ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿಗೂ ಬರಲಿದೆ ಡಿಜಿಟಲ್‌ ಪೇಮೆಂಟ್‌ ಸಿಸ್ಟಂ

ನಾಲ್ಕು ತಿಂಗಳ ಒಳಗೆ ನಿರ್ವಾಹಕರ ಕೈ ಸೇರಲಿದೆ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಟಿಕೆಟ್ ಮಷಿನ್
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ಪಾವತಿ ಸಿಸ್ಟಂಗೆ ಕೆಎಸ್‌ಆರ್‌ಟಿಸಿ ಕೂಡಾ ತೆರೆದುಕೊಳ್ಳಲಿದೆ. ಇನ್ನು ನಾಲ್ಕು ತಿಂಗಳಲ್ಲಿ  ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಮಾಡಿ ಟಿಕೆಟ್ ನೀಡುವ ಮಷಿನ್‌ಗಳು ನಿರ್ವಾಹಕರ ಕೈಯಲ್ಲಿ ಇರಲಿವೆ.

ಬಿಎಂಟಿಸಿ ಬಸ್‌ಗಳಲ್ಲಿ ಎರಡು ವರ್ಷಗಳ ಹಿಂದೆ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಪದ್ಧತಿಯನ್ನು ಜಾರಿಗೊಳಿಸಿದ್ದರೂ ಬಳಿಕ ಸ್ಥಗಿತಗೊಂಡಿತು. ಪಾಸ್‌ ಇರುವವರಿಗಷ್ಟೇ ಸೀಮಿತವಾಗಿದೆ.  ವಾಯವ್ಯ ಸಾರಿಗೆ ನಿಗಮವು ಡಿಜಿಟಲ್‌ ಪಾವತಿ ಪದ್ಧತಿಯನ್ನು ಇತ್ತೀಚೆಗೆ ಅಳವಡಿಸಿಕೊಂಡಿತು. ಇದೀಗ ಕೆಎಸ್‌ಆರ್‌ಟಿಸಿ ಕೂಡಾ ಈ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಿದೆ. ಎನ್‌ಡಬ್ಲ್ಯುಆರ್‌ಟಿಸಿಯಲ್ಲಿರುವಂತೆ ಕ್ಯೂ ಆರ್‌ ಕೋಡ್‌ ಅನ್ನು ನಿರ್ವಾಹಕ ಪ್ರತ್ಯೇಕವಾಗಿ ಕುತ್ತಿಗೆಗೆ ನೇತು ಹಾಕಿಕೊಳ್ಳುವ ಬದಲು ಸ್ಕ್ಯಾನಿಂಗ್‌ ಮತ್ತು ಟಿಕೆಟ್‌ ನೀಡುವ ಒಂದೇ ಮಷಿನ್‌ ಅನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಲಿದೆ.

‘ನಮ್ಮ ನಿಗಮದಲ್ಲಿ 83 ಘಟಕಗಳಿವೆ. ಸದ್ಯ ಎಲೆಕ್ಟ್ರಿಕ್‌ ಟಿಕೆಟ್‌ ಮಷಿನ್‌ಗಳನ್ನು (ಇಟಿಎಂ) ಬಳಸಲಾಗುತ್ತಿದೆ. ಡಿಜಿಟಲ್‌ ಪೇಮೆಂಟ್‌ ಎನೇಬಲ್‌ (ಡಿಪಿಇ) ಇರುವ ಇಟಿಎಂಗಳ ಪೂರೈಕೆಯಾಗಬೇಕಿದೆ. 10 ಸಾವಿರ ಮಷೀನ್‌ಗಳು ಬೇಕಾಗಿದ್ದು, ಅದಕ್ಕಾಗಿ ಟೆಂಡರ್ ಕರೆಯಲಾಗಿದೆ. ಬಿಡ್‌ ಮಾಡಲು ಫೆ.18 ಕೊನೇ ದಿನವಾಗಿದೆ. ಬಳಿಕ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ಎಲ್ಲ ಘಟಕಗಳಿಗೆ ಈ ಮಷೀನ್‌ ಪೂರೈಸಲು ಕನಿಷ್ಠ 4 ತಿಂಗಳು ಬೇಕು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಫೋನ್‌ ಪೇ, ಗೂಗಲ್‌ ಪೇ ಸಹಿತ ಯುಪಿಐ ಆಧಾರಿತ ಪಾವತಿ ಸ್ವೀಕರಿಸಿದರೆ ಆ ಮೊತ್ತವು ನೇರವಾಗಿ ಸಂಬಂಧಪಟ್ಟ ಡಿಪೊ ಖಾತೆಗೆ ಜಮೆ ಆಗಲಿದೆ. ಡಿಜಿಟಲ್ ಪಾವತಿ ಜತೆಗೆ ನಗದು ನೀಡಿ ಟಿಕೆಟ್‌ ಪಡೆಯುವ ಪದ್ಧತಿಯೂ ಮುಂದುವರಿಯಲಿದೆ’ ಎಂದು ತಿಳಿಸಿದ್ದಾರೆ.

‘ಫೋನ್‌ ಪೇ, ಗೂಗಲ್‌ ಪೇ ಮಾಡಿ ಟಿಕೆಟ್‌ ಪಡೆಯಲು ಸಾಧ್ಯವಾದರೆ ಚಿಲ್ಲರೆಗಾಗಿ ತಡಕಾಡುವ, ಗಲಾಟೆ ಮಾಡುವ ಪರಿಸ್ಥಿತಿ ತಪ್ಪಲಿದೆ. ನಾನೇ ವಿವಿಧಡೆ ಸಂಚರಿಸುವಾಗ ಚಿಲ್ಲರೆ ಇಲ್ಲದಾಗ  ಬಸ್‌ ನಿರ್ವಾಹಕರು ಟಿಕೆಟ್‌ ಹಿಂಬದಿ ಬರೆದು, ಆಮೇಲೆ ಚಿಲ್ಲರೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ನಾನು ಇಳಿಯುವ ಗಡಿಬಿಡಿಯಲ್ಲಿ ಚಿಲ್ಲರೆ ಮರೆತು, ಬಸ್‌ ಮುಂದಕ್ಕೆ ಹೋದ ಮೇಲೆ ನೆನಪು ಆಗಿದ್ದಿದೆ. ಡಿಜಿಟಲ್‌ ಪಾವತಿಯಿಂದ ಈ ಸಮಸ್ಯೆಗಳೆಲ್ಲ ತಪ್ಪಲಿದೆ ’ ಎಂದು ಬಸ್‌ ಪ್ರಯಾಣಿಕ ರಾಜಾಜಿನಗರದ ಎಚ್‌.ಸಿ. ರಮೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಏಪ್ರಿಲ್‌ ಅಂತ್ಯಕ್ಕೆ ಡಿಜಿಟಲ್‌ ಪೇಮೆಂಟ್‌ ಮಷಿನ್‌

ಡಿಜಿಟಲ್‌ ಪೇಮೆಂಟ್‌ ಮಷೀನ್‌ ಖರೀದಿಗಾಗಿ ಟೆಂಡರ್‌ ಕರೆಯಲಾಗಿತ್ತು. ಸಿಂಗಲ್‌ ಬಿಡ್‌ ಆಗಿದ್ದರಿಂದ ಅದನ್ನು ರದ್ದುಗೊಳಿಸಿ ಮರು ಟೆಂಡರ್‌ ಕರೆಯಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಏಪ್ರಿಲ್‌ ಅಂತ್ಯಕ್ಕೆ ಡಿಜಿಟಲ್‌ ಪೇಮೆಂಟ್‌ ಎನೇಬಲ್‌ ಟಿಕೆಟ್‌ ಮಷೀನ್‌ ಬರಲಿದೆ. ಆರಂಭದಲ್ಲಿ ಒಂದು ತಿಂಗಳು ಕೆಎಸ್‌ಆರ್‌ಟಿಸಿಯ ಒಂದು ವಿಭಾಗದಲ್ಲಿ ಈ ವ್ಯವಸ್ಥೆ ಅಳವಡಿಸುತ್ತೇವೆ. ಅದರ ಮುಂದಿನ ತಿಂಗಳು ಉಳಿದ ಎಲ್ಲ 16 ವಿಭಾಗಗಳಲ್ಲಿ ಏಕಕಾಲಕ್ಕೆ ಜಾರಿಗೆ ತರುತ್ತೇವೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT