ಬೆಂಗಳೂರು: ‘ಪಿಎಸ್‌ಐ ಪರಶುರಾಮ್ ಸಾವಿಗೆ ನಾನು ಮತ್ತು ನನ್ನ ಪುತ್ರ ಕಾರಣ ಎಂಬ ಆರೋಪ ಸತ್ಯಕ್ಕೆ ದೂರವಾದುದು. ನಾನು ಯಾವ ಪೊಲೀಸರಿಂದಲೂ ಹಣ ಕೇಳಿಲ್ಲ’ ಎಂದು ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪರಶುರಾಮ್ ಸಾವಿನ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ತನಿಖೆಯ ಮೂಲಕ ಸತ್ಯಾಸತ್ಯತೆ ಹೊರಗೆ ಬರಲಿ. ಕಾನೂನಿಗೆ ನಾನು ತಲೆ ಬಾಗುತ್ತೇನೆ’ ಎಂದರು.
‘ಈ ಪ್ರಕರಣದಲ್ಲಿ ತಂದೆ, ಮಕ್ಕಳನ್ನು ಸೇರಿಸಬೇಕು ಎಂದು ಷಡ್ಯಂತ್ರ ಮಾಡಲಾಗುತ್ತಿದೆ’ ಎಂದು ಆರೋಪಿಸಿದ ಚನ್ನಾರೆಡ್ಡಿ, ‘ಸಿಐಡಿ ಅವರು ಕರೆ ಮಾಡಿದ ತಕ್ಷಣ ಹೋಗಿ ತನಿಖೆ ಸಹಕರಿಸುತ್ತೇನೆ. ತನಿಖಾ ವರದಿ ಬಂದ ಬಳಿಕ ಇದು ಷಡ್ಯಂತ್ರವೊ, ಸತ್ಯವೊ, ಅಸತ್ಯವೊ ಎನ್ನುವುದು ಗೊತ್ತಾಗಲಿದೆ’ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಎಫ್ಐಆರ್ ದಾಖಲಿಸಲು ವಿಳಂಬದ ವಿಚಾರ ಪೊಲೀಸರಿಗೆ ಬಿಟ್ಟಿದ್ದು. ಅದರಲ್ಲಿ ನಾನು ಭಾಗಿ ಆಗಿಲ್ಲ. ಆ ಕುರಿತು ಯಾರ ಜೊತೆಗೂ ಮಾತನಾಡಿಲ್ಲ’ ಎಂದರು.
‘ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೇನೆ. ನಾವೆಲ್ಲರೂ ಜೊತೆಗಿರುತ್ತೇವೆ, ಧೈರ್ಯವಾಗಿರುವಂತೆ ಅವರು ಹೇಳಿದರು. ಹಾಗೆಂದು, ಯಾವ ವಿಚಾರವನ್ನು ಅವರಿಗೆ ನಾನು ತಿಳಿಸಿಲ್ಲ. ಗುಪ್ತಚರ ಇಲಾಖೆಯಿಂದ ಅವರಿಗೆ ಮಾಹಿತಿ ಹೋಗಿರುತ್ತದೆ’ ಎಂದರು.