ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಅಲೆಗೆ ಸಿದ್ಧತೆ: ‘ಆರೋಗ್ಯ ವ್ಯವಸ್ಥೆಗೆ ₹ 1,500 ಕೋಟಿ ವೆಚ್ಚ’

146 ತಾಲ್ಲೂಕು, 19 ಜಿಲ್ಲಾಸ್ಪತ್ರೆಗಳ ಉನ್ನತೀಕರಣ
Last Updated 7 ಜೂನ್ 2021, 22:37 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಂಭವನೀಯ ಮೂರನೇ ಅಲೆ ಸೇರಿದಂತೆ ಯಾವುದೇ ಬಿಕ್ಕಟ್ಟು ಎದುರಿಸಲು ರಾಜ್ಯವನ್ನು ಸಜ್ಜುಗೊಳಿಸಲು ₹ 1,500 ಕೋಟಿ ವೆಚ್ಚದಲ್ಲಿ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸೋಮವಾರ ನಡೆದ ಕೋವಿಡ್‌ ಕಾರ್ಯಪಡೆ ಸಭೆಯ ಬಳಿಕ ಈ ವಿಷಯ ತಿಳಿಸಿದ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ, ‘ಮೂರು ತಿಂಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದರು.

‘16 ಜಿಲ್ಲಾಸ್ಪತ್ರೆಗಳು, 146 ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಅದೇ ಜಿಲ್ಲೆಗಳಲ್ಲಿರುವ ಇನ್ನೂ ಮೂರು ಆಸ್ಪತ್ರೆಗಳ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕ್ರಿಯಾಯೋಜನೆ ಇದಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆ, ಎಲ್ಲ ರೀತಿಯ ಡಯಾಗ್ನಾಸ್ಟಿಕ್‌ ಸೌಲಭ್ಯ ಒದಗಿಸಲಾಗುವುದು’ ಎಂದು ತಿಳಿಸಿದರು.

‘4 ಸಾವಿರ ವೈದ್ಯರು, ಒಬ್ಬ ವೈದ್ಯರಿಗೆ ಮೂವರು ದಾದಿಯರು, ಮೂವರು ಗ್ರೂಪ್‌ ‘ಡಿ’ ಸಿಬ್ಬಂದಿ ಅಗತ್ಯವಿದೆ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನಕ್ಕೆ ₹ 1,500 ಕೋಟಿ ಅಂದಾಜಿಸಲಾಗಿದೆ. ಈ ಮೊತ್ತದಲ್ಲಿ ವಾರ್ಷಿಕ ₹ 600 ಕೋಟಿ ವೇತನಕ್ಕೆ ವೆಚ್ಚವಾಗಲಿದೆ. ಉಳಿದಂತೆ ಕಟ್ಟಡ, ಆಕ್ಸಿಜನ್‌ ಜನರೇಟರ್‌, ವೆಂಟಿಲೇಟರ್‌, ಯಂತ್ರೋಪಕರಣ ಖರೀದಿಗೆ ₹ 800 ಕೋಟಿ ವೆಚ್ಚ ಆಗಲಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಡಿಸಿದ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ’ ಎಂದರು.

ತರಬೇತಿ: ‘ಅರೆವೈದ್ಯ ಸಿಬ್ಬಂದಿ ಕೊರತೆ ನೀಗಿಸಲು ಎಸ್ಸೆಸ್ಸೆಲ್ಸಿ, ಪಿಯುಸಿ ಕಲಿತ 5 ಸಾವಿರ ಯುವ ಜನರಿಗೆ 3 ತಿಂಗಳ ಉಚಿತ ತರಬೇತಿಯನ್ನು ಜಿಲ್ಲಾ ಕೇಂದ್ರಗಳಲ್ಲಿ ನೀಡಲಾಗುವುದು. ಈ ವೇಳೆ ಮಾಸಿಕ ₹ 5 ಸಾವಿರ ಗೌರವಧನ ನೀಡಲಾಗುವುದು’ ಎಂದು ಹೇಳಿದರು.

‘ಇನ್ನು ಲಸಿಕೆ ಖರೀದಿ ಇಲ್ಲ’

‘18 ವರ್ಷ ದಾಟಿದ ಎಲ್ಲರಿಗೂ ಇನ್ನು ಕೇಂದ್ರ ಸರ್ಕಾರವೇ ಲಸಿಕೆ ಪೂರೈಸಲಿದೆ. ಹೀಗಾಗಿ, ಲಸಿಕೆ ಖರೀದಿ ಮಾಡುವುದಿಲ್ಲ’ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಈಗಾಗಲೇ 3 ಕೋಟಿ ಲಸಿಕೆ ಖರೀದಿಗೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು. ಇನ್ನೂ 2 ಕೋಟಿ ಲಸಿಕೆ ಪಡೆಯುವ ಪ್ರಯತ್ನವನ್ನೂ ಕೈಬಿಡಲಾಗಿದೆ’ ಎಂದರು.

ರೆಮ್‌ಡಿಸಿವಿರ್‌ ಸಂಗ್ರಹ

‘3ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ 5 ಲಕ್ಷ ವಯಲ್ಸ್‌ ರೆಮ್‌ಡಿಸಿವಿರ್‌ ಔಷಧಿ ಸಂಗ್ರಹಿಸಲು ನಿರ್ಣಯಿಸಲಾಗಿದೆ. ಸದ್ಯಕ್ಕೆ 2 ಲಕ್ಷ ವಯಲ್ಸ್‌ ಸಂಗ್ರಹವಿದೆ. ಜುಲೈ ವೇಳೆಗೆ ರಾಜ್ಯದಲ್ಲಿಯೇ 500 ಟನ್‌ ಆಮ್ಲಜನಕ ಉತ್ಪಾದನೆಗೂ ಕ್ರಮ ವಹಿಸಲಾಗುವುದು’ ಎಂದು ಅಶ್ವತ್ಥನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT