ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಮುಚ್ಚಿಹಾಕಲು ದರ್ಶನ್‌ ₹40 ಲಕ್ಷ ಸಾಲ: ಪೊಲೀಸರು

* ನಟನ ಮನೆಯಲ್ಲಿ ₹37.40 ಲಕ್ಷ ಜಪ್ತಿ * ₹3 ಲಕ್ಷ ತಂದುಕೊಟ್ಟ ಪತ್ನಿ ವಿಜಯಲಕ್ಷ್ಮಿ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಲೆ ಪ್ರಕರಣದಿಂದ ಪಾರಾಗಲು ಹಾಗೂ ಇತರೆ ಆರೋಪಿಗಳ ಮೂಲಕ ಸಾಕ್ಷ್ಯನಾಶ ಮಾಡಲು ನಟ ದರ್ಶನ್‌, ತನ್ನ ಸ್ನೇಹಿತ ಮೋಹನ್‌ರಾಜ್‌ ಎಂಬವರ ಕಡೆಯಿಂದ ₹40 ಲಕ್ಷ ಸಾಲ ಪಡೆದುಕೊಂಡಿದ್ದರು’ ಎಂಬ ಸಂಗತಿ ಪಶ್ಚಿಮ ವಿಭಾಗದ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

₹40 ಲಕ್ಷ ಪೈಕಿ ₹37.40 ಲಕ್ಷವನ್ನು ರಾಜರಾಜೇಶ್ವರಿನಗರದಲ್ಲಿರುವ ದರ್ಶನ್‌ ಮನೆಯಲ್ಲಿ ಜಪ್ತಿ ಮಾಡಲಾಗಿದೆ. ಜೊತೆಗೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪತಿ ನೀಡಿದ್ದ ₹3 ಲಕ್ಷ ಹಾಗೂ ಇತರೆ ವಸ್ತುಗಳನ್ನು ಪ್ರಕರಣದ ತನಿಖಾ ತಂಡಕ್ಕೆ ತಂದುಕೊಟ್ಟಿದ್ದಾರೆ.

‘ಕೊಲೆ ಪ್ರಕರಣ ಸಂಬಂಧ ಮೊದಲ ಬಾರಿಗೆ ಹೇಳಿಕೆ ನೀಡಿದ್ದ ಆರೋಪಿ ದರ್ಶನ್, ‘ನಾನು ಕೊಲೆ ಮಾಡಿಲ್ಲ’ ಎಂದು ವಾದಿಸಿದ್ದರು. ಸಾಕ್ಷ್ಯಗಳನ್ನು ಎದುರಿಟ್ಟು ವಿಚಾರಿಸಿದಾಗ ತಪ್ಪೊಪ್ಪಿಕೊಂಡು ಮರು ಹೇಳಿಕೆ ನೀಡಿದ್ದಾರೆ.

‘ಕೊಲೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವ ಮುನ್ಸೂಚನೆ ಇತ್ತು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು, ಬೇರೆಯವರನ್ನು ಠಾಣೆಗೆ ಶರಣು ಮಾಡಿಸಲು ಹಾಗೂ ಸಾಕ್ಷ್ಯ ನಾಶ ಮಾಡಲು ಹಣದ ಅಗತ್ಯವಿತ್ತು. ಸ್ನೇಹಿತ ಮೋಹನ್ ರಾಜ್ ಕಡೆಯಿಂದ ₹40 ಲಕ್ಷ ಪಡೆದುಕೊಂಡು ಮನೆಯಲ್ಲಿಟ್ಟುಕೊಂಡಿದ್ದೆ’ ಎಂಬುದಾಗಿ ದರ್ಶನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದರ್ಶನ್ ಹೇಳಿಕೆ ಆಧರಿಸಿ ಮೋಹನ್‌ರಾಜ್‌ ಅವರನ್ನು ವಿಚಾರಿಸಿದಾಗ, ಸಾಲ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಇದೇ ಮಾಹಿತಿ ಆಧರಿಸಿ, ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ಮನೆಯಲ್ಲಿ ಜೂನ್ 19ರಂದು ಶೋಧ ನಡೆಸಲಾಗಿತ್ತು. ಇದೇ ಸಂದರ್ಭದಲ್ಲಿ ₹37.40 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿವೆ.

‘ಕೊಲೆ ನಡೆದ ಮರುದಿನ ಮೈಸೂರಿನ ರಾಡಿಸನ್ ಹೋಟೆಲ್‌ನಲ್ಲಿದ್ದ ದರ್ಶನ್, ತನ್ನ ಬಳಿಯ ₹3 ಲಕ್ಷ ಹಾಗೂ ಇತರೆ ವಸ್ತುಗಳನ್ನು ಪತಿ ವಿಜಯಲಕ್ಷ್ಮಿಗೆ ನೀಡುವಂತೆ ಮೇಕಪ್‌ಮ್ಯಾನ್ ಕೈಗೆ ಕೊಟ್ಟಿದ್ದರು. ಆತ, ವಿಜಯಲಕ್ಷ್ಮಿ ಅವರಿಗೆ ನಗದು ತಲುಪಿಸಿದ್ದ. ಇದೇ ಮಾಹಿತಿ ಆಧರಿಸಿ ವಿಜಯಲಕ್ಷ್ಮಿ ಅವರಿಗೆ ನೋಟಿಸ್ ನೀಡಲಾಗಿತ್ತು. ಠಾಣೆಗೆ ಬಂದಿದ್ದ ಅವರು, ₹3 ಲಕ್ಷ ಲಗದು ಹಾಗೂ ಉಳಿದ ವಸ್ತುಗಳನ್ನು ತನಿಖಾ ತಂಡಕ್ಕೆ ಒಪ್ಪಿಸಿದ್ದಾರೆ. ಪಂಚರ ಸಮ್ಮುಖದಲ್ಲಿ ಅವುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಿದ್ಯುತ್ ಶಾಕ್ ಉಪಕರಣ ಜಪ್ತಿ: ‘ರೇಣುಕಸ್ವಾಮಿ ಅವರಿಗೆ ವಿದ್ಯುತ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿ ಅಮಾನುಷ ಹಾಗೂ ಅಮಾನವೀಯವಾಗಿ ಕೊಲೆ ಮಾಡಲಾಗಿದೆ. ವಿದ್ಯುತ್ ಶಾಕ್ ನೀಡಲು ಬಳಸಿದ್ದ ‘ಎಲೆಕ್ಟ್ರಿಕ್ ಷಾಕ್ ಟಾರ್ಚ್‌’ ಆರೋಪಿ ಧನರಾಜ್ ಅಲಿಯಾಸ್ ರಾಜನ ಬಳಿ ಇತ್ತು. ಆತನ ಮನೆಯಲ್ಲಿ ಶೋಧ ನಡೆಸಿ, ಉಪಕರಣ, ಮೊಬೈಲ್, ಬಟ್ಟೆಗಳು, ಚಪ್ಪಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತನ ಚಿನ್ನದ ಸರ, ಉಂಗುರ ಜಪ್ತಿ: ರೇಣುಕಸ್ವಾಮಿ ಅವರ ಚಿನ್ನದ ಸರ ಹಾಗೂ ಉಂಗುರವನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ಆರೋಪಿ ರಾಘವೇಂದ್ರ ಮನೆಯಲ್ಲಿ ಸರ ಹಾಗೂ ಉಂಗುರ ಜಪ್ತಿ ಮಾಡಲಾಗಿದೆ. ಜೊತೆಗೆ, ದರ್ಶನ್ ನೀಡಿದ್ದ ಎನ್ನಲಾದ ₹4,50,500 ನಗದು, ಇಟಿಯಾಸ್ ಕಾರು (ಕೆಎ 11 ಬಿ 7939) ಸಹ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘ದರ್ಶನ್ ಮನೆ ಎದುರು ಹಾಗೂ ಕೃತ್ಯ ನಡೆದ ಶೆಡ್‌ನಲ್ಲಿ ನಿಲ್ಲಿಸಿದ್ದ ಆರೋಪಿಗಳ ಹೋಂಡಾ ಆಕ್ಟಿವಾ, ಹೋಂಡಾ ಶೈನ್, ಟಿವಿಎಸ್ ಜ್ಯೂಪಿಟರ್ ಹಾಗೂ ಹೋಂಡಾ ಡಿಯೊ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಇಬ್ಬರು ಆರೋಪಿಗಳು ಕೃತ್ಯ ಬಳಿಕ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್‌ನ ರಿಲಯನ್ಸ್ ಟ್ರೆಂಡ್ಸ್‌ ಮಳಿಗೆಯಲ್ಲಿ ಹೊಸ ಬಟ್ಟೆ ಖರೀದಿಸಿದ್ದರು. ಇದಕ್ಕೆ ಸಂಬಂಧಪಟ್ಟ ಬಿಲ್ ಹಾಗೂ ಮಳಿಗೆಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಪಟ್ಟಣಗೆರೆ ಕೆ. ಜಯಣ್ಣ ಅವರ ಶೆಡ್‌ನಲ್ಲಿ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ತನ್ನ ಮೊಬೈಲ್ ಬಚ್ಚಿಟ್ಟಿದ್ದರು. ಅದನ್ನೂ ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

ಎರಡು ಮೊಬೈಲ್‌ಗೆ ಹುಡುಕಾಟ: ‘ರೇಣುಕಸ್ವಾಮಿ ಹಾಗೂ ಆರೋಪಿಯೊಬ್ಬನ ಮೊಬೈಲ್‌ ಮೋರಿಗೆ ಎಸೆಯಲಾಗಿತ್ತು. ಬಿಬಿಎಂಪಿ ಸಿಬ್ಬಂದಿ ಸಹಾಯದಿಂದ ಮೋರಿಯಲ್ಲಿ ಹುಡುಕಾಟ ನಡೆಸಲಾಗುತ್ತಿದ್ದು, ಸದ್ಯಕ್ಕೆ ಮೊಬೈಲ್‌ಗಳು ಸಿಕ್ಕಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಆರೋಪಿಗಳನ್ನು ಡಿಎನ್‌ಎ ಪರೀಕ್ಷೆ ಒಳಪಡಿಸಲಾಗಿದ್ದು, ವೈದ್ಯರು ಕೂದಲಿನ ಮಾದರಿ ಸಂಗ್ರಹಿಸಿದ್ದಾರೆ. ಜೊತೆಗೆ, ಹಲವರ ರಕ್ತದ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಕೊಲೆ ಸಂಚು ಮಾಡಿದ್ದು ಪವಿತ್ರಾ’

‘ಬಂಧಿತ ಆರೋಪಿ ಪವಿತ್ರಾ ಗೌಡ ಅವರೇ, ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಂಚುಕೋರರು. ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಪ್ರಚೋದನೆ ನೀಡಿ ಕೊಲೆ ಮಾಡಿಸಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಮೊಬೈಲ್‌ನಲ್ಲಿ ಮಹತ್ವದ ಪುರಾವೆ: ‘ಕೊಲೆ ಪ್ರಕರಣದ ಆರೋಪಿಯೊಬ್ಬನ ಮೊಬೈಲ್‌ನಲ್ಲಿ ಮಹತ್ವದ ಪುರಾವೆ ಇದೆ. ಅದನ್ನು ಆರೋಪಿಗೆ ಕಳುಹಿಸಿದವರು ಯಾರು ಎಂಬ ಬಗ್ಗೆ ಮಾಹಿತಿ ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಾಕ್ಷ್ಯ ಹೇಳದಂತೆ ಬೆದರಿಕೆ’

‘ಪಟ್ಟಣಗೆರೆ ಶೆಡ್‌ನಲ್ಲಿದ್ದ ಹಲವು ಕೆಲಸಗಾರರು, ಪ್ರಕರಣದ ಪ್ರಮುಖ ಸಾಕ್ಷಿಗಳು. ಕೆಲಸಗಾರರಿಗೆ ಹಣದ ಆಮಿಷವೊಡ್ಡಿರುವ ಕೆಲವರು, ‘ಸಾಕ್ಷ್ಯ ಹೇಳಿದರೆ ಕೊಲೆ ಮಾಡುತ್ತೇವೆ’ ಎಂಬುದಾಗಿ ಬೆದರಿಕೆಯೊಡ್ಡುತ್ತಿರುವ ಮಾಹಿತಿ ಲಭ್ಯವಾಗಿದೆ. ಬೆದರಿಕೆಯೊಡ್ಡಿದವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಶೆಡ್ ಮಾಲೀಕ ಜಯಣ್ಣ ಅವರ ವಿಚಾರಣೆ ನಡೆಸಲಾಗಿತ್ತು. ಆರೋಪಿ ದೀಪಕ್‌, ಶೆಡ್‌ ನಿರ್ವಹಣೆ ಮಾಡುತ್ತಿದ್ದನೆಂದು ಅವರು ಹೇಳಿಕೆ ನೀಡಿದ್ದಾರೆ. ಕೆಲಸಗಾರರಿಗೆ ಬೆದರಿಕೆ ಇರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ’ ಎಂದರು.

‘ದರ್ಶನ್ ನೀಡಿದ್ದರು ಎನ್ನಲಾದ ₹5 ಲಕ್ಷವನ್ನು ಕೆಲ ಆರೋಪಿಗಳು, ಸ್ನೇಹಿತರಿಗೆ ನೀಡಿದ್ದಾರೆ. ಅವುಗಳನ್ನು ಜಪ್ತಿ ಮಾಡಬೇಕಿದೆ’ ಎಂದು ಪೊಲೀಸರು ತಿಳಿಸಿದರು.

‘ಅಪರಾಧ ಹಿನ್ನೆಲೆಯುಳ್ಳ ದರ್ಶನ್ ಅಭಿಮಾನಿಗಳ ಬಳಕೆ’

‘ಆರೋಪಿ ನಟ ದರ್ಶನ್, ಅಪರಾಧ ಹಿನ್ನೆಲೆಯುಳ್ಳವರು. ಅವರ ವಿರುದ್ಧ ವಿಜಯನಗರ (2021), ಟಿ. ನರಸೀಪುರ (2022) ಹಾಗೂ ರಾಜರಾಜೇಶ್ವರಿನಗರ (2024) ಠಾಣೆಯಲ್ಲಿ ಈ ಹಿಂದೆ ಮೂರು ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದ್ದಾರೆ.

‘ತನ್ನ ಹಣ ಹಾಗೂ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿ ಹಾಗೂ ಅಭಿಮಾನಿಗಳನ್ನು ಭಾಗಿಯಾಗಿಸಿ ಕೃತ್ಯ ಎಸಗಿದ್ದಾರೆ. ರೇಣುಕಸ್ವಾಮಿ ಅವರನ್ನು ಅಮಾನುಷವಾಗಿ ಹಾಗೂ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವುದು ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳಿಂದ ಗೊತ್ತಾಗಿದೆ. ಇದೊಂದು ಜೀವಾವಧಿ ಶಿಕ್ಷೆಗೆ ಅರ್ಹವಾದ ಪ್ರಕರಣ. ಆರೋಪಿಗಳು, ಪ್ರಭಾವಿಗಳು. ಜಾಮೀನು ನೀಡಿದರೆ, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಜಾಮೀನು ನೀಡಬಾರದು’ ಎಂದು ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ.

‘ಮೈಸೂರಿನ ರಾಡಿಸನ್ ಹೋಟೆಲ್‌ನಲ್ಲಿದ್ದ ದರ್ಶನ್, ಕೊಲೆ ಪ್ರಕರಣದಿಂದ ಬಚಾವಾಗಲು ಅಲ್ಲಿಂದಲೇ ಅವರಿಗೆ ಕರೆ ಮಾಡಿ ಸಂಚು ಮಾಡಿದ್ದರು. ಆರೋಪಿಗಳನ್ನು ಶರಣು ಮಾಡಿಸಲು ಪ್ರಯತ್ನಿಸುತ್ತಿದ್ದರು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT