ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಕೈಬಿಡಲು ಎನ್‌ಟಿಸಿಎ ಶಿಫಾರಸು

ಪರಿಸರವಾದಿಗಳ ಕೆಂಗಣ್ಣಿಗೆ ಹುಬ್ಬಳ್ಳಿ– ಅಂಕೋಲಾ ರೈಲು
Last Updated 31 ಅಕ್ಟೋಬರ್ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು:ದಟ್ಟ ಅರಣ್ಯದ ನಡುವೆ ಹಾದು ಹೋಗಿ ಅರಣ್ಯನಾಶಕ್ಕೆ ಕಾರಣವಾಗಲಿರುವ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನೇತೃತ್ವದ ಸಮಿತಿಯು ಶಿಫಾರಸು ಮಾಡಿದೆ.

ರೈಲು ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯದೇ ನೇರವಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದ ಕ್ರಮವನ್ನು ಪ್ರಶ್ನಿಸಿ ವನ್ಯಜೀವಿ ರಕ್ಷಣಾ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು. ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಬೇಕು ಹಾಗೂ ಪ್ರಾಧಿಕಾರದ ಮೂಲಕ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರ ಮೊದಲೇ ಸೂಚಿಸಿತ್ತು.

ಇದರ ಬೆನ್ನಲ್ಲೇ ಪ್ರಾಧಿಕಾರವು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದೆ. ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಈ ವರದಿಯ ಪ್ರತಿ ಪಡೆದುಕೊಂಡಿದ್ದಾರೆ. ಯೋಜನೆಯು ಕಾರ್ಯಸಾಧುವಲ್ಲ, ಅದನ್ನು ಕೈಬಿಡಬೇಕು ಎಂದು ಎರಡನೇ ವರದಿಯಲ್ಲೂ ಶಿಫಾರಸು ಮಾಡಲಾಗಿದೆ.

ಉದ್ದೇಶಿತ ರೈಲು ಮಾರ್ಗವು ಹುಲಿ ಕಾರಿಡಾರ್‌ನಲ್ಲಿ ಬರುವ ಕಾರಣಕ್ಕೆ ಸ್ಥಳ ಪರಿಶೀಲನೆಗೆ ಹುಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿತ್ತು. ಬಳ್ಳಾರಿಯಿಂದ ಕಬ್ಬಿಣದ ಅದಿರು ಸಾಗಿಸುವ ಯೋಜನೆಯಿಂದ ಯಾವುದೇ ಉಪಯೋಗ ಇಲ್ಲ. ಯೋಜನೆಯಿಂದ ಇಲ್ಲಿನ ಜೀವವೈವಿಧ್ಯಕ್ಕೆ ತೀವ್ರ ಹಾನಿ ಆಗಲಿದೆ. ಹಾಗಾಗಿ ಯೋಜನೆ ಕೈಬಿಡಬೇಕು ಎಂದು ಇದೇ ಮಾರ್ಚ್‌ನಲ್ಲಿ ಪ್ರಾಧಿಕಾರವು ವರದಿ ಕೊಟ್ಟಿತ್ತು.

ಮತ್ತೊಂದು ಬಾರಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ರಾಷ್ಟ್ರೀಯ ವನ್ಯವಜೀವಿ ಮಂಡಳಿಯ ಸ್ಥಾಯಿ ಸಮಿತಿಯ 48ನೇ ಸಭೆಯಲ್ಲಿ ತೀರ್ಮಾನವಾಗಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಗಳು ಈ ತಂಡದಲ್ಲಿ ಇರಬೇಕು ಎಂದೂ ಹೇಳಲಾಗಿತ್ತು. ಈ ತಂಡವು ಸ್ಥಳ ಪರಿಶೀಲನೆ ನಡೆಸಿ ಆಗಸ್ಟ್‌ನಲ್ಲಿ ವರದಿ ಸಲ್ಲಿಸಿದೆ. ಯೋಜನೆಯನ್ನು ಕೈಬಿಡಬೇಕು ಎಂದು ಈ ವರದಿಯಲ್ಲಿಯೂ ಶಿಫಾರಸು ಮಾಡಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಅರಣ್ಯ ಸಲಹಾ ಸಮಿತಿ, ಕೇಂದ್ರೀಯ ಉನ್ನತಾಧಿಕಾರ ಸಮಿತಿ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳು ಈ ಹಿಂದೆ ಈ ರೈಲು ಮಾರ್ಗ ಯೋಜನೆಯನ್ನು ಕೈಬಿಡುವಂತೆ ಸಲಹೆ ನೀಡಿದ್ದವು.

ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆಯ ಪ್ರಕಾರ, ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಧಾಮಗಳ ಮೂಲಕ ರಸ್ತೆ ಹಾಗೂ ರೈಲು ಮಾರ್ಗಗಳು ಹಾದು ಹೋಗದಂತೆ ಕೇಂದ್ರ ಭೂ ಸಾರಿಗೆ ಮತ್ತು ರೈಲ್ವೆ ಸಚಿವಾಲಯ ನೋಡಿಕೊಳ್ಳಬೇಕು. ವನ್ಯಜೀವಿ ಮೊಗಸಾಲೆಗಳಲ್ಲಿಯೂ ರಸ್ತೆ ಮತ್ತು ರೈಲು ಮಾರ್ಗಗಳು ಹಾದು ಹೋಗಬಾರದು ಅಥವಾ ಕನಿಷ್ಠಪಕ್ಷ ರಾತ್ರಿ ಸಂಚಾರ ನಿಷೇಧದಂತಹ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು.

ಹಾಗಿದ್ದರೂ, ಹಲವು ಬಾರಿ ತಿರಸ್ಕೃತವಾಗಿದ್ದ ಸದರಿ ರೈಲು ಮಾರ್ಗ ಯೋಜನೆಯನ್ನು 2016ರಲ್ಲಿ ಪುನಃ ಸಲ್ಲಿಸಲಾಗಿದೆ. ಹುಲಿ ಹಾಗೂ ಆನೆ ಮೊಗಸಾಲೆಗಳ ಮೂಲಕ ಈ ಮಾರ್ಗ ಹಾದು ಹೋಗುತ್ತದೆಯಾದರೂ ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆಯನ್ನು ಕಡೆಗಣಿಸಿ ಯೋಜನೆಗೆ ಅನುಮತಿ ಕೊಡಬೇಕು ಎಂದು ರೈಲ್ವೆ ಇಲಾಖೆ ಪಟ್ಟು ಹಿಡಿದಿದೆ.

ವರದಿಯಲ್ಲಿ ಏನಿದೆ?

*ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ನಿರ್ಮಾಣದಿಂದಾಗಿ ಆಗುವಪರಿಣಾಮಗಳನ್ನು ತಡೆದುಕೊಳ್ಳಲು ಪಶ್ಚಿಮ ಘಟ್ಟಗಳ ಅತೀ ಸೂಕ್ಷ್ಮ ಪರಿಸರ ವ್ಯವಸ್ಥೆಗಳಿಗೆ ಸಾಧ್ಯವೇ ಇಲ್ಲ

*ಅರಣ್ಯದ ಸಾಂದ್ರತೆ, ಜಲವಿಜ್ಞಾನ, ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಜಾಲಗಳು, ಹಂಚಿಕೆ ಮತ್ತು ಅವುಗಳ ನಡವಳಿಕೆ, ಪವಿತ್ರ ತೋಪುಗಳ ಸಂರಕ್ಷಣೆ ಮೇಲೆ ಸರಿಪಡಿಸಲಾಗದ ದುಷ್ಪರಿಣಾಮ ಆಗಲಿದೆ

*ಕರ್ನಾಟಕದ ಪ್ರಗತಿಗೆಆರ್ಥಿಕ ಅಭಿವೃದ್ಧಿ ಮುಖ್ಯ. ಆದರೆ ಅದು ಪಶ್ಚಿಮ ಘಟ್ಟಗಳ ಕಾಡು, ವನ್ಯಜೀವಿಗಳಿಗೆ ಹಾನಿ ಆಗುವ ರೀತಿಯಲ್ಲಿ ಇರಬಾರದು. ಪಶ್ಚಿಮ ಘಟ್ಟಗಳ ಜೈವಿಕ ವೈವಿಧ್ಯದ ಸಂರಕ್ಷಣೆ ಇಲ್ಲದೆ ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿ ದೀರ್ಘಾವಧಿಯಲ್ಲಿ ಸುಸ್ಥಿರವಲ್ಲ

*ಮೇಲ್ಸೇತುವೆಗಳು, ಒಳಮಾರ್ಗಗಳು, ಇಳಿಜಾರುಗಳು ಮತ್ತು ಸುರಂಗಗಳ ಮೂಲಕ ಇಂತಹ ಯೋಜನೆಗಳಿಂದಾಗುವ ಕೆಟ್ಟ ಪರಿಣಾಮ ಕಡಿಮೆ ಮಾಡಲು ಸಾಧ್ಯವಿಲ್ಲ. ಯೋಜನೆ ಕೈಬಿಡುವುದು ಅತ್ಯುತ್ತಮ ಪರಿಹಾರ

*ಹುಲಿ ಪ್ರಾಧಿಕಾರವು ಯಾವುದೇ ಒತ್ತಡಕ್ಕೆ ಒಳಗಾಗದೇ ತನ್ನ ನಿಲುವನ್ನು ಸಡಿಲಿಸದಿರುವುದು ಅತ್ಯುತ್ತಮ ಬೆಳವಣಿಗೆ
-ಗಿರಿಧರ ಕುಲಕರ್ಣಿ, ವನ್ಯಜೀವಿ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT