ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕೋವಿಡ್ ನಿರ್ವಹಣೆ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆಗೆ ರಚಿಸಲಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ ನೇತೃತ್ವದ ವಿಚಾರಣಾ ಆಯೋಗ ತನ್ನ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಸಲ್ಲಿಸಿತು.
ಲಾಕ್ಡೌನ್ ಆರಂಭವಾದ ದಿನದಿಂದ 2022ರ ಡಿಸೆಂಬರ್ 31ರವರೆಗಿನ ಅವಧಿಯಲ್ಲಿನ ಆರೋಪ, ನಿಯಮ ಉಲ್ಲಂಘನೆ, ಲೋಪಗಳ ಕುರಿತು ತನಿಖೆ ನಡೆಸಲು 2023ರ ಆ.26ರಂದು ಆಯೋಗವನ್ನು ನೇಮಿಸಲಾಗಿತ್ತು.
ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (2020–21) ಸಲ್ಲಿಸಿದ್ದ ವರದಿಯಲ್ಲಿ ಪ್ರಸ್ತಾಪಿಸಿದ ವಿಷಯಗಳು, ಸಕ್ಷಮ ಅಧಿಕಾರಿಗಳು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ನೀಡಿದ್ದ ಅನುಮೋದನೆ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳಲ್ಲಿ ಔಷಧ, ಆಮ್ಲಜನಕ ಉಪಕರಣಗಳು, ಸಾಮಗ್ರಿಗಳ ಖರೀದಿ, ವಿತರಣೆಯ ನಿರ್ವಹಣೆಯಲ್ಲಿ ನಡೆದಿರುವ ಅವ್ಯವಹಾರ, ಲೋಪದೋಷಗಳ ಕುರಿತು ಆಯೋಗವು 11 ತಿಂಗಳಲ್ಲಿ ವಿಸ್ತೃತ ತನಿಖೆ ನಡೆಸಿ, ವರದಿ ನೀಡಿದೆ.
ಕಿದ್ವಾಯಿ ಸಂಸ್ಥೆಗೆ ಸಂಬಂಧಿಸಿ ಟೆಂಡರ್ಗಳು, ನೇಮಕಾತಿಗಳು, ಔಷಧ, ಉಪಕರಣಗಳು, ವೆಂಟಿಲೇಟರುಗಳು, ಆಕ್ಸಿಜನ್ ಘಟಕದ ನಿರ್ವಹಣೆ ಇವುಗಳ ಅವ್ಯವಹಾರಗಳ ತನಿಖೆ, ಮಹಾಲೇಖಪಾಲರು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ವಿಷಯಗಳು, ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆಯಲ್ಲಿ ಮಾನದಂಡಗಳ ಉಲ್ಲಂಘನೆ, ಆಮ್ಲಜನಕ ಕೊರತೆ ಮತ್ತು ನಿರ್ವಹಣೆಯಲ್ಲಿ ನಿಯಮ ಪಾಲನೆ, ಕೋವಿಡ್ ನಿರ್ವಹಣೆಗೆ ಸಲ್ಲಿಕೆಯಾದ ಪ್ರಸ್ತಾವನೆಗಳಿಗೆ ಅನುಮೋದನೆ ವಿಳಂಬ ಮುಂತಾದ ವಿಷಯಗಳ ಕುರಿತೂ ಮಾಹಿತಿ ಕಲೆ ಹಾಕಿದೆ.
ವರದಿ ಸಲ್ಲಿಸಲು ಮೂರು ತಿಂಗಳ ಅವಧಿ ನೀಡಲಾಗಿತ್ತು. ನಂತರ 2024ರ ಮೇ 24ರವರೆಗೆ ವಿಸ್ತರಿಸಲಾಗಿತ್ತು. ಆಯೋಗದ ಅಧ್ಯಕ್ಷರ ಕೋರಿಕೆಯಂತೆ ಇದೇ ಆಗಸ್ಟ್ 31ರವರೆಗೂ ವಿಸ್ತರಿಸಲಾಗಿತ್ತು. ಅವಧಿ ಮುಗಿಯುವ ಕೊನೆಯ ದಿನ ಆಯೋಗ ವರದಿ ಸಲ್ಲಿಸಿತು.
ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಉಪಸ್ಥಿತರಿದ್ದರು.
ವರದಿಯಲ್ಲಿದೆ ಮೂರು ಭಾಗ?
ಕೋವಿಡ್ ಭ್ರಷ್ಟಾಚಾರದ ಕುರಿತು ಮೂರು ಭಾಗಗಳಲ್ಲಿ ವರದಿ ಸಿದ್ಧಪಡಿಸಲಾಗಿದೆ ಎಂದು ಗೊತ್ತಾಗಿದೆ. ಲೆಕ್ಕಪತ್ರಗಳ ಸಮಿತಿ ವರದಿ ಕೆಟಿಪಿಪಿ ಕಾಯ್ದೆ ನಿಯಮಗಳ ಉಲ್ಲಂಘನೆ ಕುರಿತು ನಡೆಸಿದ ತನಿಖೆಯು ವರದಿಯ ಒಂದು ಭಾಗವಾಗಿದ್ದರೆ ಟೆಂಡರ್ ನೇಮಕಾತಿ ಕುರಿತು ಮತ್ತೊಂದು ಭಾಗ ಇದೆ ಎಂದು ಮೂಲಗಳು ಹೇಳಿವೆ. ಮೂರನೇ ಭಾಗವು ಕೈಗೊಳ್ಳಬಹುದಾದ ಕ್ರಮ ಹಾಗೂ ಭವಿಷ್ಯದಲ್ಲಿ ವಹಿಸಬಹುದಾದ ಮುನ್ನಚ್ಚರಿಕೆ ಕ್ರಮಗಳ ಕುರಿತ ಶಿಫಾರಸುಗಳನ್ನು ಒಳಗೊಂಡಿದೆ. ವಿಭಾಗವಾರು ತನಿಖೆಯ ವಿವರಗಳನ್ನು ಮೊದಲ ಎರಡು ಭಾಗಗಳಲ್ಲಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.