ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಪಾಕಿಸ್ತಾನದಲ್ಲಿದೆಯೇ? ಜಿಲ್ಲಾಧಿಕಾರಿ ನವಾಜ್ ಷರೀಫ್ ತಮ್ಮನೇ?- ಸಿ.ಟಿ.ರವಿ

Published 3 ಅಕ್ಟೋಬರ್ 2023, 12:06 IST
Last Updated 3 ಅಕ್ಟೋಬರ್ 2023, 12:33 IST
ಅಕ್ಷರ ಗಾತ್ರ

ಕೋಲಾರ: 'ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸುತ್ತೀರಾ? ಆ ಟಿಪ್ಪು ಕೊಂದ ನಮ್ಮ ಉರಿಗೌಡ, ನಂಜೇಗೌಡರ ಬಳಿಯೂ ಖಡ್ಗ ಇತ್ತು. ಹಾಗೇ ಹನುಮನ ಗದೆ, ಕೃಷ್ಣನ ಸಂದರ್ಶನ ಚಕ್ರ, ಶಿವನ ತ್ರಿಶೂಲ ಹೊರ ತೆಗೆಯಬೇಕಾಗುತ್ತದೆ' ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ, ಜಿಲ್ಲಾಡಳಿತ ವೈಫಲ್ಯ,‌ ಸಂಸದ ಎಸ್.ಮುನಿಸ್ವಾಮಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ರೈತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ನಗರದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

'ಇದು ರೈತ, ದಲಿತ, ಹಿಂದೂ ವಿರೋಧಿ ಸರ್ಕಾರ. ಈ‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಕೊಡದಂತೆ ತಡೆಹಿಡಿಯಲು ಪ್ರಯತ್ನ ನಡೆದಿತ್ತು‌. ಕೋಲಾರ ಏನು ಪಾಕಿಸ್ತಾನದಲ್ಲಿಯೇ? ಅಕ್ರಂ ಪಾಷ ನವಾಜ್ ಷರೀಫ್ ತಮ್ಮನೋ, ಮಗನೋ? ನಾನು ಕೋಲಾರಕ್ಕೆ ಬರಬಾರದೆಂದು ಹೇಳಲು ಇವನಾರು? ನಾನು ಬಾಂಬ್ ಹಾಕಿಲ್ಲ. ತಾಲಿಬಾನಿ ಅಲ್ಲ' ಎಂದು ಹರಿಹಾಯ್ದರು.

'ನಾನು ಉಂಡ ಮನೆಗೆ ಎರಡು ಬಗೆಯುವವನಲ್ಲ. ಆದರೆ, ಕೋಲಾರ ಜನರು ಉಂಡ ಮನೆಗೆ ಎರಡು ಬಗೆಯುವವರ ಬಗ್ಗೆ ಎಚ್ಚರವಿರಬೇಕು' ಎಂದರು.

'ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಬಿಟ್ಟು ಸ್ಟಾಲಿನ್ ಋಣ ತೀರಿಸಿದೆ. ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸಲು ಬಿಟ್ಟು ಜಿಹಾದಿ, ತಾಲಿಬಾನಿಗಳ ಋಣ‌ ತೀರಿಸುತ್ತಿದೆ' ಎಂದು ಟೀಕಿಸಿದರು.

'ಇದು ಭೂಗಳ್ಳರ‌ ಸರ್ಕಾರ, ಖದೀಮ ಸರ್ಕಾರ ಎಂದು ಜನತಾ ದರ್ಶನದಲ್ಲಿ ಹೇಳಬೇಕಿತ್ತು. ಆದರೆ,‌ ಸಚಿವರ ಅಕ್ಕ ಪಕ್ಕದಲ್ಲಿ ಭೂಗಳ್ಳರು‌ ಕುಳಿತಿದ್ದಾರೆ ಎಂಬುದಾಗಿ ನಮ್ಮ ಸಂಸದರು ಹೇಳಿದ್ದಾರೆ' ಎಂದು ವ್ಯಂಗ್ಯವಾಡಿದರು.

'ಈ ಸರ್ಕಾರ ಚಾಮುಂಡಿ ವೈಭವ ಮಾಡುವುದನ್ನು ಬಿಟ್ಟು ಮಹಿಷಾಸುರನ ದಸರಾ ಮಾಡುತ್ತಿದೆ. ರಾಕ್ಷಕರ‌ ರೀತಿ, ರಾಕ್ಷಕರಿಗೆ ಬೆಂಬಲ ನೀಡುತ್ತಿರುವ ಸರ್ಕಾರ ಇದು' ಎಂದು ವಾಗ್ದಾಳಿ ನಡೆಸಿದರು.

ಸಂಸದ ಡಿ.ವಿ‌ ಸದಾನಂದಗೌಡ ಮಾತನಾಡಿ, 'ಕಾಂಗ್ರೆಸ್ ನವರು ಲೂಟಿಕೋರರು. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಘಟನೆ ಸೃಷ್ಟಿಸುತ್ತಿದ್ದಾರೆ. ಭಯೋತ್ಪಾದನೆ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, 'ಕಳ್ಳ, ಖದೀಮ ಸಿದ್ದರಾಮಯ್ಯ ಸರ್ಕಾರ ರೈತರ ಮಾವು, ಟೊಮೆಟೊಗೆ ಬೆಂಕಿ ಇಡುತ್ತಿದೆ' ಎಂದು ಟೀಕಿಸಿದರು.

'ಕೋಲಾರಕ್ಕೆ ಬೆಂಕಿ ಇಡಲು ಉಸ್ತುವಾರಿ ಸಚಿವ ಬೈರತಿ ಸುರೇಶ್ ಬಂದಿದ್ದಾರೆ. ರೈತರ ಬಗ್ಗೆ ಮಾತನಾಡಲು ಬಂದ ಸಂಸದರನ್ನು ವೇದಿಕೆ ಮೇಲಿಂದ ಕೆಳಗಿಳಿಸಿದ್ದಾರೆ' ಎಂದು ಆರೋಪಿಸಿದರು.

'ಟಿಪ್ಪು ಸುಲ್ತಾನ್ ಖಡ್ಗವನ್ನು ಫ್ಲೆಕ್ಸ್, ಬ್ಯಾನರ್ ಮಾಡಿ ಹಾಕಿದ್ದಾರೆ. ಅನುಮತಿ ನೀಡಿದ್ದು ಯಾರು? ಜಿಲ್ಲಾಧಿಕಾರಿ ಹೆಸರು ಅಕ್ರಂ ಪಾಷ. ಖಡ್ಗ ಅಳವಡಿಸಿದ್ದು ಅಕ್ರಮವೋ,‌ ಸಕ್ರಮವೋ ಹೇಳಿ' ಎಂದು ಪ್ರಶ್ನಿಸಿದರು.

'ತ್ರಿಶೂಲ, ಡಮರುಗ ತರುತ್ತೇವೆ. ಅದನ್ನು ಕ್ಲಾಕ್ ಟವರ್ ನಲ್ಲಿ ಅಳವಡಿಸಲು ಅನುಮತಿ ನೀಡುತ್ತೀರಾ' ಎಂದು ಕೇಳಿದರು.

'ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಡಿಸಿಎಫ್ ಏಡುಕೊಂಡಲು ಅವರನ್ನು ಅಮಾನತುಗೊಳಿಸುವವರೆಗೆ ಬಿಡಲ್ಲ' ಎಂದು ರವಿಕುಮಾರ್ ಎಚ್ಚರಿಸಿದರು.

ಬಂಗಾರಪೇಟೆ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭವಾಗಿ ಕಾಲೇಜು ವೃತ್ತದ ಮೂಲಕ ಎಂ.ಜಿ ರಸ್ತೆ ತಲುಪಿ ಗಾಂಧಿವನ ತಲುಪಿತು. ವೇದಿಕೆ ಕಾರ್ಯಕ್ರಮ ನಡೆಯಿತು.

ರಮೇಶ್ ಕುಮಾರ್ ಜಮೀನು ಏಕೆ ಮುಟ್ಟಿಲ್ಲ: ಎಂಎಲ್ಸಿ ರವಿಕುಮಾರ್ ಪ್ರಶ್ನೆ

'ಅರಣ್ಯ ಇಲಾಖೆಯವರು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಜಮೀನನ್ನು ಒಂದಿಂಚೂ ಮುಟ್ಟಿಲ್ಲ ಏಕೆ? ಅಧಿಕಾರಿಗಳಿಗೆ ಸೂಟ್ ಕೇಸ್ ಹೋಗಿರಬಹುದು. ಇಲ್ಲವೇ ಬ್ರ್ಯಾಂಡೆಡ್ ಕೇಸ್ ಕೂಡ ಹೋಗಿರಹುದು. ಹೀಗಾಗಿ, ಅವರ 150 ಎಕರೆಯಲ್ಲಿ ಒಂದಿಂಚು ಜಮೀನು ಮುಟ್ಟಿಲ್ಲ. ಬಡವರ‌ ಜಮೀನು ಮಾತ್ರ ‌ಮುಟ್ಟುತ್ತೀರಾ? ಏಕೆ ರಮೇಶ್ ಕುಮಾರ್ ಹಾಗೂ ಸಂಬಂಧಿಕರನ್ನು ರಕ್ಷಣೆ ಮಾಡಿದ್ದೀರಿ' ಎಂದು ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಎನ್.ರವಿಕುಮಾರ್ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ರಾಜ್ಯ ಸರ್ಕಾರ, ಜಿಲ್ಲಾಡಳಿತ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT