ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ನೀರಾವರಿ ನಿಗಮ: ನಕಲಿ ಬಿಲ್‌ಗಳ ಸೃಷ್ಟಿಸಿ ₹28 ಕೋಟಿ ಗುಳುಂ!

ಕೆಎನ್‌ಎಲ್‌ಎಲ್‌
Last Updated 28 ನವೆಂಬರ್ 2021, 19:58 IST
ಅಕ್ಷರ ಗಾತ್ರ

ಬೆಂಗಳೂರು: ಕೆಎನ್‌ಎನ್‌ಎಲ್‌ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ವ್ಯಾಪ್ತಿಯ ಅಥಣಿಯ ಹಿಪ್ಪರಗಿ ಬ್ಯಾರೇಜ್‌ ನಾಲಾ (ಎಚ್‌ಬಿಸಿ) ವಿಭಾಗದಲ್ಲಿ ಎಂಟು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ₹ 16.62 ಕೋಟಿ ದುರ್ಬಳಕೆ ಮಾಡಿದ ಪ್ರಕರಣ ಪತ್ತೆಯಾದ ಬೆನ್ನಲ್ಲೆ, ಅದೇ ನಿಗಮದ ಕಲಬುರಗಿ ವಲಯ ಮತ್ತು ಮುನಿರಾಬಾದ್‌ ವಲಯ ಕಚೇರಿಗಳಲ್ಲಿ 20 ನಕಲಿ ಬಿಲ್‌ಗಳನ್ನು ಸೃಷ್ಟಿಸಿ ₹ 11.73 ಕೋಟಿ ದುರುಪಯೋಗಪಡಿಸಿದ ಪ್ರಕರಣ ಬಯಲಿಗೆ ಬಂದಿದೆ.

ಆ ಮೂಲಕ, ಯಾವುದೇ ಟೆಂಡರ್‌ ಕರೆಯದೆ ಮತ್ತು ಕಾಮಗಾರಿ ನಿರ್ವಹಿಸದೆ ಒಟ್ಟು 28 ನಕಲಿ ಬಿಲ್‌ಗಳನ್ನು ಸೃಷ್ಟಿಸಿ ₹ 28.35 ಕೋಟಿ ವಂಚಿಸಿದ ಪ್ರಕರಣ ಬಹಿರಂಗಗೊಂಡಿದೆ. ಅದರ ಜೊತೆಗೇ, ಇತರ ನೀರಾವರಿ ನಿಗಮಗಳಲ್ಲೂ ಇದೇ ರೀತಿಯ ವಂಚನೆ ನಡೆದಿರುವ ಅನುಮಾನಗಳು ವ್ಯಕ್ತವಾಗಿವೆ.

ಎಂಟು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ₹ 16.62 ಕೋಟಿ ದುರುಪಯೋಗ ಮಾಡಿದ ಆರೋಪದಲ್ಲಿ ಜಲಸಂಪನ್ಮೂಲ ಇಲಾಖೆಯ ಐದು ಮಂದಿಯನ್ನು ಈಗಾಗಲೇ ಅಮಾನತುಗೊಳಿಸಿರುವ ರಾಜ್ಯ ಸರ್ಕಾರ, ಈ ಪ್ರಕರಣದಲ್ಲಿ ಭಾಗಿಯಾಗಿ, ಸದ್ಯ ಬೇರೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ಇಬ್ಬರನ್ನು ಅಮಾನತು ಮಾಡುವಂತೆ ಆ ಅಧಿಕಾರಿಗಳ ಮಾತೃ ಇಲಾಖೆಗೆ (ಆರ್ಥಿಕ ಇಲಾಖೆ) ಸೂಚಿಸಿದೆ.

ಇದೀಗ, ಕಲಬುರಗಿ ನೀರಾವರಿ ಯೋಜನಾ ವಿಭಾಗ ಮತ್ತು ಮುನಿರಾಬಾದ್‌ ವಲಯದ ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗದಲ್ಲಿ (ಸಿರವಾರ) ಯಾವುದೇ ಟೆಂಡರ್‌ ಕರೆಯದೆ ಮತ್ತು ಕಾಮಗಾರಿ ನಿರ್ವಹಿಸದೆ 20 ನಕಲಿ ಬಿಲ್‌ಗಳನ್ನು ಸೃಷ್ಟಿಸಿ ವಂಚಿಸಿದ ಪ್ರಕರಣದಲ್ಲಿ ಅಧಿಕಾರಿಗಳು ಮತ್ತು ನೌಕರರು ಸೇರಿ 16 ಮಂದಿ ಹಾಗೂ ಆರು ಗುತ್ತಿಗೆದಾರರು ಭಾಗಿಯಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾದ ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ಪ್ರಧಾನ ಮುಖ್ಯಲೆಕ್ಕಾಧಿಕಾರಿ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಅಜಿತ್‌ಕುಮಾರ್‌ ಹೆಗ್ಡೆ, ಪ್ರಥಮ ದರ್ಜೆ ಸಹಾಯಕ ಶರಣಪ್ಪ, ಅಥಣಿಯ ಹಿಪ್ಪರಗಿ ಯೋಜನೆಯ ಆರ್‌ ಆ್ಯಂಡ್‌ ಆರ್‌ ವಿಭಾಗದ ಲೆಕ್ಕಾಧೀಕ್ಷಕ ಕೆ.ಎಂ. ಕೋಟಿ ಅವರನ್ನು ಅಮಾನತು ಮಾಡಲಾಗಿದೆ.

ಅಲ್ಲದೆ, ಅಕ್ರಮದಲ್ಲಿ ಭಾಗಿಯಾಗಿ ಪ್ರಸ್ತುತ ಜಲಸಂಪನ್ಮೂಲ ಇಲಾಖೆಯಿಂದ ವರ್ಗಾವಣೆಗೊಂಡು ಸದ್ಯ ಧಾರವಾಡದಲ್ಲಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಥಮ ದರ್ಜೆ ಲೆಕ್ಕ ಸಹಾಯಕರಾಗಿರುವ ಎಸ್‌.ಎಂ.ಕಾಜಿ, ವಿಜಯಪುರದಲ್ಲಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿರುವ ಸಂತೋಷ್‌ ಸದಲಗಿ ಅವರನ್ನು ಅಮಾನತು ಮಾಡುವಂತೆ ಅವರ ಮಾತೃ ಇಲಾಖೆಯಾದ ಆರ್ಥಿಕ ಇಲಾಖೆಗೆ ಸೂಚಿಸಲಾಗಿದೆ.

ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಎ.ಎನ್‌. ರಾಮದಾಸ್‌, ಲೆಕ್ಕಾಧಿಕಾರಿಗಳಾಗಿದ್ದ ಎಸ್‌.ಜಿ. ಹೊಳೆಪ್ಪಗೋಳ್‌, ಎಚ್‌.ಎಂ.ಗಣೇಶ್‌ಬಾಬು, ಸಿ.ಎಫ್‌. ಕೂಬಿಹಾಳ, ಲೆಕ್ಕ ಪರಿಶೋಧನಾಧಿಕಾರಿ ಪ್ರಕಾಶ್‌ ಶೆಟ್ಟಿ, ಲೆಕ್ಕಾಧೀಕ್ಷಕ ರಾಗಿದ್ದ ರಘುರಾಮ್‌, ಲಕ್ಷ್ಮೀಬಾಯಿ, ಪ್ರಥಮ ದರ್ಜೆ ಲೆಕ್ಕ ಸಹಾಯಕರಾಗಿದ್ದ ವಿಜಯರಾವ್‌, ಮನೋಹರ್‌ ಕುಲಕರ್ಣಿ, ಆರ್‌.ಜಿ. ರಾನಡೆ ನಿವೃತ್ತರಾಗಿದ್ದಾರೆ. ಲೆಕ್ಕಾಧೀಕ್ಷಕ ಕೆ. ಪ್ರಕಾಶ್‌ ನಿಧನರಾಗಿದ್ದಾರೆ. ನಕಲಿ ಬಿಲ್‌ಗಳ ಹಣವನ್ನು ಗುತ್ತಿಗೆದಾರರಾದ ಬಿ.ಜೆ. ಬುಡವಿ, ಬಸವರಾಜ್‌ ವೈ. ಪಾಟೀಲ್, ಮಹೇಶ್‌ ಎಸ್‌. ದಳವಾಯಿ, ಮೊಹ್ಮದ್‌ ಇಸ್ಮಾಯಿಲ್‌, ರಾಜು ಜ್ಯೋತಿ ಬಂಡಿಗೆ, ರಾಜು ಎಂ. ದೊಡ್ಡಬೊಮ್ಮನ್ನವರ ಅವರು ವೈಯಕ್ತಿಕ ಖಾತೆಗೆ ಅಕ್ರಮಮವಾಗಿ ಜಮೆ ಮಾಡಿಕೊಂಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಅಕ್ರಮದಲ್ಲಿ ಭಾಗಿಯಾದ ಈ ಎಲ್ಲರ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಪರಭಾರೆ ಮಾಡದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸೂಚಿಸಬೇಕು. ಅವರು ಹೊಂದಿರುವ ಖಾತೆಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು ಅಲ್ಲದೆ, ನಿಧನರಾಗಿರುವ ಕೆ. ಪ್ರಕಾಶ್‌ ಅವರನ್ನು ಹೊರತುಪಡಿಸಿ, ಉಳಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಕೆಎನ್‌ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಜಲಸಂಪನ್ಮೂಲ ಇಲಾಖೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT