ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ವರ್ಗಾವಣೆ ಪಟ್ಟಿ ಸೋರಿಕೆ: ಇಬ್ಬರ ಬಂಧನ

ಆಯುಕ್ತರ ಆಪ್ತ ಸಹಾಯಕನ ಕಂಪ್ಯೂಟರ್‌ನಿಂದಲೇ ಕಡತ ಡೌನ್‌ಲೋಡ್‌
Published 6 ಸೆಪ್ಟೆಂಬರ್ 2023, 15:23 IST
Last Updated 6 ಸೆಪ್ಟೆಂಬರ್ 2023, 15:23 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯವರ ಅನುಮೋದನೆಗಾಗಿ ಸಲ್ಲಿಸಿದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಪಟ್ಟಿ ಸೋರಿಕೆಯಾಗಿರುವ ಪ್ರಕರಣದಲ್ಲಿ ಶಾಮೀಲಾದ ಇಬ್ಬರನ್ನು ಬೆಂಗಳೂರು ಕೇಂದ್ರ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪಂಚಾಯತ್‌ ರಾಜ್‌ ಆಯುಕ್ತರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡಿ ದರ್ಜೆ ನೌಕರನಾಗಿರುವ ಶ್ರೀಧರ್‌ ಮತ್ತು ಅವರ ತಂದೆ ನಾರಾಯಣ್‌ ಬಂಧಿತರು. ನಾರಾಯಣ್‌ ವಿಧಾನಸೌಧದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರ ಆಪ್ತ ಸಹಾಯಕ ಜೀವನ್‌ ಅವರಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಬಳಿಕ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುಮೋದನೆ ಕೋರಿ ಸಲ್ಲಿಸಿದ್ದ ಪಿಡಿಒಗಳ ವರ್ಗಾವಣೆಯ ಕರಡು ಪಟ್ಟಿಗಳು ಆಗಸ್ಟ್‌ 21 ಮತ್ತು 24ರಂದು ಸೋರಿಕೆಯಾಗಿದ್ದವು. ಈ ಸಂಬಂಧ ಪಂಚಾಯತ್‌ ರಾಜ್‌ ಆಯುಕ್ತಾಲಯದ ಆಡಳಿತ ವಿಭಾಗದ ಉಪ ನಿರ್ದೇಶಕಿ ಭಾಗ್ಯಶ್ರೀ ಎಚ್‌.ಎಸ್‌. ಸಲ್ಲಿಸಿದ್ದ ದೂರನ್ನು ಆಧರಿಸಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು ಆ.24ರಂದು ಎಫ್‌ಐಆರ್‌ ದಾಖಲಿಸಿದ್ದರು.

‘ಪಂಚಾಯತ್‌ ರಾಜ್‌ ಆಯುಕ್ತರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಜೀವನ್‌ ಎಂಬುವವರ ಕಂಪ್ಯೂಟರ್‌ನಲ್ಲಿ ಪಿಡಿಒಗಳ ವರ್ಗಾವಣೆ ಪಟ್ಟಿಗಳನ್ನು ಇ–ಆಫೀಸ್‌ ತಂತ್ರಾಂಶದಿಂದ ಡೌನ್‌ಲೋಡ್‌ ಮಾಡಲಾಗಿತ್ತು. ಈ ಪಟ್ಟಿಗಳನ್ನು ಶ್ರೀಧರ್‌ ಮೊಬೈಲ್‌ಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಅವರು ಅದನ್ನು ವಾಟ್ಸ್‌ ಆ್ಯಪ್‌ ಮೂಲಕ ತಂದೆಯ ಮೊಬೈಲ್‌ಗೆ ಕಳುಹಿಸಿದ್ದರು. ಅವರಿಂದ ಇತರರಿಗೆ ರವಾನಿಸಿರುವುದು ಕಂಡುಬಂದಿದೆ’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘2013ರ ಬ್ಯಾಚ್‌ನ ಪಿಡಿಒ ಸ್ಟೇಟ್‌ ಯೂನಿಯನ್‌’ ಎಂಬ ವಾಟ್ಸ್‌ ಆ್ಯಪ್‌ ಗುಂಪಿನಲ್ಲಿ ವರ್ಗಾವಣೆ ಪಟ್ಟಿಗಳನ್ನು ಹಂಚಿಕೊಂಡಿದ್ದ ನಿವಿತ್‌ ನಿಹಾಲ್‌ ಮತ್ತು ಮಂಕಾನಿ ಎಸ್‌.ಎ. ಎಂಬ ಪಿಡಿಒಗಳನ್ನು ಪ್ರಮುಖ ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು. ಈ ಇಬ್ಬರು ಸೇರಿದಂತೆ ಹಲವು ಮಂದಿ ಪಿಡಿಒಗಳ ವಿಚಾರಣೆ ನಡೆಸಲಾಗಿದೆ. ವರ್ಗಾವಣೆ ಪಟ್ಟಿಯ ಸೋರಿಕೆಯಲ್ಲಿ ಪಿಡಿಒಗಳ ಪಾತ್ರ ಇರಲಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಕಂಪ್ಯೂಟರ್‌ ಹ್ಯಾಕಿಂಗ್‌ ನಡೆದಿಲ್ಲ’: ‘ಪಂಚಾಯತ್‌ ರಾಜ್‌ ಆಯುಕ್ತಾಲಯದ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡಿ ಪಿಡಿಒಗಳ ವರ್ಗಾವಣೆ ಪಟ್ಟಿಗಳನ್ನು ಸೋರಿಕೆ ಮಾಡಲಾಗಿದೆ ಎಂದು ಭಾಗ್ಯಶ್ರೀ ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ, ಆಯುಕ್ತಾಲಯದ ಯಾವುದೇ ಕಂಪ್ಯೂಟರ್‌ ಹ್ಯಾಕಿಂಗ್‌ ಆಗಿರುವುದು ಕಂಡುಬಂದಿಲ್ಲ. ನೇರವಾಗಿ ಇ–ಆಫೀಸ್‌ ತಂತ್ರಾಂಶದಿಂದಲೇ ಡೌನ್‌ಲೋಡ್‌ ಮಾಡಿದ ಕಡತಗಳನ್ನು ಸೋರಿಕೆ ಮಾಡಿರುವುದು ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT