ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕಕ್ಕಾಗಿ ಪ್ರತ್ಯೇಕ ಆಯೋಗ ರಚಿಸಿ

ನುಡಿಸಿರಿ: ಪ್ರಾದೇಶಿಕ ತಾರತಮ್ಯ ನಿವಾರಿಸಲು ಮಾಜಿ ಶಾಸಕ ವೈ.ಎಸ್.ವಿ. ದತ್ತ ಒತ್ತಾಯ
Last Updated 17 ನವೆಂಬರ್ 2018, 16:00 IST
ಅಕ್ಷರ ಗಾತ್ರ

ಮೂಡುಬಿದಿರೆ: ರಾಜ್ಯದ ಅಖಂಡತೆಗೆ ತೊಂದರೆ ಇಲ್ಲ. ಆದರೆ, ತಾರತಮ್ಯ, ಅಸಮಾಧಾನಗಳು ಎದ್ದು ಕಾಣುತ್ತಿವೆ‌. ಇವನ್ನು ಈಗಲೇ ಚಿವುಟಿ ಹಾಕದಿದ್ದರೆ, ರಾಜ್ಯದ ವಿಭಜನೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಪ್ರಾದೇಶಿಕ ತಾರತಮ್ಯಗಳು ನಡೆಯುತ್ತಿದ್ದು, ಮೂಲಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.

ಆಳ್ವಾಸ್ ನುಡಿಸಿರಿಯಲ್ಲಿ ಶನಿವಾರ ಎರಡನೇ ದಿನದ ವಿಶೇಷೋಪನ್ಯಾಸದಲ್ಲಿ ‘ಅಖಂಡ ಕರ್ನಾಟಕ‘ ವಿಷಯದ ಕುರಿತು ಅವರು ಮಾತನಾಡಿದರು.

‘ರಾಜ್ಯ ಬಜೆಟ್ ನಲ್ಲಿ ಸಮಾನವಾಗಿ ಅನುದಾನ ಹಂಚಿಕೆ ಆಗುತ್ತಿಲ್ಲ. ಉತ್ತರ ಕರ್ನಾಟಕದ ಭಾಗಗಳಿಗೆ ಹಂಚಿಕೆಯಾಗುವ ಅನುದಾನ ತೀರಾ ಕನಿಷ್ಠವಾಗಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಆಯೋಗ ರಚಿಸುವುದು ಅಗತ್ಯ’ ಎಂದು ಹೇಳಿದರು.

ದಕ್ಷಿಣ ಕರ್ನಾಟಕದ ಮೂರು ಹೋಬಳಿಗಳಿಗೆ ಸೇರಿದರೆ, ಉತ್ತರ ಕರ್ನಾಟಕದ ಒಂದು ಹೋಬಳಿಗೆ ಸಮನಾಗುತ್ತದೆ. ಹೀಗಾಗಿ ಬಜೆಟ್ ಹಂಚಿಕೆಯಲ್ಲಿ ಉತ್ತರ ಕರ್ನಾಟಕ ಮರೀಚಿಕೆಯಾಗುತ್ತಿದೆ. ಅಖಂಡ ಕರ್ನಾಟಕ ನಿರ್ಮಾಣವಾಗಲು ಸಮಾನ ಹಣಕಾಸು ಹಂಚಿಕೆ ಆಗಬೇಕು. ಈ ಬಗ್ಗೆ ವಿಮರ್ಶೆ ಮಾಡುವುದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಸಂಪತ್ತಿನ ಕೇಂದ್ರೀಕರಣವು ಕರ್ನಾಟಕದ ಅಖಂಡತೆಗೆ ಇರುವ ಪ್ರಮುಖ ಸವಾಲಾಗಿದ್ದು, ಜಾತಿಪ್ರೇರಿತವಾದ ಸ್ವಾರ್ಥ, ಪಕ್ಷಪ್ರೇರಿತವಾದ ರಾಜಕಾರಣ, ವ್ಯಕ್ತಿ ಪ್ರತಿಷ್ಠೆಯಾದ ಮೂರ್ಖತನವು ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಅಡ್ಡಿ ಉಂಟು ಮಾಡಿವೆ. ಇದನ್ನು ಹೋಗಲಾಡಿಸಲು ಭೌಗೋಳಿಕ ರಾಜಕೀಯ ವ್ಯವಸ್ಥೆಯೊಳಗೆ ಪ್ರಾದೇಶಿಕ ಸಮಾನತೆಯನ್ನು ಕಾಪಾಡುವಂತಹ ಏಕರೂಪತೆ ಬರಬೇಕು’ ಎಂದು ದತ್ತ ಹೇಳಿದರು.

‘ಕೆಂಗಲ್ ಹನುಮಂತಯ್ಯರವರಂತಹ ಮಹಾನ್ ವ್ಯಕ್ತಿಗಳ ಪರಿಶ್ರಮದಿಂದ ಹುಟ್ಟಿಕೊಂಡ ಅಖಂಡ ಕರ್ನಾಟಕದಲ್ಲಿ ಪ್ರಸ್ತುತ ರಾಜಕಾರಣ, ಜಾತಿ, ಧರ್ಮ, ಸ್ವಾರ್ಥ, ಸಂಪತ್ತಿನ ಕ್ರೋಡೀಕರಣಗಳು ವಿಜೃಂಭಿಸುತ್ತಿವೆ. ಇವುಗಳಿಂದ ಬೇಸತ್ತ ಜನರು ಪ್ರತ್ಯೇಕ ರಾಜ್ಯಗಳ ಬೇಡಿಕೆಗಳನ್ನಿಡುತ್ತಿದ್ದಾರೆ. ಇಂದಿನ ರಾಜಕೀಯ ನಾಯಕರು ಅಖಂಡ ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕಿದೆ. ಇಲ್ಲವಾದರೆ 1799ರಲ್ಲಿ ಟಿಪ್ಪು ಸುಲ್ತಾನ್‌ ನಂತರ ಬ್ರಿಟಿಷರು, ಮರಾಠರು, ಹೈದರಾಬಾದ್ ನಿಜಾಮ ಒಂದಾಗಿದ್ದರಿಂದ ಕರ್ನಾಟಕದ ವಿಭಜನೆಯಾದಂತಹ ಸಂದರ್ಭ ಮತ್ತೆ ಒದಗಬಹುದು’ ಎಂದು ಎಚ್ಚರಿಸಿದರು.

ಕರ್ನಾಟಕ ಏಕೀಕರಣವನ್ನು ವಿವರಿಸಿದ ವೈ.ಎಸ್.ವಿ. ದತ್ತ, ಕರ್ನಾಟಕ ಏಕೀಕರಣವಾಗಿ ಇಷ್ಟು ವರ್ಷವಾದರೂ ಇಲ್ಲಿ ಒಂದು ರೀತಿಯ ಏಕರೂಪತೆ ಬಂದಿಲ್ಲ. ಹೋಬಳಿಗಳು, ಗ್ರಾಮ ಪಂಚಾಯಿತಿಗಳ ಪರಿಧಿ ಹಾಗೂ ವಿಸ್ತಾರಗಳನ್ನು ಪುನರ್ ವಿಮರ್ಶೆ ಮಾಡಬೇಕಿದೆ. ಈ ಅಖಂಡ ಕರ್ನಾಟಕಕ್ಕೆ ಸುವ್ಯವಸ್ಥಿವಾದ ಆಡಳಿತವಿದ್ದಾಗ ಮಾತ್ರ ಸರ್ಕಾರ ಅಭಿವೃದ್ಧಿಗೆ ನೀಡುವ ಹಣವು ಸಮರ್ಪಕವಾಗಿ ವಿತರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷೆ ಮಲ್ಲಿಕಾ ಎಸ್.ಘಂಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT