ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದ ಕುಟುಂಬಕ್ಕೆ ಜಿಲ್ಲಾಡಳಿತ ನೆರವು

Last Updated 20 ಜೂನ್ 2018, 17:49 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ಸಕ್ಕರೆ ಕಾರ್ಖಾನೆಗಳು ತಮಗೆ ಬಾಕಿ ಪಾವತಿಸದೆ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಅಧಿಕಾರಿಗಳಿಗೆ ಪತ್ರ ಬರೆದಿದ್ದ ತಾಲ್ಲೂಕಿನ ಲಿಂಗನಮಠ ಗ್ರಾಮದ ಮಾಟೊಳ್ಳಿ‌ ಕುಟುಂಬಕ್ಕೆ ಜಿಲ್ಲಾಡಳಿತ ಸಹಾಯಹಸ್ತ ಚಾಚಿದೆ.

ಬೆಳಗಾವಿ ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಮತ್ತು ತಹಶೀಲ್ದಾರ್ ದಿನಮಣಿ ಹೆಗ್ಡೆ, ಆ ಕುಟುಂಬದವರನ್ನು ಬುಧವಾರ ಭೇಟಿಯಾಗಿ ಮಾಹಿತಿ ಪಡೆದರು.‌ ಕೂಡಲೇ ಬಾಕಿ ಕೊಡಿಸುವುದಾಗಿ ಭರವಸೆ ನೀಡಿದರು.

‘2015–16ರಲ್ಲಿ ರಾಮದುರ್ಗ ತಾಲ್ಲೂಕಿನ ಉದಪುಡಿಯ ಶಿವಸಾಗರ ಕಾರ್ಖಾನೆಗೆ ಪೂರೈಸಿದ್ದ ಕಬ್ಬಿನ ಬಿಲ್‌ ₹ 40ಸಾವಿರ ಹಾಗೂ ಗೋಕಾಕ ತಾಲ್ಲೂಕಿನ ಹಿರೇನಂದಿಯಲ್ಲಿರುವ, ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಗೆ 2013–14ರಲ್ಲಿ ಲಾರಿ ಬಾಡಿಗೆ (ಕಬ್ಬು ಸಾಗಿಸಿದ್ದಕ್ಕೆ) ₹ 90ಸಾವಿರ ಬಾಕಿ ಬರಬೇಕು. ತಂದೆ ಅನಾರೋಗ್ಯಕ್ಕೀಡಾಗಿದ್ದರಿಂದ ವಿವಿಧೆಡೆ ₹ 7.50 ಲಕ್ಷ ಸಾಲ ಮಾಡಿದ್ದೇನೆ. ಜೀವನಕ್ಕೆ ಆಧಾರವಾಗಿದ್ದ ಲಾರಿಯನ್ನೂ ಮಾರಿದ್ದೇನೆ. ಇದರಿಂದಾಗಿ ಬದುಕುವುದೇ ದುಸ್ತರವಾಗಿದೆ’ ಎಂದು ರೈತ ಬಾಳಪ್ಪ ಮಾಟೊಳ್ಳಿ‌ ಅಧಿಕಾರಿಗಳೆದುರು ಅಳಲು ತೋಡಿಕೊಂಡರು.

‘ಸಮಸ್ಯೆಗಳಿಗೆ ಸಾವೊಂದೇ ಪರಿಹಾರವಲ್ಲ. ಬಾಕಿ ಹಣ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಆತ್ಮಹತ್ಯೆ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಅಧಿಕಾರಿಗಳು ಕೋರಿದರು.

ಆಸ್ಪತ್ರೆಗೆ ದಾಖಲು: ‘ರೈತ ಕುಟುಂಬಕ್ಕೆ ಧೈರ್ಯ ತುಂಬಿದ್ದೇವೆ. ಬಾಳಪ್ಪ ಅವರ ತಂದೆಯ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೌಭಾಗ್ಯಲಕ್ಷ್ಮಿ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿದ್ದ ಲಾರಿ ಬಾಡಿಗೆಯನ್ನು ಪಡೆಯಲಾಗಿದೆ. ಜೂನ್‌ 21ರಂದು ಆ ಕುಟುಂಬಕ್ಕೆ ₹ 1 ಲಕ್ಷ ತಲುಪಿಸಲಾಗುವುದು’ ಎಂದು ಎಸಿ ಕವಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT