ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಸೇವೆಗಳು ಸಕಾಲ ವ್ಯಾಪ್ತಿಗೆ: ಡಿಸಿಎಂ ಗೋವಿಂದ ಎಂ.ಕಾರಜೋಳ

Last Updated 7 ಜುಲೈ 2020, 13:33 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಪ್ರಮುಖ 9 ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸಕಾಲ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದರು.

ವಿಕಾಸಸೌಧದಲ್ಲಿ ಮಂಗಳವಾರ ಈ ಸೇವೆಗಳನ್ನು ಸಕಾಲ ಯೋಜನೆಗೆ ಒಳಪಡಿಸಲು ಚಾಲನೆ ನೀಡಿದ ನಂತರ ಮಾತನಾಡಿದ ಅವರು, ‘ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸುಲಿತ ಹಾಗೂ ಶೀಘ್ರವಾಗಿ ತಲುಪಿಸಬಹುದಾಗಿದೆ. ಈ ಸದುದ್ದೇಶದಿಂದ ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹಧನ, ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ, ಯುಪಿಎಸ್‍ಸಿ, ಕೆಎಎಸ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ, ಸಾಗರೋತ್ತರ ವಿದ್ಯಾರ್ಥಿ ವೇತನ ನೀಡುವ ಪ್ರಬುದ್ಧ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಯೋಜನೆಗಳನ್ನು ಸಕಾಲ ವ್ಯಾಪ್ತಿಗೊಳಪಡಿಸಲಾಗಿದೆ. ಫಲಾನುಭವಿಗಳು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ಡಾ.ರವಿಕುಮಾರ್ ಸುರಪುರ್, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಸಲಹೆಗಾರ ಇ.ವೆಂಕಟಯ್ಯ, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ ವಿ.ಶ್ರೀನಿವಾಸ,ಹೆಚ್ಚುವರಿ ನಿರ್ದೇಶಕ ನಾಗೇಶ್, ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮುಖ್ಯಸ್ಥ ಮಹೇಶ್ ಉಪಸ್ಥಿತರಿದ್ದರು.

ಉದ್ಯೋಗ ಸೃಜಿಸುವ ಯೋಜನೆಗಳನ್ನು ರೂಪಿಸಲುಸೂಚನೆ
ಬೆಂಗಳೂರು:
ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರಿಗೆ ಉದ್ಯೋಗ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುವಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.

ವಿಕಾಸಸೌಧದಲ್ಲಿ ಮಂಗಳವಾರ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್-19 ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿದ್ದು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಎಲ್ಲರಿಗೂ ಜಾಬ್ ಕಾರ್ಡ್ ನೀಡಿ ಎಲ್ಲರಿಗೂ ಕೆಲಸ ಒದಗಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರಿಗೆ ವರ್ಷದಲ್ಲಿ ಕಡ್ಡಾಯವಾಗಿ 100 ದಿನ ಕೆಲಸ ನೀಡಿ ಅವರ ಕೃಷಿ ಭೂಮಿಯಲ್ಲಿಯೂ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ 65 ಲಕ್ಷ ಜಾಬ್ ಕಾರ್ಡ್‍ದಾರಿದ್ದು, ಅವರಲ್ಲಿ 15 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಾಬ್ ಕಾರ್ಡ್‍ಗಳನ್ನು ನೀಡಿ ಗ್ರಾಮೀಣ ಪ್ರದೇಶದ ಎಲ್ಲಾ ಕುಟುಂಬಗಳನ್ನು ಈ ಸೌಲಭ್ಯದ ವ್ಯಾಪ್ತಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT