ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿನೋಟಿಫೈ ತಪ್ಪಲ್ಲ, ಲಾಭ ಮಾಡಿಕೊಂಡರೆ ತಪ್ಪು: ಕುಮಾರಸ್ವಾಮಿ

Published : 28 ಸೆಪ್ಟೆಂಬರ್ 2024, 9:33 IST
Last Updated : 28 ಸೆಪ್ಟೆಂಬರ್ 2024, 9:33 IST
ಫಾಲೋ ಮಾಡಿ
Comments

ಬೆಂಗಳೂರು: ‘ಡಿನೋಟಿಫಿಕೇಷನ್ ಮಾಡುವ ಅಧಿಕಾರ ಸರ್ಕಾರಕ್ಕೆ, ಮುಖ್ಯಮಂತ್ರಿಗೆ ಇದೆ. ಡಿನೋಟಿಫಿಕೇಷನ್‌ ತಪ್ಪಲ್ಲ. ಆದರೆ ಅದರಿಂದ ಯಾರಿಗೆ ಲಾಭವಾಗಿದೆ ಎಂಬುದು ಮುಖ್ಯ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಕ್ಷದ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಡಿನೋಟಿಫಿಕೇಷನ್‌ ಮಾಡಿದ್ದೇ ಬೇರೆ, ಸಿದ್ದರಾಮಯ್ಯ ಅವರ ಡಿನೋಟಿಫಿಕೇಷನ್‌ ಬೇರೆ. ಕೆಸೆರೆ ಗ್ರಾಮದ ಪ್ರಕರಣ ಮತ್ತು ಗಂಗೇನಹಳ್ಳಿ ಪ್ರಕರಣದ ಮಧ್ಯೆ ಬಹಳ ವ್ಯತ್ಯಾಸವಿದೆ’ ಎಂದರು.

‘ನಿಮ್ಮ ಅತ್ತೆ ಹೆಸರಿನಲ್ಲಿ ಆ ಜಮೀನಿನ ಜಿಪಿಎ ಆಗಿದೆ ಎಂಬುದು ನಿಮಗೆ ಗೊತ್ತಿರಲಿಲ್ಲವೇ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ನನ್ನ ತಪ್ಪೇನೂ ಇಲ್ಲ. ಆ ಜಮೀನಿಗೆ ಸಂಬಂಧಿಸಿದಂತೆ ನಮ್ಮ ಅತ್ತೆ ಹೆಸರಿನಲ್ಲಿ ಜಿಪಿಎ ಆಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಅದಕ್ಕೂ ನನಗೂ ಸಂಬಂಧವೇ ಇಲ್ಲ’ ಎಂದರು.

ಭ್ರಷ್ಟ ಅಧಿಕಾರಿಯಿಂದ ತನಿಖೆ: ‘ಮಾಹಿತಿ ಸೋರಿಕೆ ಸಂಬಂಧ ರಾಜಭವನ ಸಚಿವಾಲಯದ ಪಾತ್ರದ ಕುರಿತು ತನಿಖೆ ನಡೆಸಲು ಅನುಮತಿ ನೀಡಿ ಎಂದು ಪತ್ರ ಬರೆದಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡದ ಐಜಿಪಿ ಎಂ.ಚಂದ್ರಶೇಖರ್ ರಾಜ್ಯದಲ್ಲಿ ಕರ್ತವ್ಯದಲ್ಲಿರುವುದೇ ಕಾನೂನುಬಾಹಿರ’ ಎಂದು ಅವರು ಹೇಳಿದರು.

‘ಈ ವ್ಯಕ್ತಿ ಹಿಮಾಚಲ ಪ್ರದೇಶ ಕೇಡರ್‌ನ ಅಧಿಕಾರಿ. ನಿಯೋಜನೆ ಮೇರೆಗೆ ಇಲ್ಲಿಗೆ ಬಂದವನು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಲ್ಲೇ ಉಳಿದುಕೊಂಡಿದ್ದಾನೆ. ಈತ ಮಹಾಭ್ರಷ್ಟ. ಈ ಹಿಂದೆ ಪಿಎಸ್‌ಎಲ್‌ ಭೂ ಹಗರಣದಲ್ಲಿ ಉದ್ಯಮಿಗಳು, ಜನ ಸಾಮಾನ್ಯರು ಮತ್ತು ಪೊಲೀಸ್‌ ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಿದ್ದಾನೆ. ಈ ಸಂಬಂಧ ಆತನ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅಂತಹ ವ್ಯಕ್ತಿ ರಾಜಭವನದಲ್ಲಿ ತನಿಖೆ ನಡೆಸುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

ನಾನು ಈಗ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ನಾನು ಸಿದ್ದರಾಮಯ್ಯನಂತೆ ಭಂಡ ಅಲ್ಲ. ಅಂತಹ ಸಮಯ ಬಂದರೆ ರಾಜೀನಾಮೆ ನೀಡುತ್ತೇನೆ
ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ರಾಜ್ಯ ಸರ್ಕಾರದಿಂದ ಪೊಲೀಸ್‌ ಅಧಿಕಾರಿಗಳ ದುರ್ಬಳಕೆ’

‘ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು, ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿದ್ದರೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಪೊಲೀಸ್‌ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕುಮಾರಸ್ವಾಮಿ ಆರೋಪಿಸಿದರು.

‘ಸರ್ಕಾರದಿಂದ ಬಂದ ಆದೇಶದಂತೆ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಪೊಲೀಸ್‌ ನನಗೆ ನೋಟಿಸ್‌ ನೀಡಿರಲಿಲ್ಲ. ನಾನೇ ಸ್ವಯಂಪ್ರೇರಿತವಾಗಿ ಹೋಗಿದ್ದೆ. ಅವರನ್ನೇ ಪ್ರಶ್ನೆ ಮಾಡಿ ಬಂದಿದ್ದೇನೆ. 21ರಂದೇ ನೋಟಿಸ್‌ ಸಿದ್ದಪಡಿಸಿದ್ದಾರೆ. ಕಿರಿಯ ಅಧಿಕಾರಿಗಳು, ‘ಸರ್‌ ನೋಟಿಸ್‌ಗೆ ಸಹಿ ಮಾಡಿಕೊಡಿ’ ಎಂದು ಕೇಳಿಕೊಂಡರು. ಅದಕ್ಕೆ ನೋಟಿಸ್‌ಗೆ ಸಹಿ ಮಾಡಿಕೊಟ್ಟೆ’ ಎಂದರು.

‘ಅಧಿಕಾರಿಗಳನ್ನು ಬಳಸಿಕೊಂಡು ನನ್ನನ್ನು ಹೆದರಿಲು ಯತ್ನಿಸಿದರೆ, ನಾನು ಹೆದರುವುದಿಲ್ಲ. ನನ್ನನ್ನು ಏನು ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT