ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೈತಿಕತೆ ಇದ್ದರೆ ಸಿಎಂ ರಾಜೀನಾಮೆ ಕೊಡಲಿ: ಸಿ.ಟಿ.ರವಿ

Published 28 ಜೂನ್ 2024, 15:39 IST
Last Updated 28 ಜೂನ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಮುಖ್ಯಮಂತ್ರಿಯವರ ಇಲಾಖೆ ವ್ಯಾಪ್ತಿಯಲ್ಲೇ ನಡೆದ ಬಹುದೊಡ್ಡ ಹಗರಣ. 100 ಕ್ಕೆ ನೂರಷ್ಟು ಹಣ ವರ್ಗಾಯಿಸಿ ಲೂಟಿ ಮಾಡಿದ ಹಗರಣ. ಆದರೆ, ಸಿದ್ದರಾಮಯ್ಯ ಅವರು ನೈತಿಕತೆ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಟೀಕಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮುಖ್ಯಮಂತ್ರಿಯವರು ನೈತಿಕ ಹೊಣೆ ಹೊರಲು ಹಿಂದೇಟು ಹಾಕುತ್ತಿದ್ದು, ಮುಚ್ಚಿಹಾಕಲು ಮುಂದಾಗಿದ್ದಾರೆ. ಈ ಸಂಬಂಧ ನಾವು ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದೇವೆ’ ಎಂದು ಹೇಳಿದರು.

‘ಸರ್ಕಾರದ ತನಿಖೆಯ ಬಗ್ಗೆ ನಮಗೆ ಸಂಶಯವಿದೆ. ಇದು ಬಹು ರಾಜ್ಯಗಳಿಗೆ ಸಂಬಂಧಿಸಿದ ಹಗರಣ. ಆಂಧ್ರ, ತೆಲಂಗಾಣದಲ್ಲೂ ಆರೋಪಿಗಳಿದ್ದಾರೆ. ಯೂನಿಯನ್‌ ಬ್ಯಾಂಕ್ ಆಫ್‌ ಇಂಡಿಯಾವು ಸಿಬಿಐ ತನಿಖೆಗೆ ಕೋರಿ ಪತ್ರ ಬರೆದಿದೆ. ಆದರೂ, ಕರ್ನಾಟಕ ಸರ್ಕಾರ ಸಿಬಿಐ ತನಿಖೆಗೆ ಇದನ್ನು ಅಧಿಕೃತವಾಗಿ ವಹಿಸಿಲ್ಲವೇಕೆ’ ಎಂದು ರವಿ ಪ್ರಶ್ನಿಸಿದರು.

‘ಮಾಜಿ ಸಚಿವ ನಾಗೇಂದ್ರ ಅವರ ಸಂಬಂಧಿಯೂ ಆಗಿರುವ ಸಿರಗುಪ್ಪದ ಅಭ್ಯರ್ಥಿ ಮುರಳಿಯ ಪಾತ್ರವೇನು? ಈ ಬಗ್ಗೆ ತನಿಖೆ  ಆಗಬೇಕಲ್ಲವೇ? ನಿಗಮಗಳ ಕಾಮಗಾರಿಯಲ್ಲೂ ನೆಕ್ಕುಂಟಿ ನಾಗರಾಜ್‌ ಪಾತ್ರವಿದೆ. ಅಲ್ಲದೇ, ನೆಕ್ಕುಂಟಿ ನಾಗರಾಜ್ ಅವರ ಮಾವನಿಗೆ ಅರ್ಹತೆ ಇಲ್ಲದಿದ್ದರೂ ಹಾಸ್ಟೆಲ್‌ಗಳಿಗೆ ಆಹಾರ ಸರಬರಾಜು ಮಾಡುವ ಗುತ್ತಿಗೆ ಪಡೆದಿದ್ದಾರೆ’ ಎಂದು ಆರೋಪಿಸಿದರು.

‘ಈ ಹಗರಣದಲ್ಲಿ ನಾಗೇಂದ್ರ ಅವರನ್ನು ರಕ್ಷಿಸಲು ಸರ್ಕಾರ ಪ್ರಯತ್ನ ನಡೆಸಿದೆ. ನಾಗೇಂದ್ರ ಅವರನ್ನು ಮುಟ್ಟಿದರೆ ಅವರು ಯಾರ್‍ಯಾರಿಗೆ ಹಣ ಕೊಟ್ಟಿದ್ದಾಗಿ ಬಾಯಿ ಬಿಡುವ ಭಯದಿಂದ ಅವರ ರಕ್ಷಣೆಗೆ ಮುಂದಾಗಿದೆ. ಈವರೆಗೆ 11 ಜನರ ಬಂಧನವಾಗಿದ್ದು, ₹14.07 ಕೋಟಿ ಮಾತ್ರ ಜಪ್ತಿ ಮಾಡಲಾಗಿದೆ. ಬಾಕಿ ಹಣ ಎಲ್ಲಿ ಹೋಗಿದೆ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT