ತುಮಕೂರು: ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರ ‘ದುಬಾರಿ’ ಮಾತುಗಳು ಅಧಿಕಾರಕ್ಕೆ ಕುತ್ತು ತಂದಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳು ಆರಂಭವಾದ ನಂತರ ಪಕ್ಷದ ಹೈಕಮಾಂಡ್ ವಿರುದ್ಧ ರಾಜಣ್ಣ ಮಾತುಗಳು ತೀಕ್ಷ್ಣವಾಗಿದ್ದವು. ಸಿದ್ದರಾಮಯ್ಯ ಅವರನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಹಾಗೂ ಅವರ ಪರವಾಗಿ ನಿಲ್ಲುವ ಅತ್ಯುತ್ಸಾಹದಲ್ಲಿ ವರಿಷ್ಠರನ್ನು ಪ್ರಶ್ನಿಸುವಂತಿದ್ದ ಹೇಳಿಕೆಗಳು ಈಗ ಮುಳುವಾಗಿ ಪರಿಣಮಿಸಿವೆ.

ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ರಾಜಣ್ಣ ಹೇಳಿಕೆಗಳು ಪಕ್ಷದ ವರಿಷ್ಠರಿಗೆ ತೀವ್ರ ಮುಜುಗರ ತರಿಸಿದ್ದವು. ವಿರೋಧ ಪಕ್ಷದವರಿಗೆ ‘ಆಹಾರ’ ಒದಗಿಸಿತ್ತು. ಮತ ಕಳವು ಬಗ್ಗೆ ಬೆಂಗಳೂರಿನಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ ಮರು ದಿನ ತುಮಕೂರಿನಲ್ಲಿ ಅದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದರು. ‘ಲೋಕಸಭೆ ಚುನಾವಣೆಗೆ ಮತಪಟ್ಟಿ ತಯಾರಿಸಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲವೇ? ಆಗ ಏಕೆ ಯಾರು ಮಾತನಾಡಲಿಲ್ಲ’ ಎಂದು ಪ್ರಶ್ನಿಸಿದ್ದರು. ಇಂದು ಒಂದು ರೀತಿಯಲ್ಲಿ ರಾಹುಲ್ ಗಾಂಧಿ ಅವರನ್ನೇ ಪ್ರಶ್ನಿಸಿದಂತಿದೆ ಎಂದು ಭಾವಿಸಲಾಗಿತ್ತು. ಈ ವಿಚಾರವೇ ಅವರ ತಲೆ ದಂಡಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಹಿರಿಯ ರಾಜಕಾರಣಿಯಾಗಿರುವ ರಾಜಣ್ಣ ಹಿಂದಿನಿಂದಲೂ ನೇರ, ನಿಷ್ಠುರ ಮಾತು, ನಡೆನುಡಿಗೆ ಹೆಸರಾದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದರು. ಅದರಲ್ಲೂ ಸಹಕಾರ ಸಚಿವರನ್ನಾಗಿ ಮಾಡಬೇಕು ಎಂದು ಕೇಳಿಕೊಂಡಿದ್ದರು. ಅವರ ಮಾತಿಗೆ ಮನ್ನಣೆಯೂ ಸಿಕ್ಕಿ, ಸಹಕಾರ ಸಚಿವರಾದರು.

ರಾಜಕೀಯವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿರುದ್ಧ ಸಮರ ಸಾರಿದ್ದರು. ಗೌಡರ ತವರು ನೆಲವಾದ ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು, ಅವರಿಗೆ ಮತ್ತಷ್ಟು ಬಲ ಬಂದಂತಾಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ‘ಶಕ್ತಿ’ ತೋರ್ಪಡಿಸಿದ್ದರು.

ಸಿದ್ದರಾಮಯ್ಯ ವಿಚಾರಕ್ಕಾಗಿ ಹೈಕಮಾಂಡ್ ಎದುರು ಹಾಕಿಕೊಂಡಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂಬ ಕೂಗು ಏಳುತ್ತಿದ್ದಂತೆ ರಾಜಣ್ಣ ಚುರುಕಾಗಿದ್ದರು. ಪಕ್ಷದ ವರಿಷ್ಠರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಲೇ ಬಂದಿದ್ದರು. ಇಂತಹ ಮಾತುಗಳು ಹೊರ ಬಂದಾಗಲೆಲ್ಲ ‘ರಾಜಣ್ಣ ಮೂಲಕ ಸಿದ್ದರಾಮಯ್ಯ ಹೇಳಿಸುತ್ತಿದ್ದಾರೆ. ಮುಖ್ಯಮಂತ್ರಿ ಮನಸ್ಸಿನಲ್ಲಿ ಇರುವುದು ರಾಜಣ್ಣ ಮೂಲಕ ಹೊರಗೆ ಬರುತ್ತಿದೆ. ಅವರ ಹೇಳಿಕೆಗಳು ಅದನ್ನು ಧ್ವನಿಸುತ್ತವೆ’ ಎಂದು ಪಕ್ಷದ ವಲಯದಲ್ಲಿ ಚರ್ಚೆಗಳು ನಡೆದಿದ್ದವು.

ಪಕ್ಷದ ಹೈಕಮಾಂಡ್ ವಿರುದ್ಧ ಏನೇ ಹೇಳಿಕೆ ಕೊಟ್ಟರೂ ‘ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲುತ್ತಾರೆ, ರಕ್ಷಣೆ ಮಾಡುತ್ತಾರೆ’ ಎಂಬ ಹುಂಬತನ ಮುಳುವಾಗಿ ಪರಿಣಮಿಸಿದೆ. ರಾಜಣ್ಣ ನೀಡುತ್ತಿದ್ದ ಹೇಳಿಕೆಗಳನ್ನು ರಾಜ್ಯ ನಾಯಕರು ಸಂಗ್ರಹಿಸಿ, ಹೈಕಮಾಂಡ್ ಗಮನಕ್ಕೆ ತರುತ್ತಲೇ ಬಂದಿದ್ದರು. ಮತ ಕಳವಿನ ವಿಚಾರದಲ್ಲೂ ನೀಡಿದ ಹೇಳಿಕೆಯನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿತ್ತು ಎನ್ನಲಾಗಿದೆ.

ಪಕ್ಷದ ವಿರುದ್ಧ ಮಾತು..

ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಮತ ಕಳವು ನಡೆದಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರೂ ಕಣ್ಣುಮುಚ್ಚಿ ಕುಳಿತಿದ್ದರೇ ಎಂದು ಕೆ.ಎನ್.ರಾಜಣ್ಣ ಪ್ರಶ್ನಿಸಿದರು. ಮತ ಕಳವಿನ ವಿರುದ್ಧ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಮರು ದಿನ ಈ ರೀತಿ ಹೇಳಿಕೆ ನೀಡಿದ್ದರು. ‘ಮತ ಕಳವಿನ ವಿಚಾರ ಮಾತನಾಡಲು ಹೋದರೆ ಮಾತನಾಡಬೇಕಾಗುತ್ತದೆ. ಅದು ಬೇರೆ–ಬೇರೆ ಆಗುತ್ತದೆ. ಲೋಕಸಭೆ ಚುನಾವಣೆ ನಡೆದದ್ದು ಮತಪಟ್ಟಿ ಸಿದ್ಧಪಡಿಸಿದ್ದು ನಮ್ಮ ಸರ್ಕಾರದ ಅವಧಿಯಲ್ಲೇ. ಎಲ್ಲರೂ ಆಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದರು. ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇದ್ದೇವಲ್ಲ ಎಂಬ ಬಗ್ಗೆ ನಾಚಿಕೆ ಆಗಬೇಕು. ನಮ್ಮ ಕಣ್ಣು ಮುಂದೆ ಅಕ್ರಮಗಳು ನಡೆದಿರುವುದನ್ನು ನೋಡಿದರೆ ನಮಗೆ ಅವಮಾನ ಆಗಬೇಕು’ ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದರು.

ಸುರ್ಜೇವಾಲ

ವಿರುದ್ಧವೂ ಕಿಡಿ ತುಮಕೂರು: ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ವಿರುದ್ಧವೂ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು. ‘ಅವರು ನನಗೇನು ತಾಕೀತು ಮಾಡುತ್ತಾರೆ’ ಎಂದು ಕೆಣಕಿದ್ದರು. ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡಿ ಸಚಿವರು ಶಾಸಕರ ಅಭಿಪ್ರಾಯ ಸಂಗ್ರಹಿಸುವ ಸಮಯದಲ್ಲಿ ಈ ರೀತಿ ಹೇಳಿಕೆ ನೀಡಿದ್ದರು. ‘ಸಿರ್ಜೇವಾಲಾ ನಡೆ ನನಗೆ ಸಮಾಧಾನ ತಂದಿಲ್ಲ’ ಎಂದು ಹೇಳಿದರು.

ವಿವಾದ ಸೃಷ್ಟಿಸಿದ ಮಧುಬಲೆ

ತುಮಕೂರು: ‘ನನ್ನನ್ನು ಮಧುಬಲೆಗೆ ಸಿಲುಕಿಸುವ ಪ್ರಯತ್ನ ನಡೆದಿದೆ’ ಎಂಬ ರಾಜಣ್ಣ ಹೇಳಿಕೆ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಒಂದು ರೀತಿಯಲ್ಲಿ ನಾಟಕೀಯ ಬೆಳವಣಿಗೆಗೂ ನಡೆದಿದ್ದವು. ಜಿಲ್ಲೆಯವರೇ ಆದ ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ನೆಲಮಂಗಲಕ್ಕೆ ಹುಡುಕಿಕೊಂಡು ಹೋಗಿ ‘ಮಧುಬಲೆ ಪ್ರಯತ್ನ’ದ ಬಗ್ಗೆ ತನಿಖೆ ನಡೆಸುವಂತೆ ಕೋರಿ ದೂರು ನೀಡಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆ ನಡೆಸಿ ಸಿಐಡಿ ತಂಡ ಸಾಕ್ಷಾಧಾರಗಳ ಕೊರತೆ ಕಾರಣ ಮುಂದಿಟ್ಟು ‘ಬಿ’ ವರದಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.