ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾ ಹೇಳಿಕೆಗೆ ಕಡಿವಾಣ ಹಾಕಲು ಕೋರಿಕೆ: ಕೋರ್ಟ್‌ ಕದ ತಟ್ಟಿದ ರೋಹಿಣಿ ಸಿಂಧೂರಿ

Last Updated 22 ಫೆಬ್ರುವರಿ 2023, 14:51 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ನಿರ್ದೇಶಿಸಬೇಕು ಮತ್ತು ನನ್ನ ಮಾನ ಹಾನಿಯಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸಬೇಕು‘ ಎಂದು ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಿದ್ದಾರೆ.

ಈ ದಾವೆಯನ್ನು ನಗರದ 74ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಗಂಗಣ್ಣವರ ಬುಧವಾರ ವಿಚಾರಣೆ ನಡೆಸಿ, ಮಧ್ಯಂತರ ಆದೇಶವನ್ನು ಗುರುವಾರಕ್ಕೆ (ಫೆ.23) ಕಾಯ್ದಿರಿಸಿದ್ದಾರೆ.

ವಿಚಾರಣೆ ವೇಳೆ ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿ, ‘ರೋಹಿಣಿ ಅವರ ಖಾಸಗಿ ಫೋಟೊಗಳು ಮತ್ತು ಮೊಬೈಲ್ ನಂಬರ್ ಅನ್ನು ರೂಪಾ ತಮ್ಮ ಫೇಸುಬುಕ್ ಖಾತೆಯಲ್ಲಿ ಬಹಿರಂಗಪಡಿಸುವ ಮೂಲಕ ಕಾನೂನು ಬಾಹಿರ ನಡೆ ಅನುಸರಿಸಿದ್ದಾರೆ. ಇದು ಅವರ ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ’ ಎಂದರು.

ಇದಕ್ಕೆ ನ್ಯಾಯಾಧೀಶರು, ‘ರೂಪಾ ಅವರ ವಿರುದ್ಧ ನೀವು ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ರೋಹಿಣಿ ಪರ ವಕೀಲರು, ‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ದೂರು ನೀಡಲಾಗಿದೆ‘ ಎಂದರು.

‘ಈ ಪ್ರಕರಣದಲ್ಲಿ ದೂರು ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಸೂಕ್ತ ಪ್ರಾಧಿಕಾರವೇ’ ಎಂಬ ನ್ಯಾಯಾಧೀಶರ ಮರುಪ್ರಶ್ನೆಗೆ, ‘ನಾಗರಿಕ ಸೇವಾ ನಿಯಮಗಳ ಅನುಸಾರ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗಿದೆ. ಆದರೆ, ರೂಪಾ ಮುಖ್ಯ ಕಾರ್ಯದರ್ಶಿ ಸೂಚನೆಯನ್ನೂ ಪಾಲಿಸುತ್ತಿಲ್ಲ. ಸರ್ಕಾರದ ಸುತ್ತೋಲೆಯನ್ನು ಧಿಕ್ಕರಿಸಿ ತಮ್ಮ ಹೇಳಿಕೆಗಳನ್ನು ಮುಂದುವರಿಸಿದ್ದಾರೆ’ ಎಂದು ವಿವರಿಸಿದರು.

‘ರೂಪಾ, ರೋಹಿಣಿಯವರ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ರೋಹಿಣಿಯವರ ಖಾಸಗಿ ಫೋನ್‌ ನಂಬರ್ ಬಹಿರಂಗಪಡಿಸಿರುವ ಕಾರಣ ರೋಹಿಣಿ ಅವರಿಗೆ ನೂರಾರು ಅಪರಿಚಿತರು ಕರೆ ಮಾಡುತ್ತಿದ್ದಾರೆ. ಆದ್ದರಿಂದ, ದಾವೆದಾರರ ವಿರುದ್ಧ ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡದಂತೆ ರೂಪಾ ಅವರಿಗೆ ನಿರ್ದೇಶಿಸಬೇಕು. ರೂಪಾ ಅವರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧವೂ ಪ್ರತಿಬಂಧಕ ಆದೇಶ ಹೊರಡಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT