವರೆಗೆ ₹1.75 ಕೋಟಿ ವರಮಾನ ಖೋತಾ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಪಶು ವೈದ್ಯಕೀಯ ವಿ.ವಿ: ಪರೀಕ್ಷೆ ರದ್ದು(ಬೀದರ್‌): ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಸ್ನಾತಕೋತ್ತರ ಪರೀಕ್ಷೆಗಳನ್ನು ರದ್ದುಪಡಿಸಿ, ಮಾರ್ಚ್‌ 28ರವರೆಗೆ ರಜೆ ಘೋಷಿಸಿದೆ.

‘ವಿಶ್ವವಿದ್ಯಾಲಯದ ವಸತಿ ನಿಲಯಗಳಲ್ಲಿರುವ 400 ವಿದ್ಯಾರ್ಥಿಗಳಿಗೆ ರಜೆ ಮೇಲೆ ತೆರಳುವಂತೆ ಸೂಚನೆ ನೀಡಲಾಗಿದೆ. ಪದವಿ ತರಗತಿಗಳು ಸಾಮಾನ್ಯವಾಗಿ ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆಯುತ್ತವೆ. ಸ್ನಾತಕೋತ್ತರ ವಿಭಾಗದ ಪರೀಕ್ಷೆಗಳು ಮಾತ್ರ ಈಗ ಆರಂಭವಾಗಬೇಕಿತ್ತು. ಸರ್ಕಾರ ನಿರ್ದೇಶನ ನೀಡಿರುವುದರಿಂದ ಎಲ್ಲ ಪರೀಕ್ಷೆಗಳನ್ನೂ ಮುಂದೂಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಅಂಗನವಾಡಿ ಮಕ್ಕಳಿಗೆ ಮನೆ ಬಾಗಿಲಿಗೇ ಆಹಾರ
ಕೊರೊನಾ ಭೀತಿಯಿಂದಾಗಿ ರಾಜ್ಯದೆಲ್ಲೆಡೆ ಅಂಗನವಾಡಿಗಳು ಬಂದ್ ಆಗಿದ್ದು, ಅಲ್ಲಿನ 35 ಲಕ್ಷ ಮಕ್ಕಳ ಮನೆ ಬಾಗಿಲಿಗೇ ಆಹಾರ ಧಾನ್ಯ ಮತ್ತು ಇತರ ಪಡಿತರಗಳನ್ನು ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.

‘ಪ್ರತಿ ಮಗುವಿಗೂ ಪೌಷ್ಟಿಕ ಆಹಾರ ದೊರಕಿಸುವ ನಿಟ್ಟಿನಲ್ಲಿ ಅಕ್ಕಿ ಮತ್ತು ಇತರ ಆಹಾರ ಸಾಮಗ್ರಿಯನ್ನು ಮಕ್ಕಳ ಮನೆ ಬಾಗಿಲಿಗೇ ಒದಗಿಸಬೇಕು’ ಎಂಬ ಸುತ್ತೋಲೆಯನ್ನು ಇಲಾಖೆ ಶನಿವಾರ ಹೊರಡಿಸಿದೆ.

‘ಅಂಗನವಾಡಿಗಳಿಗೆ ಅನಿರ್ದಿಷ್ಟ ಅವಧಿಯ ರಜೆ ನೀಡಲಾಗಿದೆ. ಆದರೆ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಕೇರಳ ಮಾದರಿ: ಕೇರಳದಲ್ಲಿ ಇದೇ ಕ್ರಮ ಅನುಸರಿಸಲಾಗಿದೆ. ಹೀಗಾಗಿ ರಾಜ್ಯದಲ್ಲೂ ಕೇರಳ ಮಾದರಿಯನ್ನೇ ಅನುಸರಿಸಲಾಗಿದೆ. ಅಂಗನವಾಡಿ ಸಿಬ್ಬಂದಿ ಮಕ್ಕಳು ಸೇವಿಸುವ ಆಹಾರ ಸಾಮಗ್ರಿಗಳ ಲೆಕ್ಕಾಚಾರ ಮಾಡಿ ಅದನ್ನು ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.

ಶಾಲೆಗಳಲ್ಲೂ ಇದೇ ಕ್ರಮಕ್ಕೆ ಆಗ್ರಹ: ಶಾಲೆಗಳಿಗೆ ಸಹ ಅವಧಿಗೆ ಮೊದಲೇ ರಜೆ ನೀಡಲಾಗಿದ್ದು, ಲಕ್ಷಾಂತರ ಮಕ್ಕಳು ಮಧ್ಯಾಹ್ನದ ಬಿಸಿಯೂಟದಿಂದ ವಂಚಿತರಾಗಿದ್ದಾರೆ. ಅಂಗನವಾಡಿಗಳಲ್ಲಿ ಕೈಗೊಂಡ ಕ್ರಮವನ್ನು ಶಾಲೆಗಳಿಗೂ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

‘ಅಂಗನವಾಡಿಯಲ್ಲಿ ಅನುಸರಿಸಿ ಕ್ರಮವನ್ನೇ ಅನುಸರಿಸಿ ವಿದ್ಯಾರ್ಥಿಗಳಿಗೆ ಬಿಸಿಯೂಟ ತಲುಪುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT